ನವದೆಹಲಿ: ಟೆಂಪೋದಲ್ಲಿ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳುವ ವಿಚಾರದಲ್ಲಿ ನಡೆದ ಜಗಳದಲ್ಲಿ ಮಗನೊಬ್ಬ ತನ್ನ ತಂದೆಯನ್ನೇ ಗುಂಡಿಕ್ಕಿ ಹತ್ಯೆಗೈದಿರುವ ಆಘಾತಕಾರಿ ಘಟನೆಯೊಂದು ಉತ್ತರ ದೆಹಲಿಯ ತಿಮಾರ್ಪುರ ಪ್ರದೇಶದಲ್ಲಿ ಶುಕ್ರವಾರ(ಜೂ.27) ನಡೆದಿದೆ.
ಮೃತ ವ್ಯಕ್ತಿಯನ್ನು ಸಿಐಎಸ್‌ಎಫ್‌ನ ನಿವೃತ್ತ ಸಬ್-ಇನ್ಸ್‌ಪೆಕ್ಟರ್ ಸುರೇಂದ್ರ ಸಿಂಗ್(60) ಎಂದು ಗುರುತಿಸಲಾಗಿದೆ, ಘಟನೆಗೆ ಸಂಬಂಧಿಸಿ ಆರೋಪಿ ದೀಪಕ್ (26) ನನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ದೆಹಲಿಯಲ್ಲಿ ಸಿಐಎಸ್‌ಎಫ್ ನಲ್ಲಿ ಸಬ್-ಇನ್ಸ್‌ಪೆಕ್ಟರ್ ಆಗಿದ್ದ ಸುರೇಂದ್ರ ಸಿಂಗ್ ಕಳೆದ ಆರು ತಿಂಗಳ ಹಿಂದೆಯಷ್ಟೇ ನಿವೃತ್ತರಾಗಿದ್ದರು ಮೂಲತಃ ಉತ್ತರಾಖಂಡದವರಾಗಿದ್ದ ಅವರು ತಮ್ಮ ಊರಿಗೆ ಮರಳಲು ಸಿದ್ಧತೆ ನಡೆಸಿದ್ದರು ಅದರಂತೆ ಶುಕ್ರವಾರ ಒಂದು ಟೆಂಪೋ ಒಂದನ್ನು ಬಾಡಿಗೆಗೆ ಪಡೆದು ತಮ್ಮ ಮನೆಯ ಸಾಮಗ್ರಿಗಳನ್ನು ತುಂಬಿಸಿ ಊರಿನ ಕಡೆ ಹೊರಡಲು ತಯಾರಿ ನಡೆಸುತ್ತಿದ್ದ ವೇಳೆ ತಂದೆ ಹಾಗೂ ಮಗನ ನಡುವೆ ಟೆಂಪೋ ದಲ್ಲಿ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದಿದೆ. ಇದರಿಂದ ಕುಪಿತಗೊಂಡ ಮಗ ತಂದೆಯ ಸರ್ವಿಸ್ ರಿವಾಲ್ವರ್ ನಿಂದ ತಂದೆಯ ಹಣೆಗೆ ಗುಂಡಿಕ್ಕಿದ್ದಾನೆ,
ಇನ್ನು ಗುಂಡಿನ ಸದ್ದು ಕೇಳುತ್ತಿದ್ದಂತೆ ಗಸ್ತಿನಲ್ಲಿ ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಓಡಿ ಬಂದು ನೋಡಿದಾಗ ವ್ಯಕ್ತಿಯೊಬ್ಬರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟು ಹೊತ್ತಿಗಾಗಲೇ ಸುರೇಂದ್ರ ಸಿಂಗ್ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಘಟನೆ ನಡೆದ ಸ್ಥಳದಲ್ಲೇ ಆರೋಪಿ ದೀಪಕ್ ನನ್ನು ಪೊಲೀಸರು ಬಂಧಿಸಿದ್ದು ಜೊತೆಗೆ ಆತನ ಕೈಯಲ್ಲಿದ್ದ ಬಂದೂಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ.