Friday, December 13
Share News

ಪುತ್ತೂರು: ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯರು ತೆಂಕುತಿಟ್ಟಿನ ಹಾಸ್ಯಗಾರರಲ್ಲಿ ಅನನ್ಯ ಸ್ಥಾನವನ್ನು ಪಡೆದ ಕಲಾವಿದರಾಗಿದ್ದು ಯಕ್ಷಗಾನದಲ್ಲಿ ಹಾಸ್ಯ ಪಾತ್ರಗಳನ್ನು ಮಾದರಿಯಾಗಿ ರೂಪಿಸಿದವರು. ಈ ಪರಂಪರೆಯನ್ನು ಮುಂದುವರಿಸುವ ಹಾಸ್ಯ ಕಲಾವಿದರು ಯಕ್ಷ ರಂಗದಲ್ಲಿ ಮೂಡಿ ಬರಬೇಕಾಗಿದೆಯೆಂದು ಬಂಟ್ವಾಳ ಜಯರಾಮ ಆಚಾರ್ಯರ ಮೂರು ದಶಕಗಳ ಒಡನಾಡಿ ಕಲಾವಿದ ಪಾತಾಳ ಅಂಬಾಪ್ರಸಾದ್ ತಿಳಿಸಿದರು.

 ಕೊಂಬೋಟು ಕುಟುಂಬಸ್ಥರ ತಡವಾಡು ಮನೆ ಉಬರಡ್ಕ ಸುಳ್ಯ ಇಲ್ಲಿ ವೃಶ್ಚಿಕ ಸಂಕ್ರಮಣದ ಪ್ರಯುಕ್ತ ಜರಗಿದ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಮಹಾಭಾರತ ಸರಣಿಯ ತಾಳಮದ್ದಳೆ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿ ಆಟ- ಕೂಟಗಳಲ್ಲದೆ ನಾಟಕ,ಸಿನಿಮಾ ರಂಗಗಳಲ್ಲಿಯೂ ಅವರು ನಿರ್ವಹಿಸಿದ ಪಾತ್ರಗಳು ಅವರ ಅದ್ಭುತ ಪ್ರತಿಭೆಗೆ ಸಾಕ್ಷಿಯಾಗಿದೆ. ವಿಟ್ಲ ಗೋಪಾಲಕೃಷ್ಣ ಜೋಷಿ,ಮಿಜಾರು ಅಣ್ಣಪ್ಪ, ಪೆರುವಡಿ ನಾರಾಯಣ ಭಟ್, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರ ಪರಂಪರೆಯನ್ನು ಮುಂದುವರಿಸಿದ ಕೀರ್ತಿ ಜಯರಾಮಚಾರ್ಯರಿಗೆ ಸಲ್ಲುವುದೆಂದು  ತಿಳಿಸಿದರು.

ಕೊಂಬೋಟು ಟ್ರಸ್ಟಿನ ಅಧ್ಯಕ್ಷ ಮಹೇಶ ಮಾಣಿ, ಕಾರ್ಯಾಧ್ಯಕ್ಷ ನಾಗೇಶ್ ಕೇರ್ಪಳ, ಆರಾಧನಾ ಸಮಿತಿ ಅಧ್ಯಕ್ಷ ಸತೀಶ ಅಲೆಟ್ಟಿ, ತರವಾಡು ಕುಟುಂಬದ ಹಿರಿಯರಾದ ಸೀತಾರಾಮ ಮುಪ್ಪೆರಿಯ, ಶೇಷಪ್ಪ ಅಲೆಟ್ಟಿ, ಕರಿಯಪ್ಪ ಸುಂತೋಡು, ಬಾಬು ಸುಂತೋಡು, ದೇವದಾಸ ಎಸ್ ಪಿ ಹರಿಹರ, ಲೋಕೇಶ ಸುಬ್ರಹ್ಮಣ್ಯ  ಉಪಸ್ಥಿತರಿದ್ದರು.

 ಸಂಘದ ಕಲಾವಿದರಾದ ಪದ್ಮನಾಭ ಕುಲಾಲ್, ಹರೀಶ್ ಆಚಾರ್ಯ ಬಾರ್ಯ, ಶ್ರುತಿ ವಿಸ್ಮಿತ್, ಜಯರಾಮಬಲ್ಯ ಉಪಸ್ಥಿತರಿದ್ದರು.

ಮಹಾಭಾರತ ಸರಣಿಯ 54ನೇ ತಾಳಮದ್ದಳೆ : ಲಕ್ಷಣ ಕಲ್ಯಾಣ ತಾಳಮದ್ದಳೆಯಲ್ಲಿ ಭಾಗವತರಾಗಿ ಪದ್ಮನಾಭ ಕುಲಾಲ್, ನಿತೀಶ್ ವೈ, ಹಿಮ್ಮೇಳದಲ್ಲಿ ಶ್ರೀಪತಿ  ಭಟ್, ಪ್ರಚೇತ್ ಆಳ್ವ ಅರ್ಥಧಾರಿಗಳಾಗಿ ಅಂಬಾ ಪ್ರಸಾದ್ ಪಾತಾಳ(ಕೌರವ) ದಿವಾಕರ ಆಚಾರ್ಯ ಗೇರುಕಟ್ಟೆ(ಶ್ರೀಕೃಷ್ಣ )ಜಯರಾಮ ಬಲ್ಯ(ಘೋರಭೀಷಣ )ಶ್ರೀಧರ ಎಸ್ಪಿ ಸುರತ್ಕಲ್(ಸಾಂಬ)ಹರೀಶ್ ಆಚಾರ್ಯ ಬಾರ್ಯ(ಕರ್ಣ, ಲಕ್ಷಣ) ದೇವದಾಸ ಹರಿಹರ(ನಾರದ, ಈಶ್ವರ)ಶ್ರುತಿ ವಿಸ್ಮಿತ್ ಬಲ್ನಾಡು(ಲಕ್ಷಣಾ, ಕಾಳಮೇಘಸ್ತನಿ) ಭಾಗವಹಿಸಿದ್ದರು.

ಕಾರ್ಯಕ್ರಮದ ಸಂಯೋಜಕರಾದ ಶ್ರೀಧರ ಎಸ್ಪಿ ಸುರತ್ಕಲ್ ಸ್ವಾಗತಿಸಿ ಯಕ್ಷಗಾನ ಸಂಘದ ಕಾರ್ಯದರ್ಶಿ ಶ್ರೀಪತಿ ಭಟ್ ವಂದಿಸಿದರು.


Share News

Comments are closed.

Exit mobile version