ಬೆಂಗಳೂರು: ಕರ್ತವ್ಯದಲ್ಲಿದ್ದಾಗಲೇ ಮಹಿಳೆಯ ಜತೆ ಅನುಚಿತವಾಗಿ ವರ್ತಿಸಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸೇವೆಯಿಂದ ಅಮಾನತುಗೊಂಡಿರುವ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ.
ವೈರಲ್ ಆಗಿರುವ ವಿಡಿಯೋಗಳು ʼಎಐʼ ಅಲ್ಲ, ಅವು ಸಂಪೂರ್ಣವಾಗಿ ಅಸಲಿ ಎಂದು ತನಿಖಾ ತಂದ ದೃಢಪಡಿಸಿದೆ. ಆ ಮೂಲಕ ಕೆ. ರಾಮಚಂದ್ರ ರಾವ್ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಈ ಪ್ರಕರಣ ಸಂಬಂಧ ತನಿಖೆ ನಡೆಸಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್. ಹಿತೇಂದ್ರ ನೇತೃತ್ವದಲ್ಲಿ ರಾಜ್ಯ ಸರ್ಕಾರ ನೇಮಿಸಿದ್ದ 4 ಮಂದಿ ಐಪಿಎಸ್ ಅಧಿಕಾರಿಗಳ ತಂಡವನ್ನು ರಚನೆ ಮಾಡಿತ್ತು.
ಇದೇ ತಂಡ ಈಗ 100 ಪುಟಗಳ ವರದಿ ನೀಡಿದ್ದು, ಇದರಲ್ಲಿ ವಿಡಿಯೋ ಅಸಲಿ ಎನ್ನುವ ವಿಚಾರವನ್ನು ಕೂಡ ಉಲ್ಲೇಖ ಮಾಡಿದೆ ಎಂದು ವರದಿಯಾಗಿದೆ.
ವಿವಾದಿತ ವೈರಲ್ ವಿಡಿಯೋವನ್ನು ವಿಧಿವಿಜ್ಞಾನ ಪ್ರಯೋಗಾಲಯದ (FSL) ಕೂಲಂಕಷವಾಗಿ ಪರಿಶೀಲನೆ ಮಾಡಿದೆ. ಇದರಲ್ಲಿ ವಿಡಿಯೋದಲ್ಲಿನ ದೃಶ್ಯಗಳಲ್ಲಿ ಯಾವುದೇ ರೀತಿಯ ತಾಂತ್ರಿಕ ಮಾರ್ಪಾಡು ಅಥವಾ ಎಡಿಟಿಂಗ್ ನಡೆದಿಲ್ಲವೆನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ರಾಮಚಂದ್ರರಾವ್ 2016-17ರ ಅವಧಿಯಲ್ಲಿ ಬೆಳಗಾವಿ ವಲಯದ ಐಜಿಪಿಯಾಗಿ (IGP) ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಅವರದ್ದೇ ಮಹಿಳೆಯರ ಅನುಚಿತವಾಗಿ ವರ್ತಿಸಿದ್ದರು. ಇದನ್ನು ಅವರ ಕಚೇರಿಯಲ್ಲೇ ಸೆರೆ ಹಿಡಿಯಲಾಗಿತ್ತು. ಮಹಿಳೆಯೊಬ್ಬರು ಉದ್ದೇಶಪೂರ್ವಕ ತಮ್ಮ ಮೊಬೈಲ್‌ನಲ್ಲಿ ಇದನ್ನು ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ.
ಮಹಿಳೆಯರು ನಾಪತ್ತೆ..
ವೈರಲ್ ಆಗಿರುವ ವಿಡಿಯೋದಲ್ಲಿರುವ ಇಬ್ಬರು ಮಹಿಳೆಯರು ಘಟನೆ ಬೆಳಕಿಗೆ ಬಂದ ಬಳಿಕ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ಪ್ರಕರಣ ಸಂಬಂಧ ಮುಂದಿನ ತನಿಖೆಗೆ ಆ ಮಹಿಳೆಯರು ತನಿಖಾ ತಂಡದ ಮುಂದೆ ಹಾಜರಾಗಲೇಬೇಕಿದೆ.
ಇನ್ನೊಂದು ಕಡೆ ಹಿರಿಯ ಅಧಿಕಾರಿಗಳ ತನಿಖೆಯ ಬಳಿಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ರಾವ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಅಧಿಕೃತ ಇಲಾಖಾ ತನಿಖೆ ಪ್ರಾರಂಭವಾಗಿದೆ.
ರಾವ್ ಅವರು ಇದೇ ಬರುವ ಮೇ 31ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಆದರೆ, ಪ್ರಕರಣದ ಅಧಿಕೃತ ತನಿಖೆ ಮುಂದುವರಿದಿರುವ ಕಾರಣ, ಅವರ ಪಿಂಚಣಿ (Pension) ಮತ್ತು ಇತರ ನಿವೃತ್ತಿ ಸೌಲಭ್ಯಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿ ತಿಳಿಸಿದೆ























