ಗಣೇಶ್ ಎನ್. ಕಲ್ಲರ್ಪೆ
ಪುತ್ತೂರು: ರಿಷಬ್ ಶೆಟ್ಟಿ ಅವರ ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆ ನೋಡದವರು ಯಾರು? ಅದನ್ನು ಆಸ್ವಾದಿಸಿ ಖುಷಿ ಪಡದವರು ಯಾರು? ಅದೇ ಮಾದರಿಯ ಹೊಸ ಸಿನಿಮಾ ಸ್ಕೂಲ್ ಲೀಡರ್.
ಕಾಸರಗೋಡು ಹಿಪ್ರಾ ಶಾಲೆಯಲ್ಲಿ ಗಡಿನಾಡ ಶಾಲೆಯನ್ನು ಉಳಿಸಲು ಹೋರಾಟ, ಪಾದೆಕಲ್ಲು ಪ್ರೌಢಶಾಲೆಯಲ್ಲಿ ಶಿಕ್ಷಕರನ್ನು ತರಿಸುವ ವಿದ್ಯಾರ್ಥಿಗಳ ಪ್ರಯತ್ನ. ಕಾಸರಗೋಡು ಹಿಪ್ರಾ ಶಾಲೆ ಹೈಪ್ರೊಫೈಲ್ಡ್ ಫಿಲಂ, ಆದರೆ ಪಾದೆಕಲ್ಲು ಪ್ರೌಢಶಾಲೆ ಅಥವಾ ಸ್ಕೂಲ್ ಲೀಡರ್ ಸಣ್ಣ ಬಜೆಟಿನ ಸುಂದರ ಸಿನಿಮಾ. ಅಲ್ಲಿ ಅನಂತ್’ನಾಗ್ ವಕೀಲರಾಗಿ ಪ್ರವೇಶಿಸಿದರೆ, ಇಲ್ಲಿ ರಮೇಶ್ ಭಟ್ ಅವರು ಶಿಕ್ಷಣ ಮಂತ್ರಿಯಾಗಿ ಸಿನಿಮಾವನ್ನು ದಡ ತಲುಪಿಸುತ್ತಾರೆ.
ಒಟ್ಟಿನಲ್ಲಿ ಹೇಳಬೇಕಾದರೆ ಸಿನಿಮಾ ಸಾಗುವ 2.15 ಗಂಟೆಯೂ ಫುಲ್ ಮನರಂಜನೆ ಗ್ಯಾರೆಂಟಿ. ಸದಾ ಹಾಸ್ಯದಿಂದಲೇ ಮಿಂಚುವ ಹೆಡ್’ಮಾಷ್ಟ್ರಾಗಿ ದೀಪಕ್ ರೈ ಪಾಣಾಜೆ, ಕನ್ನಡ ಪಂಡಿತರಾಗಿ ಅರವಿಂದ್ ಬೋಳಾರ್ ಅವರದ್ದು ಗಂಭೀರತೆಯ ಜೊತೆಗೆ ತಿಳಿಹಾಸ್ಯದ ಲೇಪನ. ಎಲ್ಲೂ ಕೂಡ ಕಥೆಗೆ ಲೋಪವಾಗದಂತೆ ಹಾಸ್ಯ – ಗಂಭೀರತೆಯನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗಿದ್ದಾರೆ. ಪಾತ್ರಕ್ಕೆ ನ್ಯಾಯ ನೀಡುವಲ್ಲಿ ಇಬ್ಬರೂ ಸೈ ಎನಿಸಿಕೊಳ್ಳುತ್ತಾರೆ. ಬೋಜರಾಜ್ ವಾಮಂಜೂರು ಅವರು ಹೊಯಿಗೆ ಪ್ರಕಾಶನಾಗಿ ಸಂಪೂರ್ಣ ಕಾಮಿಡಿ ಪಾತ್ರದಲ್ಲಿ ಕಚಗುಳಿ ಇಡುತ್ತಾರೆ. ಹಿರಿಯ ನಟ ರಮೇಶ್ ಭಟ್ ಅವರು ಪಾತ್ರವನ್ನು ನಿಭಾಯಿಸಿದ ಚಾಕಚಕ್ಯತೆ ಬಗ್ಗೆ ಮಾತನಾಡುವಂತೆಯೇ ಇಲ್ಲ. ಇನ್ನು ಮಕ್ಕಳ ಬಗ್ಗೆ ಹೇಳುವುದಾದರೆ, ಎಲ್ಲರ ಅಭಿನಯಕ್ಕೂ ಫುಲ್ ಮಾರ್ಕ್ಸ್. ಪೆನ್ಸಿಲ್ ಬಾಕ್ಸ್’ನಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿ ಕಾಣುವ ದೀಕ್ಷಾ ರೈ, ಇಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿ. ಆಕೆಯ ಸಹಪಾಠಿಗಳು ಅಭಿನಯದಲ್ಲಿ ಎತ್ತಿದ ಕೈ. ಮಾತ್ರವಲ್ಲ, ಈ ಎಲ್ಲಾ ವಿದ್ಯಾರ್ಥಿಗಳಿಗೆ ಭವಿಷ್ಯವಿದೆ ಎನ್ನುವುದು ಸ್ಪಷ್ಟ.
ಕಥೆಯ ಬಗ್ಗೆ ಹೇಳಬೇಕಾದರೆ – ಅದೊಂದು ಪ್ರೌಢಶಾಲೆ. ಎಲ್ಲವೂ ಸರಿಯಿರುವ ಅಲ್ಲಿ, ವಿದ್ಯಾರ್ಥಿಗಳ ನಿಯಂತ್ರಣವೇ ಪಡಿಪಾಟಲು. ಆಗ ಪಿ.ಟಿ. ಮಾಷ್ಟ್ರ ಎಂಟ್ರಿ. ವಿದ್ಯಾರ್ಥಿ ಸಂಸತ್ತು ಎನ್ನುವ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು, ಇಡೀಯ ಶಾಲೆಗೆ ಹೊಸ ಧಿಕ್ಕು ತೋರಿಸುವಲ್ಲಿ ಶಿಕ್ಷಕ ಯಶಸ್ವಿಯಾಗುತ್ತಾರೆ. ಮಾತ್ರವಲ್ಲ, ವಿದ್ಯಾರ್ಥಿಗಳಿಗೂ ಆತ್ಮವಿಶ್ವಾಸ ತುಂಬಿ, ಎಲ್ಲಾ ವಿಚಾರಗಳಲ್ಲೂ ಪರಿಪಕ್ವರನ್ನಾಗಿ ಮಾಡುತ್ತಾರೆ. ನಡುವಲ್ಲಿ ಎದುರಾಗುವ ಕೆಲ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಎದುರಿಸುವ ರೀತಿ, ಈಗಿನ ರಾಜಕಾರಣಿಗಳಿಗೆ ಸರಿಯಾದ ಪಾಠದಂತಿದೆ. ಹಾಗಾಗಿ ರಾಜಕೀಯ ವ್ಯಕ್ತಿಗಳು ಒಮ್ಮೆಯಾದರೂ ಈ ಸಿನಿಮಾವನ್ನು ತಪ್ಪದೇ ನೋಡಬೇಕು. ಆಡಳಿತ ಪಕ್ಷ, ವಿರೋಧ ಪಕ್ಷವಿರುವ ಶಾಲಾ ಸಂಸತ್ತು, ರಾಜ್ಯದ ರಾಜಕೀಯಕ್ಕೆ ಕೈಗನ್ನಡಿ ಹಿಡಿದಂತಿದೆ.
ಇಷ್ಟೆಲ್ಲಾ ವಿಚಾರಗಳನ್ನು ಫ್ರೇಮ್’ನೊಳಗಡೆ ತುಂಬಿ, ಪ್ರೇಕ್ಷಕರೆದುರು ಉಣಬಡಿಸಿದ ರಝಾಕ್ ಪುತ್ತೂರು ಅನುಭವಿ ನಿರ್ದೇಶಕ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಪೆನ್ಸಿಲ್ ಬಾಕ್ಸ್ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು. ಇವರ ಕೊಡುಗೆ ತುಳು ಚಿತ್ರರಂಗಕ್ಕೂ ಅಗತ್ಯವಿದೆ ಎನ್ನುವುದಂತೂ ಸತ್ಯ.
ಸನ್ ಮ್ಯಾಟ್ರಿಕ್ಸ್ ಬ್ಯಾನರಿನಡಿ ಕೆ. ಸತ್ಯೇಂದ್ರ ಪೈ ನಿರ್ಮಿಸಿರುವ ಈ ಸಿನಿಮಾ ಯಶಸ್ವಿಯಾಗುವುದರಲ್ಲಿ ಎರಡು ಮಾತೇ ಇಲ್ಲ.