ಪುತ್ತೂರು: ನೋವಾ ಐವಿಎಫ್ ಫರ್ಟಿಲಿಟಿ, ರೋಟರಿ ಕ್ಲಬ್ ಪುತ್ತೂರು ಸಿಟಿ, ಇನ್ನರ್ ವ್ಹೀಲ್ ಕ್ಲಬ್ ಪುತ್ತೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಸಂತಾನ ಹೀನತೆ ಬಗ್ಗೆ ಉಚಿತ ಮಾಹಿತಿ ಮತ್ತು ತಪಾಸಣಾ ಶಿಬಿರ ಮಂಗಳವಾರ ರೋಟರಿ ಮನಿಷಾ ಹಾಲ್’ನಲ್ಲಿ ನಡೆಯಿತು.
ಶಿಬಿರ ಉದ್ಘಾಟಿಸಿ ಮಾತನಾಡಿದ ರೋಟರಿ 3181 ಜಿಲ್ಲೆಯ ಝೋನ್ 4ರ ಅಸಿಸ್ಟೆಂಟ್ ಗವರ್ನರ್ ಡಾ. ರಾಜಾರಾಮ್ ಕೆ.ಬಿ., ಬಂಜರು ಭೂಮಿ ಹಾಗೂ ಬಂಜೆತನ ಒಂದೇ ಎಂದು ಹಲವರು ಹೇಳಿರುವುದನ್ನು ಕೇಳುತ್ತೇವೆ. ಇದು ಋಣಾತ್ಮಕ ಅಭಿಪ್ರಾಯದ ಪದಗಳು. ಬಂಜರು ಭೂಮಿಯನ್ನು ಸಮೃದ್ಧ ಫಸಲು ಭೂಮಿಯಾಗಿ ಪರಿವರ್ತಿಸಬಹುದು ಎನ್ನುವುದಕ್ಕೆ ಇಂದು ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ. ಅದೇ ರೀತಿ ಬಂಜೆತನ ಅಥವಾ ಸಂತಾನ ಹೀನತೆಗೆ ಆಧುನಿಕ ಪದ್ಧತಿಯ ಸೂಕ್ತ ಚಿಕಿತ್ಸೆಗಳನ್ನು ಅಥವಾ ಸಲಹೆ ಪಡೆದುಕೊಂಡು ಮುಂದುವರಿದರೆ, ಮಕ್ಕಳನ್ನು ಪಡೆಯಲು ಸಾಧ್ಯ ಎಂದರು.
ಪತ್ನಿಯ ದೋಷದಿಂದ ಮಾತ್ರ ಬಂಜೆತನ ಬರುತ್ತದೆ ಎಂದು ಭಾವಿಸುವುದು ತಪ್ಪು. ಪುರುಷರಲ್ಲಿರುವ ದೋಷಗಳಿಂದಲೂ ಸಂತಾನ ಹೀನತೆ ಕಂಡುಬಂದಿರುವುದು ಇದೆ. ಹಾಗೆಂದು ಇದರ ಬಗ್ಗೆ ಕೀಳರಿಮೆ ಬೇಡ. ಸೂಕ್ತ ವೈದ್ಯರನ್ನು ಭೇಟಿಯಾಗಿ. ಅವರು ನೀಡುವ ಸಲಹೆಯನ್ನು ಪಾಲಿಸಿ. ಕಾರ್ಮೋಡ ಕವಿದಿರುವ ಬದುಕಿಗೆ ಬೆಳ್ಳಿರೇಖೆ ಮೂಡುವುದು ಖಂಡಿತಾ ಎಂದರು.
ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಉಲ್ಲಾಸ್ ಪೈ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ನೋವಾ ಐವಿಎಫ್ ಇದರ ಹಿರಿಯ ಕನ್ಸಲ್ಟೆಂಟ್ ಶಾವೀಝ್ ಫೈಝಿ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್, ಪುತ್ತೂರು ಸಿಡಿಪಿಓ ಹರೀಶ್ ಕೆ., ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ರೂಪಲೇಖ ಪಾಣಾಜೆ, ನೋವಾ ಐವಿಎಫ್ ಫರ್ಟಿಲಿಟಿಯ ಆಪರೇಷನಲ್ ಮ್ಯಾನೇಜರ್ ಡಾ. ವೀಣಾ ಉಚ್ಚಿಲ್ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಡಾ. ಶವೀಝ್ ಫೈಝಿ ನೇತೃತ್ವದಲ್ಲಿ ಹರ್ಷ, ಗೌತಮ್, ಆದರ್ಶ್, ಡಾ. ವೀಣಾ ಉಚ್ಚಿಲ್ ಸಹಕಾರದಲ್ಲಿ ಶಿಬಿರ ನಡೆಯಿತು.























