ದಿನಾ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಆಟೋ ಚಾಲಕ 10ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ನಡೆಸುತ್ತಿದ್ದ ಘಟನೆ ನಾಗ್ಪುರದ ಓಂಕಾರ್ ನಗರ ಪ್ರದೇಶದಲ್ಲಿ ನಡೆದಿದೆ.
ಶಾಲೆಯಿಂದ ಮನೆಗೆ ಕರೆದುಕೊಂಡು ಬರುತ್ತಿರುವ ಸಮಯದಲ್ಲಿ ಬಾಲಕಿಯನ್ನು ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋಗಿ ಕಿರುಕುಳ ನೀಡುತ್ತಿದ್ದ ಚಾಲಕ. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೀಗ ಆಕೆಯ ಪೋಷಕರು ಅಜ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಆಟೋ ಚಾಲಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಆಟೋ ರಿಕ್ಷಾದ ಹೊರಗೆ ನಿಂತಿರುವ ಚಾಲಕ ಮತ್ತು ಅಪ್ರಾಪ್ತ ಬಾಲಕಿ ಕುಳಿತಿದ್ದ ಹಿಂದಿನ ಸೀಟಿನಲ್ಲಿ ನುಸುಳುತ್ತಿರುವ ದೃಶ್ಯವು ಸೆರೆಯಾಗಿದೆ. ಆಟೋ ಚಾಲಕನ ಹೀನ ಕೃತ್ಯವನ್ನು ದೂರದಿಂದ ಮೊಬೈಲ್ನಲ್ಲಿ ಸೆರೆಹಿಡಿಯಲಾಗಿದೆ.
ಬಾಲಕಿ ಆತನನ್ನು ತನ್ನಿಂದ ದೂರ ಹೋಗುವಂತೆ ಸನ್ನೆ ಮಾಡುತ್ತಿರುವುದು ಕಂಡುಬಂದಿದೆ. ದುರದೃಷ್ಟಕರ ಘಟನೆಯಿಂದ ಬಾಲಕಿ ಇನ್ನೂ ಆಘಾತದಲ್ಲಿದ್ದಾಳೆ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿ ತಿಳಿಸಿದೆ. ಸುಮಾರು ಎರಡು ವರ್ಷಗಳಿಂದ ಆಟೋ ಚಾಲಕ ಬಾಲಕಿಯನ್ನು ಕರೆದುಕೊಂಡು ಹೋಗುತ್ತಿದ್ದ ಎಂಬುದು ಗಮನಕ್ಕೆ ಬಂದಿದೆ.
ಇದೀಗ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಪೊಲೀಸರು ಚಾಲಕನನ್ನು ಹುಡುಕಿ ಕೆಲವೇ ಗಂಟೆಗಳಲ್ಲಿ ಆತನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಆಕೆಯ ಪೋಷಕರು ಅಜ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಆಟೋ ಚಾಲಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.


























