ಮಂಜೇಶ್ವರ ಠಾಣಾ ವ್ಯಾಪ್ತಿಯ ಕಡಂಬಾರ್ ಎಂಬಲ್ಲಿ ಯುವ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತಪಟ್ಟವರು ಕಡಂಬಾರಿನ ಅಜಿತ್ ( 35) ಮತ್ತು ಪತ್ನಿ ಶ್ವೇತಾ ( 27).ಅಜಿತ್ ಪೈಂಟಿಂಗ್ ಕಾರ್ಮಿಕ ರಾಗಿದ್ದು, ಶ್ವೇತಾ ವರ್ಕಾಡಿ ಬೇಕರಿ ಜಂಕ್ಷನ್ ಖಾಸಗಿ ಶಾಲಾ ಶಿಕ್ಷಕಿ ಯಾಗಿದ್ದರು.
ಸೋಮವಾರ ಘಟನೆ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿ ಇದ್ದ ಇಬ್ಬರನ್ನು ದೇರಳ ಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಜಿತ್ ರಾತ್ರಿ ಹಾಗೂ ಶ್ವೇತಾ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.
ಸ್ಥಳೀಯರ ಮಾಹಿತಿ ಪ್ರಕಾರ, ದಂಪತಿ ಬೇರೊಬ್ಬ ಮಹಿಳೆಯ ಚಿನ್ನವನ್ನು ಪಡೆದು ಅಡವಿಟ್ಟಿದ್ದರಂತೆ. ಅದನ್ನು ಮರಳಿಸದೇ ಇದ್ದುದರಿಂದ ಚಿನ್ನವನ್ನು ಮರಳಿಸುವಂತೆ ಒತ್ತಡ ಹೇರಿದ್ದರು. ಮನೆಗೆ ಬಂದು ಕೇಳಿದ್ದರಿಂದ ಮರ್ಯಾದೆಗಂಜಿ ದಂಪತಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಸೋಮವಾರ ಅಜಿತ್ ಮೂರು ವರ್ಷದ ತನ್ನ ಮಗ ಸಹಿತ ಬಂದ್ಯೋಡಿ ನಲ್ಲಿರುವ ಸಹೋದರಿ ಮನೆಗೆ ಬಂದಿದ್ದು, ಬೇರೆ ಕಡೆಗೆ ತೆರಳಲಿದ್ದು, ಮಗನನ್ನು ನೋಡಿ ಕೊಳ್ಳುವಂತೆ ಹೇಳಿ ತೆರಳಿದ್ದರು ಎನ್ನಲಾಗಿದೆ. ಮಗನನ್ನು ಸಹೋದರಿ ಮನೆಯಲ್ಲಿ ಬಿಟ್ಟು ಮರಳಿದ ಅಜಿತ್ ಹಾಗೂ ಪತ್ನಿ ಶ್ವೇತಾ ವಿಷ ಸೇವಿಸಿದ್ದಾರೆ. ಬಿದ್ದಿದ್ದ ಇಬ್ಬರನ್ನು ಪರಿಸರವಾಸಿಗಳು ಗಮನಿಸಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರೂ ಮೃತ ಪಟ್ಟಿದ್ದಾರೆ. ಆರ್ಥಿಕ ಮುಗ್ಗಟ್ಟು ಕಾರಣ ಎಂದು ಪೊಲೀಸರ ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ. ಮಂಜೇಶ್ವರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.