ಪುತ್ತೂರು: ರಾಜ್ಯ ಸರ್ಕಾರದ ಅವಧಿಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಒಟ್ಟು ರೂ. 1476 ಕೋಟಿ ಅನುದಾನಗಳು ಬಿಡುಗಡೆಯಾಗಿದ್ದು, ಹಲವಾರು ಪ್ರಗತಿ ಕಾಮಗಾರಿಗಳು ನಡೆದಿದೆ. ಇದೀಗ 2024-25ನೇ ಸಾಲಿನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಒಟ್ಟು ರೂ. 131.56 ಕೋಟಿ ಅನುದಾನ ಮಂಜೂರಾಗಿದ್ದು, ಈ ಪೈಕಿ ಶೇ. 80ರಷ್ಟು ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಉಳಿದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು ಮುಂದಿನ 15 ದಿನಗಳಲ್ಲಿ ಎಲ್ಲಾ ಕಾಮಗಾರಿಗಳ ಟೆಂಡರ್ ಮುಕ್ತಾಯಗೊಳ್ಳಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.
ಅವರು ಶಾಸಕರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮುಂದಿನ ಮಾರ್ಚ್ ಒಳಗಾಗಿ ಇನ್ನೂ ರೂ. 400 ಕೋಟಿ ಅನುದಾನ ಬಿಡುಗಡೆಯಾಗಲಿದ್ದು, ಈ ಅನುದಾನದಲ್ಲಿ ಉಪ್ಪಿನಂಗಡಿ ಸಂಗಮ ಕ್ಷೇತ್ರವನ್ನು ಕೂಡಲ ಸಂಗಮ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಪ್ರವಾಸೋದ್ಯಮ ಇಲಾಖೆಯ ಮೂಲಕ ಸುಮಾರು ರೂ. 350 ವಿನಿಯೋಗಿಸಲಾಗುವುದು ಉಳಿದಂತೆ 30 ಕಿಂಡಿ ಅಣೆಕಟ್ಟು, 400 ಕಾಲು ಸಂಕಗಳಿಗೆ ಅನುದಾನ ಮೀಸಲಿರಿಸಲಾಗುವುದು. ನದಿ ತೀರದಲ್ಲಿರುವ ಏಕೈಕ ಶಾಸಕ ನಾನಾಗಿದ್ದು, ಉಳಿದ ಶಾಸಕರು ಸಮುದ್ರ ತೀರದಲ್ಲಿರುವವರು. ಈ ಕಾರಣದಿಂದ ಸಮರ್ಪಕ ಕುಡಿಯುವ ನೀರಿನ ಯೋಜನೆಗೆ ಅನುದಾನ ಒದಗಿಸಲು ಸರಕಾರಕ್ಕೆ ಆಗ್ರಹಿಸಿದ್ದೇನೆ. ಎತ್ತಿನಹೊಳೆಯಂತಹ ಯೋಜನೆಗೆ 26 ಸಾವಿರ ಕೋಟಿ ನೀಡುವ ಸರಕಾರ ನಮಗೂ ಅನುದಾನ ನೀಡಬೇಕು. ಉಪ್ಪಿನಂಗಡಿ, ಕಟಾರದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ 250 ಕೋಟಿ ಅನುದಾನಕ್ಕೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈಗಾಗಲೇ ಆಯುಷ್ ಇಲಾಖೆಗೆ 1.50 ಎಕ್ರೆ ಜಮೀನು, ಆರ್.ಟಿ.ಓ. ಟ್ಯಾoಕ್ ನಿರ್ಮಾಣ ಮಾಡಲು 5.30 ಎಕ್ರೆ , ಯುವ ಸಬಲೀಕರಣ, ಕ್ರೀಡಾ ಇಲಾಖೆ ಕ್ರೀಡಾಂಗಣಕ್ಕೆ 15 ಎಕ್ರೆ ಜಾಗ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಕಳೆದ ಅವಧಿಯಲ್ಲಿ ಸುಮಾರು 1476 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ 1010 ಕೋಟಿ ರೂ.ನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ರೂ.470 ಕೋಟಿ ಟೆಂಡರ್ ಆಗಿ ಬಿಡುಗಡೆಗೊಂಡಿದೆ. ತಿಂಗಳಲ್ಲಿ ಮುಖ್ಯಮಂತ್ರಿಗಳು ಶಿಲಾನ್ಯಾಸಕ್ಕೆ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ವಸತಿ ಯೋಜನೆಗಳನ್ನು ತರಿಸಲಾಗಿದೆ. ಅಂಬೇಡ್ಕರ್ ಮತ್ತು ಬಸವವಸತಿ ಯೋಜನೆಯಲ್ಲಿ 250 ಮನೆಗಳು ಮಂಜೂರುಗೊಂಡಿದೆ. ಪುತ್ತೂರಿನ ಸಾಂತ್ವನ ಕೇಂದ್ರದ ಕಟ್ಟಡ ದುರಸ್ತಿಗಾಗಿ ಪುರಸಭೆಯಲ್ಲಿ ಅನುದಾನ ದೊರಕದಿದ್ದಲ್ಲಿ ಶಾಸಕರ ವಿಶೇಷ ನಿಧಿಯನ್ನು ಬಳಸಿ ದುರಸ್ತಿ ಕಾರ್ಯ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮೆಡಿಕಲ್ ಕಾಲೇಜಿಗೆ ಪ್ರಯತ್ನ:
ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರಾತಿಗೆ ಸಂಬಂಧಿಸಿದಂತೆ 3 ತಿಂಗಳುಗಳಿಂದ ನಿರಂತರ ಪ್ರಯತ್ನ ನಡೆಸುತ್ತಿದ್ದೇನೆ. ಮುಖ್ಯಮಂತ್ರಿಗಳು ಮೌಖಿಕ ಒಪ್ಪಿಗೆ ನೀಡಿದ್ದಾರೆ. ಸಚಿವರಿಗೆ ಸೇರಿದಂತೆ ಎಲ್ಲರಿಗೂ ಮನವಿ ಮಾಡಿದ್ದೇನೆ. ರಾಜೀವಗಾಂಧಿ ವಿವಿಯಲ್ಲಿ ಸುಮಾರು ರೂ. 1600 ಕೋಟಿ ಡೆಪಾಸಿಟ್ ಇದೆ. ಅದರಿಂದ 10 ಮೆಡಿಕಲ್ ಕಾಲೇಜು ಆರಂಭಿಸಬಹುದು. ಈ ವಿಚಾರವೂ ಮುಖ್ಯಮಂತ್ರಿಗಳ ಗಮನದಲ್ಲಿದೆ. ಮೆಡಿಕಲ್ ಕಾಲೇಜು ವಿಚಾರದಲ್ಲಿ ಶೀಘ್ರ ಗುಣಾತ್ಮಕ ಬೆಳವಣಿಗೆ ನಡೆಯಲಿದೆ ಎಂದು ತಿಳಿಸಿದರು