ಬೆಂಗಳೂರು: ಪುರುಷರ ಹಾಗೂ ಮಹಿಳೆಯರ ಸೀನಿಯರ್ ವಿಭಾಗದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯ ಲೋಕೇಶ್ ಗೌಡ ಟ್ರೋಫಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕಳೆದ 7 ದಿನಗಳ ಕಾಲ ನಡೆದಿದ್ದು, ಶನಿವಾರ ಸಮಾರೋಪಗೊಂಡಿತು.
ಮುಖ್ಯಅತಿಥಿಯಾಗಿ ಆಗಮಿಸಿದ್ದ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ವಿಜೇತರಿಗೆ ಬಹುಮಾನ ವಿತರಿಸಿ, ವಾಲಿಬಾಲ್ ತುಂಬಾ ಸುಂದರವಾದ ಆಟ. ಇಂತಹ ಕ್ರೀಡಾಕೂಟಕ್ಕೆ ವೈಯಕ್ತಿಕ ಹಾಗೂ ಸರಕಾರದಿಂದ ಸಿಗುವ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಜಾಯಿಂಟ್ ಕಮೀಷನರ್, ವಾಲಿಬಾಲ್ ಅಸೋಸಿಯೇಶನ್ ಆಫ್ ಕರ್ನಾಟಕ ಇದರ ಉಪಾಧ್ಯಕ್ಷ ಕಾರ್ತಿಕ್ ರೆಡ್ಡಿ ಮಾತನಾಡಿ, ಕಳೆದ ಏಳೆಂಟು ವರ್ಷಗಳಿಂದ ವಾಲಿಬಾಲ್ ಕತ್ತಲೆಯಲ್ಲಿದ್ದು ಮತ್ತು ಆಡುವ ಆಟಗಾರರಿಗೆ ಮುಂದೆ ವಾಲಿಬಾಲ್ ಆಟದ ಮೇಲೆ ನಿರಾಶೆ ಮೂಡುವಂತೆ ಆಗಿತ್ತು. ವಾಲಿಬಾಲನ್ನು ಆಡಿದರೆ ಯಾವುದೇ ಉದ್ಯೋಗ ಸಿಗುವ ವಿಶ್ವಾಸ ಇದುವರೆಗೆ ಇಲ್ಲ. ಇನ್ನು ಮುಂದೆ ಆ ಕೊರತೆಯನ್ನು ನಿಭಾಯಿಸಲು ವಾಲಿಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಪ್ರಯತ್ನಿಸುತ್ತದೆ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಕೆ ಆರ್ ಲಕ್ಷ್ಮಿನಾರಾಯಣ ಮಾತನಾಡಿ, ನನಗೆ ವಾಲಿಬಾಲ್ ಅನ್ನ ನೀಡಿದೆ. ಆದ್ದರಿಂದ ಇದರ ಋಣವನ್ನು ತೀರಿಸುವ ಕೆಲಸವನ್ನು ಮಾಡಲು ನಾನು ಮುಂದೆ ಬಂದಿದ್ದೇನೆ. ಕಳೆದ ಏಳು ವರ್ಷಗಳಿಂದ ದೂರ ನಿಂತು ವೀಕ್ಷಿಸುತ್ತಿದ್ದೆ. ಆದರೆ ವಾಲಿಬಾಲ್ ಮಾತ್ರ ಬೆಳೆಯಲಿಲ್ಲ. ಕೇವಲ ಅವರಿಗೂ ಇವರಿಗೂ ಆರೋಪಗಳನ್ನು ಮಾಡುವುದರಲ್ಲಿ ದಿನಗಳು ಕಳೆದು ಹೋದವು. ಆದುದರಿಂದ ಇಂದು ಆಡುತ್ತಿರುವ ಯುವಕರಿಗೆ ಜೀವನ ಕಟ್ಟಿಕೊಳ್ಳಲು ಒಂದು ದಾರಿ ದೀಪ ಆಗಬೇಕು. ವಾಲಿಬಾಲ್ ಎಂಬುದೇ ನನ್ನ ಗುರಿ. ಅಲ್ಲದೆ ಇದ್ಯಾವುದು ನನ್ನ ಸ್ವಾರ್ಥವಲ್ಲ. ಅಧಿಕಾರದ ಮೋಹವೂ ನನಗಿಲ್ಲ. ನನಗೆ ಕರ್ನಾಟಕದ ಎಲ್ಲಾ ಹಿರಿಯ ಮತ್ತು ಕಿರಿಯ ವಾಲಿಬಾಲ್ ಕ್ರೀಡಾಪಟುಗಳ ಸಹಕಾರ ನಮ್ಮ ಈ ವಾಲಿಬಾಲ್ ಅಸೋಸಿಯೇಷನ್ ಆಪ್ ಕರ್ನಾಟಕ ಇದರೊಂದಿಗೆ ಬೇಕು ಎಂದು ಬಹಳ ಅಭಿಮಾನದಿಂದ ಹೇಳಿದರು.
ಕಾರ್ಯಾಧ್ಯಕ್ಷ ಬಸವರಾಜಿ ವಸೀಮಠ, ಉಪಾಧ್ಯಕ್ಷರಾದ ಭೀಮಸೇನೆ ಕೊಕ್ರೆ, ರಾಜಿವ್ ಗೌಡ, ಸರ್ವತ್ತಮ್ಮ ಜಾರಕಿಹೊಳಿ, ಪಲ್ಲವಿ ಮಣಿ, ಜನಾಬು ಇಬ್ರಾಹಿಂ ಗೋಳಿಕಟ್ಟೆ ಶುಭಹಾರೈಸಿದರು.
ಹಿರಿಯ ತರಬೇತಿದಾರ ನಂಜೇಗೌಡ ಉಪಸ್ಥಿತರಿದ್ದರು.
ಡಾ. ಪಲ್ಲವಿ ಮಣಿ ಸ್ವಾಗತಿಸಿದರು. ವಾಲಿಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಉಪಾಧ್ಯಕ್ಷ ಜನಾಬು ಇಬ್ರಾಹಿಂ ಗೋಳಿಕಟ್ಟೆ ವಂದಿಸಿದರು.