ಶಾಲೆಯಲ್ಲಿ ಶಿಕ್ಷಕರು ಬೈದಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ (Student Sucide) ಮಾಡಿಕೊಂಡಿರುವ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ. 16 ವರ್ಷದ ವಿದ್ಯಾರ್ಥಿ ಶೌರ್ಯ ಪಾಟೀಲ್ ಡೆತ್ನೋಟ್ (Death Note) ಬರೆದಿಟ್ಟು ದೆಹಲಿಯ ರಾಜೇಂದ್ರ ಮೆಟ್ರೋ ಸ್ಟೇಷನ್ನ (Rajendra Metro Station) ಎರಡನೇ ಪ್ಲಾಟ್ಫಾರ್ಮ್ನಲ್ಲಿ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ. ವಿದ್ಯಾರ್ಥಿಗೆ ಶಿಕ್ಷಕರು ಮಾನಸಿಕ ಒತ್ತಡ (Mental Torcher) ಹಾಗೂ ಅವಮಾನಿಸಿದ್ದರು ಎಂದು ಮೃತ ವಿದ್ಯಾರ್ಥಿಯ ಪೋಷಕರು ಆರೋಪಿಸಿದ್ದಾರೆ.
ಮೂವರು ಶಿಕ್ಷಕರ ವಿರುದ್ಧ ದೂರು
ಮೃತ ವಿದ್ಯಾರ್ಥಿ ಶೌರ್ಯ ತಂದೆ ಪ್ರದೀಪ್ ಪಾಟೀಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಮೂವರು ಶಿಕ್ಷಕರು ಹಾಗೂ ಶಾಲೆಯ ಪ್ರಾಂಶುಪಾಲರ ವಿರುದ್ಧ ಎಫ್ಐಆರ್ ದಾಖಲಾಗಿದೆ. ನ್ಯಾಯಕ್ಕಾಗಿ ಮೃತ ವಿದ್ಯಾರ್ಥಿಯ ಪೋಷಕರು, ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದ ಶಾಲೆಯ ಎದುರು ನಮ್ಮ ಮಗನ ಸಾವಿಗೆ ನ್ಯಾಯ ಬೇಕು ಎಂದು ಪ್ರತಿಭಟನೆ ನಡೆಸಿ ಶಿಕ್ಷಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇನ್ನು, ಮಗನ ಸಾವಿನ ಬಗ್ಗೆ ನೋವಿನಿಂದಲೇ ಮಾತನಾಡಿದ ತಂದೆ ಪ್ರದೀಪ್ ಪಾಟೀಲ್, ನನ್ನ ಮಗ ಶಿಕ್ಷಕರ ಕಿರುಕುಳದ ಬಗ್ಗೆ ಒಂದು ವರ್ಷದಿಂದ ಹೇಳುತ್ತಲೇ ಇದ್ದ, ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಗೆ ಹೇಳಿದರೆ, ನಿಮ್ಮ ಮಗ ಓದಿನಲ್ಲಿ ಬಹಳ ಹಿಂದೆ ಇದ್ದಾನೆ. ತರಗತಿಯಲ್ಲಿ ಪಾಠದ ಬಗ್ಗೆ ಗಮನಹರಿಸಬೇಕು ಎಂದು ಹೇಳಿ ವಿಷಯವನ್ನ ತಳ್ಳಿ ಹಾಕುತ್ತಿದ್ದರು ಎಂದು ಹೇಳಿದ್ರು.
ಇನ್ನು ಮೃತ ಶೌರ್ಯ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವ ದಿನ, ಶಾಲೆಯಲ್ಲಿ ಶಿಕ್ಷಕರಿಂದ ಅವಮಾನಕ್ಕೊಳಗಾಗಿದ್ದ ಎಂದು ಮೃತ ವಿದ್ಯಾರ್ಥಿಯ ಸ್ನೇಹಿತರು ತಿಳಿಸಿದ್ದಾರೆ. ಶಿಕ್ಷಕರು ನೀನು ಡ್ಯಾನ್ಸ್ ಮಾಡುವಾಗ ಬೇಕಂತಲೇ ಬೀಳುತ್ತಿಯಾ, ಅತಿಯಾಗಿ ನಾಟಕ ಮಾಡುತ್ತಿಯಾ ಎಂದು ಹೇಳಿ ಆತನನ್ನ ಡ್ಯಾನ್ಸ್ ತಂಡದಿಂದ ತೆಗೆದುಹಾಕಿದ್ದರು, ಇದರಿಂದ ಶೌರ್ಯ ಮನನೊಂದು ಅಳುತ್ತಿದ್ದರೂ, ಕ್ಯಾರೇ ಅನ್ನ ಶಿಕ್ಷಕರೊಬ್ಬರು ನೀನು ಎಷ್ಟು ಬೇಕಾದರೂ ಅಳು, ನಂಗೇನು ಎಂದು ಪ್ರಾಂಶುಪಾಲರ ಮುಂದೆ ಗದರಿದ್ದರು ಎಂದು ಸ್ನೇಹಿತರು ಹೇಳಿಕೆ ನೀಡಿದ್ದಾರೆ.
ವಿದ್ಯಾರ್ಥಿ ಬರೆದ ಡೆತ್ನೋಟ್ನಲ್ಲಿ ಏನಿದೆ?
ಇನ್ನು, ಮೆಟ್ರೋ ನಿಲ್ದಾಣದಲ್ಲಿ ಮೃತ ವಿದ್ಯಾರ್ಥಿ ಶೌರ್ಯ ಪಾಟೀಲ್ ಬ್ಯಾಗ್ನಲ್ಲಿ ಆತ ಬರೆದಿಟ್ಟಿದ್ದ ಡೆತ್ನೋಟ್ ಪತ್ತೆಯಾಗಿದೆ. ಡೆತ್ನೋಟ್ನಲ್ಲಿ ಶಿಕ್ಷಕರ ಕಿರುಕುಳದಿಂದ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಬರೆದಿದ್ದಾನೆ.
‘ಅಮ್ಮಾ ನನನ್ನು ಕ್ಷಮಿಸಿಬಿಡು, ನಾನು ಸಾಕಷ್ಟು ಬಾರಿ ನಿಮ್ಮ ಹೃದಯವನ್ನ ಒಡೆದಿದ್ದೇನೆ. ಇದು ಲಾಸ್ಟ್ ಟೈಮ್, ನನ್ನನ್ನು ಕ್ಷಮಿಸಿ ಬಿಡು. ಶಾಲೆಯ ಶಿಕ್ಷಕರು ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ. ನನ್ನ ಕೊನೆಯ ಆಸೆ ಏನೆಂದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ, ನನಗೆ ಬಂದ ಸ್ಥಿತಿ ಬೇರೆಯಾವೊಬ್ಬ ವಿದ್ಯಾರ್ಥಿಗೂ ಬರಬಾರದು.
ನನ್ನ ದೇಹದಲ್ಲಿ ಯಾವುದಾದರೂ ಒಂದು ಅಂಗ ಕೆಲಸ ಮಾಡಿದರೆ ಅಥವಾ ಕೆಲಸ ಮಾಡುವ ಸ್ಥಿತಿಯಲ್ಲಿದ್ದರೇ, ದಯವಿಟ್ಟು, ಅದನ್ನ ಅಗತ್ಯವಿರುವ ಯಾರಿಗಾದರೂ ದಾನ ಮಾಡಿ ಎಂದು 16 ವರ್ಷದ ಮೃತ ವಿದ್ಯಾರ್ಥಿ ತನ್ನ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾನೆ. ಸದ್ಯ, ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿಕ್ಷಕರ ಹಾಗೂ ಶಾಲೆ ಆಡಳಿತ ಮಂಡಳಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.


























