ರಾಜ್ಯಪಾಲ ಥಾವರ ಚಂದ ಗೆಹ್ಲೋಟ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಜೆ ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆದಿದ್ದರು. ಆದರೆ ಕೆಲವು ಕಾರಣಗಳಿಂದ ವಿಶೇಷ ಸಚಿವ ಸಂಪುಟ ಸಭೆ ರದ್ದುಗೊಳಿಸಲಾಗಿದೆ.
ಸಂಜೆ 5 ಗಂಟೆಗೆ ನಿಗದಿಯಾಗಿದ್ದ ಸಂಪುಟ ಸಭೆ ರದ್ದಾಗಿದೆ. ಸಿಎಂ ಇಂದಿನ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ. ವೇಳಾಪಟ್ಟಿಯಂತೆ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ.
ರಾಜ್ಯದ ಎಲ್ಲಾ ಸಚಿವರು ಬೆಂಗಳೂರಿಗೆ ಆಗಮಿಸಬೇಕು ಎಂದು ಸೂಚಿಸಿ ಸಂಜೆ 5 ಗಂಟೆಗೆ ವಿಶೇಷ ಸಚಿವ ಸಂಪುಟ ಸಭೆ ನಿಗದಿ ಮಾಡಲಾಗಿತ್ತಿ. ಆದರೆ ಇದೀಗ ಮುಖ್ಯಮಂತ್ರಿಗಳು ವಿಶೇಷ ಸಚಿವ ಸಂಪುಟ ಸಭೆಯನ್ನು ದಿಢೀರ್ ರದ್ದುಗೊಳಿಸಿದ್ದಾರೆ.
ಬಲ್ಲ ಮೂಲಗಳ ಮಾಹಿತಿ ಪ್ರಕಾರ, ಎಐಸಿಸಿ ನಾಯಕರ ದೂರವಾಣಿ ಕರೆ ಹಿನ್ನಲೆಯಲ್ಲಿ ವಿಶೇಷ ಸಚಿವ ಸಂಪುಟ ಸಭೆಯನ್ನು ಸಿಎಂ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.
ರಾಜ್ಯವ್ಯಾಪಿ ಹೋರಾಟಕ್ಕೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ
ಪ್ರಾಸಿಕ್ಯೂಷನ್ ಸಂಬಂಧ ಎಐಸಿಸಿ ನಾಯಕರು ಸಿಎಂ ಸಿದ್ದರಾಮಯ್ಯಗೆ ದೂರವಾಣಿ ಕರೆ ಮಾಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಉಸ್ತುವಾರಿ ಸುರ್ಜೇವಾಲ ಕರೆ ಮಾಡಿದ್ದು, ಸಿಎಂ ಸಿದ್ದರಾಮಯ್ಯಗೆ ಅಭಯ ನೀಡಿದ್ದಾರೆ. ನಿಮ್ಮ ಜತೆ ನಾವಿದ್ದೇವೆ, ಧೈರ್ಯವಾಗಿರಿ. ಏನೇ ಆದರೂ ಕಾನೂನು ಹೋರಾಟ ನಡೆಸೋಣ ಅಂತ ಹೇಳೋ ಮೂಲಕ ರಾಜ್ಯವ್ಯಾಪಿ ಸಮರಕ್ಕೆ ರಣಕಹಳೆ ಮೊಳಗಿಸುವಂತೆ ಸೂಚನೆ ಕೊಟ್ಟಿದ್ದಾರೆ.