ಕಾಸರಗೋಡು: ಇಲ್ಲಿನ ಅಶ್ವಿನಿ ನಗರದಲ್ಲಿರುವ ಚರ್ಮ ಹಾಗೂ ಮಕ್ಕಳ ತಪಾಸಣಾ ಕ್ಲಿನಿಕ್ ಒಂದರಲ್ಲಿ ಅಗ್ನಿ ಅವಘಡ ಉಂಟಾಗಿ ಸುಮಾರು 25 ಲಕ್ಷ ರೂ. ನಷ್ಟವಾದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ.
ತಡರಾತ್ರಿ ಕ್ಲಿನಿಕ್ ನಲ್ಲಿ ಹೊಗೆ ಕಂಡುಬಂದಿದ್ದು, ಸಮೀಪದ ಹೊಟೇಲ್ ಕಾರ್ಮಿಕರು ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅಪಾಯ ತಪ್ಪಿಸಿದರು.
ನಾಲ್ಕು ಕೋಣೆಗಳನ್ನು ಹೊಂದಿರುವ ಕ್ಲಿನಿಕ್ ನೊಳಗೆ ದಟ್ಟ ಹೊಗೆಯು ಕಾರ್ಯಾಚರಣೆಗೆ ಅಡಚಣೆಯಾದರೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಕ್ಲಿನಿಕ್ ನಲ್ಲಿದ್ದ ಫ್ಯಾನ್, ಕಂಪ್ಯೂಟರ್ ಗಳು, ಫರ್ನಿಚರ್, ಫ್ರಿಡ್ಜ್, ಕ್ಲಿನಿಕ್ ಉಪಕರಣಗಳು, ಔಷಧಿಗಳು, ಎ.ಸಿ ಮೊದಲಾದವು ಬೆಂಕಿಗಾಹುತಿಯಾಗಿದೆ.
ಈ ಕಟ್ಟಡದಲ್ಲಿ ಹೊಟೇಲ್, ಕಂಪ್ಯೂಟರ್ ಸಂಸ್ಥೆ, ದಂತ ಚಿಕಿತ್ಸಾಲಯ, ಹಣಕಾಸು ಸಚಿವಾಲಯ, ಲಾಡ್ಜಿಂಗ್ ಮೊದಲಾದ 15 ಸಂಸ್ಥೆಗಳು ಈ ಕಾರ್ಯಾಚರಿಸುತ್ತಿದೆ. ಈ ಕಟ್ಟಡದ ಕೆಳ ಅಂತಸ್ತಿನಲ್ಲಿ ಕ್ಲಿನಿಕ್ ಕಾರ್ಯಾಚರಿಸುತ್ತಿದೆ. ಸುಮಾರು 25 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ ಅನಾಹುತಕ್ಕೆ ಕಾರಣ ಎಂದು ಶಂಕಿಸಲಾಗಿದೆ.