ಪುತ್ತೂರು: ಕಳೆದ 9 ವರ್ಷಗಳ ಹಿಂದೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಿಬ್ಬರನ್ನು ಪುತ್ತೂರಿನ ನ್ಯಾಯಾಲಯ ದೋಷ ಮುಕ್ತಗೊಳಿಸಿ ಬಿಡುಗಡೆಗೊಳಿಸಿದೆ.
2016ರ ಜುಲೈ 25ರಂದು ಕಡಬ ತಾಲೂಕು ಬಂಟರ ಗ್ರಾಮದ ಚಡವು ಎಂಬಲ್ಲಿ, ಆರೋಪಿಗಳಿಬ್ಬರು, ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ತೀರ್ಥೇಶ್ ಎಂಬವರನ್ನು ತಡೆದು ನಿಲ್ಲಿಸಿ ಅವರ ಮೇಲೆ ಚೂರಿಯಿಂದ ಹಲ್ಲೆ ನಡೆಸಿ ಗಾಯಗೊಳಿಸಿ ಕೊಲೆ ಮಾಡುವುದಾಗಿ ಬೆದರಿಸಿದ್ದರು. ಆರೋಪಿಗಳಾದ ಕಡಬ ಮಾರ್ದಾಳ ನಿವಾಸಿಗಳಾದ ಅಬ್ದುಲ್ ರಝಕ್ ಹಾಗೂ ಅಬ್ದುಲ್ ಕರೀಂ ಎಂಬವರ ವಿರುದ್ಧ ಕಡಬ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ಸಾಬೀತುಪಡಿಸಲು ಅಭಿಯೋಜನ ಪಕ್ಷವು ವಿಫಲವಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಯೋಗಿಂದ್ರ ಶೆಟ್ಟಿ ಅವರು ಆರೋಪಿಗಳಿಬ್ಬರನ್ನು ದೋಷ ಮುಕ್ತಗೊಳಿಸಿ, ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ. ಆರೋಪಿಗಳ ಪರವಾಗಿ ಹಿರಿಯ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಸಾತ್ವಿಕ್ ಆರಿಗ, ಅಶ್ರಫ್ ಅಗ್ನಾಡಿ ವಾದಿಸಿದ್ದರು.