All News

ನಿವೃತ್ತಿ ಘೋಷಿಸಿದ ಫುಟ್ಬಾಲ್ ದಂತಕಥೆ ಸುನಿಲ್ ಛೆಟ್ರಿ | ಭಾರತದ ಪರ 150 ಪಂದ್ಯವಾಡಿರುವ 39 ವರ್ಷದ ಸುನಿಲ್ | ಮೊದಲ ಪಂದ್ಯದ ಕ್ಷಣ ನೆನಪಿಸಿಕೊಂಡ ಆಟಗಾರ

ಈ ಸುದ್ದಿಯನ್ನು ಶೇರ್ ಮಾಡಿ

ಭಾರತೀಯ ಫುಟ್ಬಾಲ್ ದಂತಕಥೆ ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಜೂನ್ 6 ರಂದು ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಕುವೈತ್ ವಿರುದ್ಧದ ಪಂದ್ಯದ ಮೂಲಕ ಇಂಟರ್ನ್ಯಾಷನಲ್ ಫುಟ್ಬಾಲ್ಗೆ ವಿದಾಯ ಹೇಳುವುದಾಗಿ ಛೆಟ್ರಿ ತಿಳಿಸಿದ್ದಾರೆ.

39 ವರ್ಷ ವಯಸ್ಸಿನ ಸುನಿಲ್, ಭಾರತದ ಪರ ಈವರೆಗೆ 150 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 94 ಗೋಲುಗಳನ್ನು ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಇದೀಗ ಕುವೈತ್ ವಿರುದ್ಧದ ವಿಶ್ವಕಪ್ ಅರ್ಹತಾ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕೆರಿಯರ್ ಅಂತ್ಯಗೊಳಿಸಲು ಸುನಿಲ್ ಛೆಟ್ರಿ ನಿರ್ಧರಿಸಿದ್ದಾರೆ.

SRK Ladders

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಸುನಿಲ್ ಛೆಟ್ರಿ, ನಾನು ಎಂದಿಗೂ ಮರೆಯದ ಮತ್ತು ಆಗಾಗ್ಗೆ ನೆನಪಿಸಿಕೊಳ್ಳುವ ಒಂದು ದಿನವಿದೆ. ಅದು ನನ್ನ ದೇಶಕ್ಕಾಗಿ ಆಡಿದ ಮೊದಲ ಪಂದ್ಯದ ದಿನ. ಅದು ನಂಬಲಸಾಧ್ಯವಾಗಿತ್ತು. ಅಂದು ಬೆಳಿಗ್ಗೆ ರಾಷ್ಟ್ರೀಯ ತಂಡದ ಕೋಚ್ ಸುಖಿ ಸರ್, ನನ್ನ ಬಳಿಗೆ ಬಂದು ಆಡುತ್ತೀರಿ ಎಂದರು. ಆ ಅನುಭವವನ್ನು ಹೇಳಲಾಸಾಧ್ಯ. ನಾನು ನನ್ನ ಜರ್ಸಿಯನ್ನು ತೆಗೆದುಕೊಂಡೆ. ಅಲ್ಲದೆ ಅದ ಮೇಲೆ ಸ್ವಲ್ಪ ಸುಗಂಧ ದ್ರವ್ಯವನ್ನು ಸಿಂಪಡಿಸಿದೆ. ಏಕೆ ಎಂಬುದು ನಿಜಕ್ಕೂ ನನಗೆ ತಿಳಿದಿಲ್ಲ.

ಆ ದಿನ, ನನ್ನ ಚೊಚ್ಚಲ ಪಂದ್ಯದಲ್ಲಿ ನನ್ನ ಮೊದಲ ಗೋಲು… ಬಹುಶಃ ನಾನು ಎಂದಿಗೂ ಮರೆಯುವುದಿಲ್ಲ. ಅಲ್ಲದೆ ನನ್ನ ರಾಷ್ಟ್ರೀಯ ತಂಡದ ಪ್ರಯಾಣದ ಅತ್ಯುತ್ತಮ ದಿನಗಳನ್ನು ಸಹ ಮರೆಯಲಾರೆ ಎಂದು ಸುನಿಲ್ ಛೆಟ್ರಿ ಹೇಳಿದ್ದಾರೆ.

ಕಳೆದ 19 ವರ್ಷಗಳಲ್ಲಿ ನಾನು ನೆನಪಿಸಿಕೊಳ್ಳುವ ಭಾವನೆಯು ಕರ್ತವ್ಯದ ಒತ್ತಡ ಮತ್ತು ಅಪಾರ ಸಂತೋಷದ ನಡುವಿನ ಉತ್ತಮ ಸಂಯೋಜನೆಯಾಗಿದೆ. ನಾನು ವೈಯಕ್ತಿಕವಾಗಿ ಎಂದಿಗೂ ಯೋಚಿಸಲಿಲ್ಲ. ನಾನು ದೇಶಕ್ಕಾಗಿ ಹಲವು ಪಂದ್ಯಗಳನ್ನಾಡಿದ್ದೇನೆ. ಕೆಲವೊಮ್ಮೆ ಉತ್ತಮ ಅಥವಾ ಕೆಟ್ಟ ಫಲಿತಾಂಶ ನೋಡಿದ್ದೇನೆ. ಇದಾಗ್ಯೂ ಕಳೆದ ಒಂದೂವರೆ, ಎರಡು ತಿಂಗಳು ನನಗೆ ತುಂಬಾ ವಿಚಿತ್ರವಾಗಿತ್ತು.

ಹೀಗಾಗಿಯೇ ನಾನು ಇದುವೇ ನನ್ನ ಕೊನೆಯ ಆಟ ಎಂದು ನಾನು ಎಲ್ಲವನ್ನೂ ನೆನಪಿಸಿಕೊಳ್ಳಲು ಪ್ರಾರಂಭಿಸಿದೆ. ಇದು ತುಂಬಾ ವಿಚಿತ್ರವಾಗಿತ್ತು. ಈ ತರಬೇತುದಾರ, ಆ ತರಬೇತುದಾರ, ಆ ತಂಡ, ಆ ಸದಸ್ಯ, ಆ ಮೈದಾನ, ಆ ವಿದೇಶ ಪಂದ್ಯ, ಈ ಉತ್ತಮ ಆಟ, ಆ ಕೆಟ್ಟ ಆಟ, ನನ್ನ ವೈಯಕ್ತಿಕ ಪ್ರದರ್ಶನಗಳು, ಎಲ್ಲವೂ ಕಣ್ಮುಂದೆ ಬಂದವು. ಎಲ್ಲವನ್ನೂ ಯೋಚಿಸಲು ಪ್ರಾರಂಭಿಸಿದೆ. ಹೀಗಾಗಿ ನಿವೃತ್ತಿಗೆ ಇದುವೇ ಸಕಾಲ ಎಂದು ಭಾವಿಸಿದೆ.

ಈ ಬಗ್ಗೆ ತಂದೆ-ತಾಯಿಗೆ, ಹೆಂಡತಿ ಮತ್ತು ಕುಟುಂಬದವರಿಗೆ ತಿಳಿಸಿದೆ. ಇದನ್ನು ಕೇಳಿ ತಾಯಿ ಮತ್ತು ನನ್ನ ಹೆಂಡತಿ ಅಳಲು ಪ್ರಾರಂಭಿಸಿದರು. ಅಂತಿಮವಾಗಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಈ ನಿರ್ಧಾರದಿಂದ ಇದರಿಂದ ದುಃಖಿತನಾಗುತ್ತೇನೆಯೇ? ಎಂದು ಕೇಳಿದ್ರೆ ಖಂಡಿತವಾಗಿಯೂ ಬೇಸರವಿದೆ. ಏಕೆಂದರೆ 19 ವರ್ಷಗಳ ಆಟ, ಎಲ್ಲವೂ ಮುಗಿಯಲಿದೆ.

ಆದರೆ ಅದಕ್ಕೂ ಮುನ್ನ ಭಾರತಕ್ಕಾಗಿ ಪಂದ್ಯ ಗೆಲ್ಲಿಸಿಕೊಡಬೇಕಿದೆ. ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ನಮಗೆ ಮೂರು ಅಂಕಗಳ ಅಗತ್ಯವಿದೆ. ಇದು ನಮಗೆ ಬಹಳ ಮುಖ್ಯವಾಗಿದೆ. ಕುವೈತ್ ವಿರುದ್ಧದ ಪಂದ್ಯದ ಈ ಪಂದ್ಯದೊಂದಿಗೆ ವಿದಾಯ ಹೇಳುತ್ತಿದ್ದೇನೆ.

ನಿಜ ಹೇಳಬೇಕೆಂದರೆ, ನನ್ನ ದೇಶದಲ್ಲಿ ನನಗಿಂತ ಹೆಚ್ಚು ಪ್ರೀತಿ, ವಾತ್ಸಲ್ಯ, ಅಭಿಮಾನಗಳನ್ನು ಅಭಿಮಾನಿಗಳಿಂದ ಪಡೆದ ಯಾವ ಆಟಗಾರನೂ ಇಲ್ಲ ಎಂಬುದೇ ನನ್ನ ಭಾವನೆ. ಅಷ್ಟೊಂದು ಪ್ರೀತಿ ಕೊಟ್ಟಿದ್ದಾರೆ. ಆದರೆ ಎಲ್ಲದಕ್ಕೂ ಅಂತ್ಯವಿದೆ. ಅದರಂತೆ ಇದೀಗ ನಾನು ಸಹ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಹೇಳುತ್ತಿರುವುದಾಗಿ ಸುನಿಲ್ ಛೆಟ್ರಿ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts