ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ವಿದ್ಯಾರ್ಥಿಗಳಾಗಿರುವ ಅಕ್ಕ-ತಂಗಿಯರು ಗಂಭೀರವಾಗಿ ಗಾಯಗೊಂಡ ಘಟನೆ ಕಳಿಯ ಗ್ರಾಮದ ಗೇರುಕಟ್ಟೆ ಬಳಿ ಮಂಗಳವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ.
ಗಾಯಾಳುಗಳನ್ನು ನ್ಯಾಯತರ್ಪು ಗ್ರಾಮದ ಕಲೈತೊಟ್ಟು ನಿವಾಸಿ ನಾಗರಾಜ ಹಾಗೂ ರೂಪಾ ದಂಪತಿಯ ಪುತ್ರಿಯರು ಎಂದು ಗುರುತಿಸಲಾಗಿದೆ.
ಈ ಪೈಕಿ ಓರ್ವೆ ಎಸೆಸೆಲ್ಸಿ ವಿದ್ಯಾರ್ಥಿನಿಯಾಗಿದ್ದು, ಇಂದು ಪರೀಕ್ಷೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಇನ್ನೊಬ್ಬಳು ಅವಳ ಸಹೋದರಿಯಾಗಿದ್ದು, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ.
ಇವರಿಬ್ಬರು ಮಂಗಳವಾರ ಬೆಳಗ್ಗೆ ಗೇರುಕಟ್ಟೆಯಿಂದ ಬೆಳ್ತಂಗಡಿಯ ಶಾಲೆಗೆ ತೆರಳಲು ಕೆಎಸ್ಸಾರ್ಟಿಸಿ ಬಸ್ ಹತ್ತಿದ್ದು, ರೇಷ್ಮೆ ರೋಡ್ ಎಂಬಲ್ಲಿ ತಲುಪಿದಾಗ ಏಕಾಏಕಿ ಬಸ್ಸಿನ ಬಾಗಿಲಿನ ತೆರೆಯಲ್ಪಟ್ಟಿದೆ. ಈ ವೇಳೆ ಇವರಿಬ್ಬರು ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಗಂಭೀರ ಗಾಯಗೊಂಡಿರುವ ಅವರಿಬ್ಬರನ್ನು ಚಿಕಿತ್ಸೆಗಾಗಿ ಬೆಳ್ತಂಗಡಿ ಹಾಗೂ ಉಜಿರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.
























