ಪುತ್ತೂರು: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ದಕ್ಷಿಣಕನ್ನಡ ಜಿಲ್ಲೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ.ಟ್ರಸ್ಟ್ ಇದರ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸುದೀರ್ಘ 23 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಮೇ 31 ರಂದು ನಿವೃತ್ತಿ ಹೊಂದಿರುವ ಡಾ| ಎಲ್.ಎಚ್. ಮಂಜುನಾಥ್ Dr. L.H. Manjunath ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆ ಮತ್ತು ತಾಲೂಕು ಜನಜಾಗೃತಿ ವೇದಿಕೆ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆಯ ಸರ್ವ ಸದಸ್ಯರ ವತಿಯಿಂದ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಹೇಳಿದರು.
ಜುಲೈ 13ರಂದು ಬೆಳಿಗ್ಗೆ 10ಕ್ಕೆ ಪುತ್ತೂರು ಕೊಟೇಚಾ ಹಾಲಿನಲ್ಲಿ ಅಭಿನಂದನಾ ಸಮಾರಂಭ ನಡೆಯಲಿದ್ದು, ಆಳ್ವಾಸ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ. ಮೋಹನ್ ಆಳ್ವ ಅಭಿನಂದನಾ ಭಾಷಣ ಮಾಡಲಿರುವರು. ಶಾಸ ಅಶೋಕ್ ಕುಮಾರ್ ರೈ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ವಸಂತ ಸಾಲಿಯಾನ್, ಶ್ರೀ ಕ್ಷೇತ್ರ ಧ.ಗ್ರಾ.ಯೋ. ಬಿ.ಸಿ. ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಮುಖ್ಯ ಅತಿಥಿಯಾಗಿರುವರು. ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ. ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಗೌರವ ಉಪಸ್ಥಿತರಿರುವರು ಎಂದರು.
ವೃತ್ತಿಯಲ್ಲಿ ಪಶುವೈದ್ಯರಾಗರುವ ಡಾ. ಎಲ್.ಎಚ್. ಮಂಜುನಾಥ್ ಅವರು, ಪಶುವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಹೈನುಗಾರರಿಗೆ ಮಾಹಿತಿ ಮಾರ್ಗದರ್ಶನ ಲೇಖನಗಳಿಂದ ಪರಿಚಿತರಾಗಿ ಮಣಿಪಾಲದ ಟಿ.ಎ.ಪೈ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರಥಮ ನಿರ್ದೇಶಕರಾಗಿ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರ, ಉಜಿರೆ ಮತ್ತು ಶಿವಳ್ಳಿ ಸಂಸ್ಥೆಗಳ ನಿರ್ದೇಶಕರಾಗಿ, ಸಿಂಡಿಕೇಟ್ ಬ್ಯಾಂಕ್‌ನ ಅಧಿಕಾರಿಯಾಗಿ 2001ರಲ್ಲಿ ಬ್ಯಾಂಕ್ ನಿಂದ ಸ್ವಯಂ ನಿವೃತ್ತಿ ಪಡೆದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಗ್ರಾಮಾಭಿವೃದ್ಧಿ ಯೋಜನೆಯನ್ನು ಪ್ರವೇಶ ಮಾಡಿದರು. ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಗ್ರಾಮಾಭಿವೃದ್ಧಿಯ ಕನಸನ್ನು ಸಾಕಾರಗೊಳಿಸುವಲ್ಲಿ ಶ್ರಮಿಸಿ ಪೂಜ್ಯರ ಮನಸ್ಸಿಗೆ ಸಂತೃಪ್ತಿಯ ಅಧಿಕಾರಿಯಾಗಿದ್ದರು ಎಂದರು.
ಇವರ ಅವಧಿಯು ಗ್ರಾಮಾಭಿವೃದ್ಧಿ ಯೋಜನೆಗೆ ಸುವರ್ಣಯುಗ. ವಿನೂತನ ಇತಿಹಾಸವನ್ನೇ ಯೋಜನೆಯಲ್ಲಿ ಸೃಷ್ಟಿ ಮಾಡಿ ದುರ್ಬಲರಲ್ಲಿ ಶಿಸ್ತು ಮೂಡಿಸಿ ಸಬಲೀಕರಣದ ಬೀಜಮಂತ್ರವನ್ನು ಉಪದೇಶಿಸುವ ಸ್ವ-ಸಹಾಯ ಸಂಘ ಚಳುವಳಿಯಲ್ಲಿ ವಿಸ್ತಾರವಾದ ಕಾರ್ಯ ಚಟುವಟಿಕೆಗಳನ್ನು ನಡೆಸಿ ಅನೇಕರ ನೋವುಗಳಿಗೆ ಧ್ವನಿಯಾಗಿದವರು ಇವರು.
ಪತ್ರಿಕಾಗೋಷ್ಠಿಯಲ್ಲಿ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ. ಸವಣೂರು, ಪುತ್ತೂರು ಅಧ್ಯಕ್ಷ ಲೊಕೇಶ್ ಹೆಗ್ಡೆ, ಜಿಲ್ಲಾ ನಿರ್ದೇಶಕ ಪ್ರವೀಣ್, ವಲಯ ಅಧ್ಯಕ್ಷ ಸತೀಶ್ ನಾಯಕ್, ಯೋಜನಾಧಿಕಾರಿ ಶಶಿಧರ್ ಉಪಸ್ಥಿತರಿದ್ದರು.