ಮಂಗಳೂರು: ವಿವಾಹವಾಗುವುದಾಗಿ ನಂಬಿಸಿ ಸಹಪಾಠಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ ಆರೋಪದಲ್ಲಿ ಬಂಧಿತನಾಗಿರುವ ಶ್ರೀಕೃಷ್ಣ ಜೆ. ರಾವ್‌ಗೆ, ಜಾಮೀನು ನೀಡುವ ಕುರಿತು ಸಲ್ಲಿಸಲಾಗಿದ್ದ ಅರ್ಜಿಯನ್ನು ಮಂಗಳೂರು ನಗರದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾ ಮಾಡಿದೆ.
ನ್ಯಾಯಾಧೀಶರು ಉಭಯ ಪಕ್ಷಗಳ ವಾದ-ವಿವಾದಗಳನ್ನು ಆಲಿಸಿ, ಸಲ್ಲಿಸಲಾದ ಲಿಖಿತ ವಾದಾಂಶ ಹಾಗೂ ಕಾನೂನು ಉಲ್ಲೇಖಗಳನ್ನು ಪರಿಶೀಲಿಸಿದ ನಂತರ, ಇಂದು ಅಂತಿಮ ತೀರ್ಪು ನೀಡಿದ್ದು, ಆರೋಪಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದು ಅರ್ಜಿಯನ್ನು ತಳ್ಳಿಹಾಕಿದ್ದಾರೆ.
ಪ್ರಕರಣದ ಹಿನ್ನೆಲೆ:
ಆರೋಪಿಯು ವಿವಾಹಕ್ಕೆ ನಿರಾಕರಿಸಿದ್ದ ಹಿನ್ನೆಲೆಯಲ್ಲಿ, ಸಂತ್ರಸ್ತೆ ಜೂನ್ 24ರಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ನಂಬಿಕೆ ದ್ರೋಹದ ಅಡಿಯಲ್ಲಿ ದೂರು ದಾಖಲಿಸಿದ್ದರು. ಜುಲೈ 1ರಂದು ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಜುಲೈ 4ರಂದು ಮೈಸೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದ. ಬಳಿಕ ನ್ಯಾಯಾಲಯ ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.
ಈ ಪ್ರಕರಣ ಸಂಬಂಧ ಜುಲೈ 19ರಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿದ್ದು, ಎರಡೂ ಪಕ್ಕದ ವಕೀಲರು ತಲಾ ಮೂರು ಕಾನೂನು ಉಲ್ಲೇಖಗಳೊಂದಿಗೆ ವಾದ ಮಂಡಿಸಿದ್ದರು. ತೀರ್ಪನ್ನು ಜುಲೈ 25ಕ್ಕೆ ನಿಗದಿಪಡಿಸಲಾಗಿತ್ತು.
ನ್ಯಾಯಾಲಯದ ಈ ತೀರ್ಪು ಪ್ರಕರಣದ ಗಂಭೀರತೆಯನ್ನು ಎತ್ತಿ ತೋರಿಸಿದ್ದು, ನ್ಯಾಯಾಂಗದ ಪ್ರಾಮಾಣಿಕತೆಗೆ ಮತ್ತೊಂದು ಉದಾಹರಣೆ ನೀಡಿದೆ.