ಸೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಮ್ಮ ಪುತ್ರಿಯೊಂದಿಗೆ ಟ್ಯಾಂಕ್ ಏರಿ ಸವಾರಿ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಜಂಟಿ ಸೇನಾಭ್ಯಾಸಕ್ಕೆ ಪ್ರತಿಯಾಗಿ ಉತ್ತರ ಕೊರಿಯಾ ಸರಣಿ ಯುದ್ಧ ತರಬೇತಿಗಳನ್ನು ನಡೆಸುತ್ತಿದ್ದು, ಈ ವೇಳೆ ಕಿಮ್ ಮತ್ತು ಅವರ ಪುತ್ರಿ ಕಾಣಿಸಿಕೊಂಡಿರುವುದು ಜಾಗತಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.
ಗುರುವಾರ ನಡೆದ ಟ್ಯಾಂಕ್ ಘಟಕಗಳು ಮತ್ತು ಪದಾತಿ ದಳದ ಗುಂಡಿನ ದಾಳಿ ತರಬೇತಿಯನ್ನು ಕಿಮ್ ವೀಕ್ಷಿಸಿದರು. ಈ ಸಂದರ್ಭದಲ್ಲಿ ಕಿಮ್ ಮತ್ತು ಅವರ ಪುತ್ರಿ ಕಿಮ್ ಜೂ ಏ ಇಬ್ಬರೂ ಕಪ್ಪು ಚರ್ಮದ ಜಾಕೆಟ್ ಧರಿಸಿದ್ದರು. ಕಿಮ್ ಟ್ಯಾಂಕ್‌ನ ಮೇಲೆ ಕುಳಿತು ನಗುತ್ತಿದ್ದರೆ, ಅವರ ಪುತ್ರಿ ಟ್ಯಾಂಕ್‌ನ ಹ್ಯಾಚ್‌ನಿಂದ ಹೊರಬಂದು ತರಬೇತಿಯನ್ನು ಕುತೂಹಲದಿಂದ ಗಮನಿಸುತ್ತಿರುವ ಫೋಟೋಗಳನ್ನು ಅಲ್ಲಿನ ಅಧಿಕೃತ ಸುದ್ದಿ ಸಂಸ್ಥೆ (KCNA) ಬಿಡುಗಡೆ ಮಾಡಿದೆ.
ಕಳೆದ ಒಂದು ವರ್ಷದಿಂದ ಕಿಮ್ ಜೂ ಏ ತನ್ನ ತಂದೆಯ ಜೊತೆ ಪ್ರಮುಖ ಸೇನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಹೆಚ್ಚಾಗಿದೆ. ಇದನ್ನು ಗಮನಿಸಿರುವ ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆಗಳು, ಕಿಮ್ ತನ್ನ 13 ವರ್ಷದ ಮಗಳನ್ನೇ ತನ್ನ ಮುಂದಿನ ಉತ್ತರಾಧಿಕಾರಿಯನ್ನಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿವೆ. ಕಿಮ್ ತನ್ನ ಮಗಳನ್ನು “ಅತ್ಯಂತ ಪ್ರೀತಿಯ” ಮತ್ತು “ಗೌರವಾನ್ವಿತ” ಮಗು ಎಂದು ಸಾರ್ವಜನಿಕವಾಗಿ ಕರೆದಿದ್ದಾರೆ.
“ನಮ್ಮ ಸೈನ್ಯವು ಯಾವುದೇ ಕ್ಷಣದಲ್ಲಿ ಯುದ್ಧಕ್ಕೆ ಸಿದ್ಧವಾಗಿರಬೇಕು” ಎಂದು ಕಿಮ್ ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಳೆದ ವಾರವಷ್ಟೇ ಅವರು ಕ್ಷಿಪಣಿ ಉಡಾವಣೆ ಮತ್ತು ಪಿಸ್ತೂಲ್ ಶೂಟಿಂಗ್ ತರಬೇತಿಯಲ್ಲಿ ಭಾಗವಹಿಸಿದ್ದರು. ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಡೆಸುತ್ತಿರುವ 11 ದಿನಗಳ ಜಂಟಿ ಸೇನಾ ಸಮರಾಭ್ಯಾಸವು ತನ್ನ ದೇಶದ ಮೇಲೆ ದಾಳಿ ಮಾಡುವ ಸಂಚು ಎಂದು ಉತ್ತರ ಕೊರಿಯಾ ಕಿಡಿಕಾರಿದೆ.























