ಹುಟ್ಟು – ಬದುಕು – ಸಾವು ಹೀಗೆ ಎಲ್ಲದರಲ್ಲೂ ಒಂದಾಗಿ ಬದುಕಿರುವುದನ್ನು ಎಲ್ಲಾದರೂ ಕೇಳಿದ್ದೀರಾ? ಅಂತಹ ದೃಷ್ಟಾಂತಕ್ಕೆ ಸಾಕ್ಷಿಗಳಾಗಿ ಬದುಕಿದ ದಂಪತಿಗಳ ಕಥೆಯಿದು.
ಹುಟ್ಟಿದ್ದು ಒಂದೇ ದಿನಾಂಕದಂದು. ಓದಿದ್ದು ಒಂದೇ ಕಾಲೇಜಿನಲ್ಲಿ. ಮೃತಪಟ್ಟದ್ದು ಒಂದೇ ದಿನ. ಇದು ಹುಬ್ಬಳ್ಳಿ ಮೂಲದ ದಂಪತಿಗಳ ಸೋಜಿಗದ ಬದುಕು.
ಅಂದ ಹಾಗೇ ಉತ್ತರಾಖಂಡದ ಎತ್ತರದ ಪ್ರದೇಶ ಮೈಯಾಳಿಗೆ ಚಾರಣಕ್ಕೆ ತೆರಳಿದ ಸಂದರ್ಭ, ಅಲ್ಲಿನ ಹವಾಮಾನ ವೈಪರೀತ್ಯಕ್ಕೆ ಸಿಲುಕಿ ಇಬ್ಬರು ಕೊನೆಯುಸಿರೆಳೆದಿದ್ದಾರೆ.
ಉತ್ತರಾಖಂಡದ ಎತ್ತರದ ಸ್ಥಳ ಮೈಯಾಳಿಗೆ ಚಾರಣಕ್ಕೆ ತೆರಳಿದ್ದ ಕರ್ನಾಟಕದ 19 ಜನರ ಸದಸ್ಯರ ಪೈಕಿ 9 ಮಂದಿ ಹವಾಮಾನ ವೈಪರೀತ್ಯದಿಂದಾಗಿ ಮೃತಪಟ್ಟಿದ್ದರು. ಮೃತದೇಹಗಳನ್ನು ಉತ್ತರಾಖಂಡದಿಂದ ಏರ್ಲಿಫ್ಟ್ ಮಾಡಲಾಗಿದ್ದು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ.
ಮೃತಪಟ್ಟವರ ಪೈಕಿ ಹುಬ್ಬಳ್ಳಿ ಮೂಲದ ದಂಪತಿ ಕೂಡ ಇದ್ದು, ಇವರ ಸಾವು ಕುಟುಂಬಸ್ಥರು ಹಾಗೂ ಆಪ್ತರನ್ನು ದುಃಖದ ಮಡುವಿಗೆ ತಳ್ಳಿದೆ.
ಹುಬ್ಬಳ್ಳಿಯ ಹುಬ್ಬಳ್ಳಿಯ ವಿನಾಯಕ ಮುಂಗರವಾಡಿ ಹಾಗೂ ಸುಜಾತಾ ಮುಂಗರವಾಡಿ ಮೃತ ದುರ್ದೈವಿಗಳು.
ವಿಶೇಷವೆಂದರೆ, ಇವರಿಬ್ಬರ ಹುಟ್ಟಿದ ದಿನಾಂಕ ಒಂದೇ ಆಗಿದೆ. ವಿನಾಯಕ ಮುಂಗರವಾಡಿ (1969-10-03) ಹಾಗೂ ಸುಜಾತಾ ಮುಂಗರವಾಡಿ (1972-10-03). ಇಬ್ಬರೂ ಒಂದೇ ದಿನ ಮೃತಪಟ್ಟಿದ್ದು ಕಾಕತಾಳೀಯವೇ.
ಸುಜಾತ ಮತ್ತು ವಿನಾಯಕ ಮುಂಗರವಾಡಿ ಸಾವನ್ನಪ್ಪಿದ ದಂಪತಿಗಳಾಗಿದ್ದು, ಇಬ್ಬರು ಹುಬ್ಬಳ್ಳಿ ಬಿವಿಬಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡಿದ್ದರು. ಇಬ್ಬರೂ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು.
ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್ ಎಂಬ ಸಂಸ್ಥೆ ಹುಟ್ಟು ಹಾಕಿದ್ದ ವಿನಾಯಕ ಮುಂಗರವಾಡಿ, ಸುಜಾತಾ ಮುಂಗರವಾಡಿ ದಂಪತಿ ಸಮಾಜ ಸೇವೆಯಲ್ಲಿಯೂ ಮುಂದಿದ್ದರು. ಪ್ರತಿ ವರ್ಷ ಚಾರಣಕ್ಕೆ ಹೋಗುತ್ತಿದ್ದರು.
ಈ ಬಾರಿ ಮಕ್ಕಳನ್ನು ಕೂಡ ಚಾರಣಕ್ಕೆ ಕರೆದೊಯ್ಯಲು ದಂಪತಿ ಯೋಜನೆ ಹಾಕಿಕೊಂಡಿದ್ದರು. ಆದರೆ, ಅವರಿಗೆ ಕೇವಲ 2 ಟಿಕೆಟ್ ಮಾತ್ರ ದೊರೆತಿತ್ತು. ಹೀಗಾಗಿ ದಂಪತಿ ಮಾತ್ರ ಚಾರಣಕ್ಕೆ ಹೋಗಿದ್ದರು. ದಂಪತಿಯ ಸಾವಿನ ಸುದ್ದಿ ಕುಟುಂಬವನ್ನು ನೋವಿನ ಮಡುವಿಗೆ ದೂಡಿದೆ.