ಪುತ್ತೂರು: ಎಲ್‌ಪಿಜಿ ಅಟೋ ಗ್ಯಾಸ್ ಬೆಲೆ ಏರಿಕೆಯಿಂದ ರಿಕ್ಷಾ ಚಾಲಕರಿಗೆ ತೊಂದರೆಯಾಗಿದ್ದು, ಏಕರೂಪ ದರವನ್ನು ಜಾರಿಗೆ ತರುವಂತೆ ಪುತ್ತೂರು ತಾಲೂಕು ಆಟೋ ಚಾಲಕ ಮಾಲಕರ ಸಂಯುಕ್ತ ಹೋರಾಟ ಸಮಿತಿ ಅಧ್ಯಕ್ಷ ಜಯರಾಮ್ ಕುಲಾಲ್ ಒತ್ತಾಯಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಯುದ್ಧಗಳು ನಡೆಯುತ್ತಿರುವ ಪರಿಣಾಮವಾಗಿ ಎಲ್‌ಪಿಜಿ ಅಟೋ ಗ್ಯಾಸ್‌ಗಳಲ್ಲಿ ಏರಿಕೆ ಆಗುತ್ತಿರುವುದರಿಂದ ಅಟೋ ಚಾಲಕರು ಸಂಕಷ್ಟಕ್ಕೆ ಈಡಾಗಿದ್ದಾರೆ. ಆದ್ದರಿಂದ ದರ ಏರಿಕೆ ಅನಿವಾರ್ಯ ಎಂದರು.
ಎಲ್‌ಪಿಜಿ ಹಾಗೂ ಇತರ ಪಂಪ್‌ಗಳಲ್ಲಿ ನಿರಂತರವಾಗಿ ದರ ಹೆಚ್ಚಳ ಮಾಡುತ್ತಿರುವುದಲ್ಲದೇ ಬೇರೆ ಬೇರೆ ಪಂಪ್‌ಗಳಲ್ಲಿ ಬೇರೆ ಬೇರೆ ರೀತಿಯ ದರಗಳನ್ನು ಅಟೋ ಚಾಲಕರಲ್ಲಿ ಪಡೆಯುತ್ತಿದ್ದಾರೆ. ಅಲ್ಲದೇ ಹೋಟೆಲ್‌ಗಳಲ್ಲಿ ಯಾವುದೇ ಮುಲಾಜಿಲ್ಲದೇ ದರ ಏರಿಕೆಯನ್ನು ಮಾಡಿದ್ದಾರೆ. ಇದರಿಂದಾಗಿ ರಿಕ್ಷಾ ಚಾಲಕರ ಬದುಕು. ಸಂಕಷ್ಟಕ್ಕೆ ಈಡಾಗಿದೆ. ಆದುದರಿಂದ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿದರು.
ಆಟೋ ಚಾಲಕರ ಪ್ರಮುಖ ಬೇಡಿಕೆಗಳು ಹೀಗಿವೆ:
1) ಎಲ್ಲಾ ಎಲ್.ಪಿ.ಜಿ. ಹಾಗೂ ಇತರ ಎಲ್ಲಾ ಅಟೋ ಗ್ಯಾಸ್ ಪಂಪುಗಳಲ್ಲಿ ಏಕರೂಪ ದರ ನಿಗದಿಪಡಿಸುವುದು.
2) ಎಲ್ಲಾ ಪಂಪ್‌ಗಳಲ್ಲಿ ಸರ್ಕಾರ ನಿಗದಿಪಡಿಸಿದ ಎಲ್ಲಾ ಅಟೋ ಗ್ಯಾಸ್ ದರ ಫಲಕವನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮ ಕೈಗೊಳ್ಳುವುದು.
3) ಪ್ರತೀ ರಿಕ್ಷಾ ಚಾಲಕನಿಗೆ ದಿನಕ್ಕೆ ಕನಿಷ್ಠ 5 ಕೆ. ಜಿ. ಅಟೋ ಗ್ಯಾಸ್ ನೀಡಲು ಕ್ರಮ ಕೈಗೊಳ್ಳಬೇಕು.
4) ಪ್ರಸ್ತುತ ಈಗಾಗಲೇ ನೀಡಲಾಗಿರುವ ಹಳೆ ಎಲ್‌ಪಿಜಿ ಅಟೋ ರಿಕ್ಷಾಗಳಿಗೆ ಪೆಟ್ರೋಲ್ ಹಾಕಿ ಚಾಲನೆಗೊಳಿಸಲು ಸಾಧ್ಯವಾಗುವುದಿಲ್ಲ. ಇದನ್ನು ಪರಿಪಡಿಸಲು ಚಾಲಕರಿಗೆ ಸಾವಿರಾರು ರೂಪಾಯಿ ಖರ್ಚು ತಗಲುತ್ತದೆ. ಇದಕ್ಕೆ ಸರ್ಕಾರ ಸೂಕ್ತ ಪರಿಹಾರ ವನ್ನು ನೀಡಬೇಕು.
5) ದಕ್ಷಿಣಕನ್ನಡ ಜಿಲ್ಲೆಯ ಕೆಲವು ತಾಲೂಕಿಗೆ ವಾಯುಮಾಲಿನ್ಯವಾಗುತ್ತಿದೆಯೆಂದು ಹೇಳಿ ಪೆಟ್ರೋಲ್ ಮತ್ತು ಡಿಸೀಲ್ ಅಟೋ ರಿಕ್ಷಾಗಳನ್ನು ನಿರ್ಬಂಧಿಸಲಾಗಿದ್ದು ಇದರಿಂದಾಗಿ ಪ್ರಸ್ತುತ ರಿಕ್ಷಾ ಚಾಲಕರು ಸಂಕಷ್ಟಕ್ಕೆ ಈಡಾಗಿದ್ದಾರೆ. ಆದುದರಿಂದ ಈಗಿರುವ ನಿರ್ಬಂಧವನ್ನು ತೆರವುಗೊಳಿಸಬೇಕು.
6) ನಮ್ಮ ಬೇಡಿಕೆ ಈಡೇರದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಹೋಟೆಲ್‌ಗಳಲ್ಲಿ ದರ ಹೆಚ್ಚಳ ಮಾಡಿದಂತೆ ನಾವುಗಳು ಗ್ಯಾಸ್ ದರಕ್ಕೆ ಅನುಗುಣವಾಗಿ ಬಾಡಿಗೆ ದರವನ್ನು ಹೆಚ್ಚಳಗೊಳಿಸಬೇಕಾಗುತ್ತದೆ.
7) ಸರಕಾರ ತೆರಿಗೆಯನ್ನು ಕಡಿಮೆ ಮಾಡಿ ಗ್ಯಾಸ್‌ನ್ನು ಹಿಂದಿನ ದರದಲ್ಲಿ ಸಿಗುವಂತೆ ಮಾಡಬೇಕು. ಇಲ್ಲದಿದ್ದಲ್ಲಿ ರಿಕ್ಷಾದ ಬಾಡಿಗೆ ದರವನ್ನು ಕೂಡಲೇ ಹೆಚ್ಚಳಗೊಳಿಸಲು ತಾವು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲ, ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.
ಇದರ ಬಗ್ಗೆ ಜಿಲ್ಲಾಧಿಕಾರಿಗಳು, ಸಂಸದರು, ಶಾಸಕರು, ಆರ್.ಟಿ.ಓ. ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸ್ನೇಹಸಂಗಮ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷ ತಾರನಾಥ ಬನ್ನೂರು, ಇಸ್ಮಾಯಿಲ್ ಬೊಳುವಾರು, ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಕೆ, ಎಸ್‌ಡಿಟಿಯು ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಆಶೀಫ್ ಮುಕ್ವೆ, ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಉಪಸ್ಥಿತರಿದ್ದರು.
























