ಪತ್ನಿಯ ಮೇಲೆ ಸಂಶಯಪಟ್ಟು ನಡೆದಿರುವ ಕೊಲೆಗಳನ್ನು ನೋಡಿದ್ದೇವೆ. ಆದರೆ ಇದೀಗ ತನ್ನ ಅತ್ತೆಯ ಮೇಲೆ ಸಂಶಯಪಟ್ಟು ಕೊಲೆ ನಡೆದಿರುವ ಭೀಕರ ಘಟನೆ ತುಮಕೂರಿನಲ್ಲಿ ನಡೆದಿದೆ.
ಲಕ್ಷ್ಮೀ ದೇವಮ್ಮ ದಾರುಣವಾಗಿ ಕೊಲೆಗೈಯಲ್ಪಟ್ಟವರು.
ಅಳಿಯ ವೃತ್ತಿಯಲ್ಲಿ ದಂತ ವೈದ್ಯ. ಆತನಿಗೆ ಇದು ಎರಡನೇ ಮದುವೆ. ಮದುವೆಯ ನಂತರ ಆತನಿಗೆ ತನ್ನ ಅತ್ತೆಯ ನಡತೆಯ ಮೇಲೆ ಅನುಮಾನ ಹುಟ್ಟಿಕೊಂಡಿದೆ ಎನ್ನಲಾಗಿದೆ. ಅತ್ತೆಯ ಕಾರಣದಿಂದ ತನ್ನ ಪತ್ನಿಯೂ ಕೆಟ್ಟ ಹಾದಿಯಲ್ಲಿ ನಡೆಯುತ್ತಿದ್ದಾಳೆ ಎಂದು ಅಳಿಯ ನಂಬಿದ್ದ. ಇದರಿಂದ ಕೋಪಗೊಂಡು, ಅತ್ತೆಯನ್ನು ಕೊಂದುಬಿಟ್ಟರೆ ತನ್ನ ಪತ್ನಿ ಸರಿಯಾಗುತ್ತಾಳೆ ಎಂದು ಯೋಚಿಸಿ ಈ ಕೃತ್ಯಕ್ಕೆ ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ.
ಮೃತದೇಹವನ್ನು ತುಂಡುತುಂಡಾಗಿ ಕತ್ತರಿಸಿ ಕೆರೆಗೆ ಎಸೆಯುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಭಯದಲ್ಲಿ ರಸ್ತೆ ಬದಿಯೇ ದೇಹದ ತುಂಡುಗಳನ್ನು ಬಿಟ್ಟು ಹೋಗಿದ್ದಾರೆ. ರಸ್ತೆ ಬದಿ ತುಂಡು ತುಂಡಾಗಿ ಬಿದ್ದಿದ್ದ ದೇಹದ ಅವಯವಗಳನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.
ಪ್ರಾರಂಭದಲ್ಲಿ ಪೊಲೀಸರಿಗೆ ಸುಳಿವೇ ಸಿಗಲಿಲ್ಲ. ಕೊನೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕಾರೊಂದು ಅನುಮಾನಾಸ್ಪದವಾಗಿ ಓಡಾಡಿರುವುದು ಬೆಳಕಿಗೆ ಬಂದಿದೆ. ಇದನ್ನೇ ಬೆನ್ನಟ್ಟಿದ ಪೊಲೀಸರಿಗೆ ಆರೋಪಿ ಹಾಗೂ ಆತನಿಗೆ ಸಹಾಯ ನೀಡಿದ ಇಬ್ಬರು ಸ್ನೇಹಿತರು ಸಿಕ್ಕಿ ಬಿದ್ದಿದ್ದಾರೆ.