ಸ್ಥಳೀಯ

ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಸುಬ್ರಾಯ ಭಟ್ ನೀರ್ಕಜೆ ಅವರಿಗೆ ನೇಸರ ವತಿಯಿಂದ ಗೌರವಾರ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

ಸಮಾಜಮುಖಿ ಚಿಂತನೆಗಳಿಗೆ ಸದಾ ಪ್ರೋತ್ಸಾಹ, ಸಹಕಾರ ನೀಡುವ ಸುಬ್ರಾಯ ಭಟ್ ನೀರ್ಕಜೆ ಅವರಿಗೆ ಅರ್ಹವಾಗಿ ರಾಜ್ಯ ಸಮಾಜ ಸೇವಾ ರತ್ನ ಪ್ರಶಸ್ತಿ ಲಭಿಸಿದೆ. ಹಾಗಾಗಿ ಜನಪರ ಕಾಳಜಿಯ ಚಿಂತನೆಯುಳ್ಳ ನೇಸರ ಯುವಕ ಮಂಡಲಕ್ಕೂ ನಿಮ್ಮನ್ನು ಅಭಿನಂದಿಸಲು ಹೆಮ್ಮೆಯಾಗುತ್ತಿದೆ ಎಂದು ಮುಕ್ಕೂರು ನೇಸರ ದಶಪ್ರಣತಿ ಸಮಿತಿಯ ಅಧ್ಯಕ್ಷ ಡಾ|ನರಸಿಂಹ ಶರ್ಮ ಕಾನಾವು ಹೇಳಿದರು.

Shani-pooja

ಮುಕ್ಕೂರು ನೇಸರ ಯುವಕ ಮಂಡಲ, ನೇಸರ ದಶಪ್ರಣತಿ ಸಮಿತಿ, ನೇಸರ ಯುವತಿ ಮಂಡಲ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಪ್ರಗತಿಪರ ಕೃಷಿಕ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ, ನೇಸರ ದಶಪ್ರಣತಿ ಸಮಿತಿ ಉಪಾಧ್ಯಕ್ಷ ಸುಬ್ರಾಯ ಭಟ್ ನೀರ್ಕಜೆ ಅವರಿಗೆ ಕನ್ನಡ ಫಿಲಂ ಚೇಂಬರ್ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದ ಹಿನ್ನೆಲೆಯಲ್ಲಿ ಮಾ.6 ರಂದು ಬೆಳಗ್ಗೆ ನೀರ್ಕಜೆ ನಿವಾಸದಲ್ಲಿ ಅವರನ್ನು ಸಮ್ಮಾನಿಸಿ ಅವರು ಮಾತನಾಡಿದರು. 

ಪ್ರಗತಿಪರ ಕೃಷಿಕನಾಗಿ ಸಮಾಜದ ಆಗು ಹೋಗುಗಳಿಗೆ ಸ್ಪಂದಿಸುವ ಸುಬ್ರಾಯ ಭಟ್ ಅವರು ಸರಳತೆ, ಸ್ನೇಹ ಪರ ವ್ಯಕ್ತಿತ್ವದ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡವರು. ಜನವರಿಯಲ್ಲಿ ನಡೆದ ನೇಸರ ದಶಪ್ರಣತಿಯ ಯಶಸ್ಸಿನಲ್ಲಿಯು ಕೊಡುಗೆ ನೀಡಿದವರು ಎಂದರು.

ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಮುಕ್ಕೂರು ಶಾಲೆ, ಪೆರುವಾಜೆ ಮಂಡಲ ಪಂಚಾಯತ್ ಸ್ಥಾಪನೆ ಸಂದರ್ಭದಲ್ಲಿ ನೀರ್ಕಜೆ ಮನೆಯವರ ಕೊಡುಗೆ ಸ್ಮರಣೀಯ. ತಂದೆ ಶಂಭು ಭಟ್ ಅವರ ಕಾಲದಿಂದ ಬಂದ ದಾನ, ಧರ್ಮದ ಪರಂಪರೆಯನ್ನು ಮಕ್ಕಳು ಮುಂದುವರಿಸಿಕೊಂಡು ಹೋಗಿರುವುದನ್ನು ಕಾಣಬಹುದು. ಊರು ಪ್ರೀತಿಸುವ, ಗೌರವಿಸುವ ಮನೆತನದ ಸುಬ್ರಾಯ ಭಟ್ ಅವರಿಗೆ ರಾಜ್ಯ ಮಟ್ಟದ ಗೌರವ ಸಂದಿರುವುದು ಖುಷಿಯ ಸಂಗತಿ ಎಂದರು.

ನೇಸರ ದಶಪ್ರಣತಿ ಸಮಿತಿಯ ಸಂಚಾಲಕ ಕುಂಬ್ರ ದಯಾಕರ ಆಳ್ವ ಮಾತನಾಡಿ, ಸುದೀರ್ಘ ಕಾಲದಿಂದ ಸುಬ್ರಾಯ ಭಟ್ ನೀರ್ಕಜೆ ಕುಟುಂಬದೊಂದಿಗೆ ಸಂಪರ್ಕ ಹೊಂದಿದ್ದೇನೆ. ಮನೆಗೆ ಬಂದಾಗ ಅವರ ಆತಿಥ್ಯ, ತೋರುವ ಪ್ರೀತಿಗೆ ಬೆಲೆ ಕಟ್ಟಲಾಗದು. ಸಮಾಜಕೋಸ್ಕರ ಮಿಡಿಯುವ ಅವರ ಕಾಳಜಿಗೆ ಸಂದ ಗೌರವ ಇದಾಗಿದೆ. ಅವರನ್ನು ನೇಸರ ಸಂಸ್ಥೆ ಅವರ ನಿವಾಸದಲ್ಲೇ ಅರ್ಥಪೂರ್ಣ ರೀತಿಯಲ್ಲಿ ಅಭಿನಂದಿಸಿದೆ ಎಂದರು.

ನೇಸರ ದಶಪ್ರಣತಿ ಸಮಿತಿ ಉಪಾಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ಅರ್ಹತೆಯಿಂದ ಪ್ರಶಸ್ತಿ ಸಿಕ್ಕಾಗ ಪ್ರಶಸ್ತಿಗೂ ಒಂದು ಮೌಲ್ಯ ಬರುತ್ತದೆ. ಸುಬ್ರಾಯ ಭಟ್ ಅವರಿಗೆ ಅರ್ಹತೆಯಿಂದಲೇ ಪ್ರಶಸ್ತಿ ದೊರೆತಿದೆ. ದೇವಾಲಯ, ಶಾಲೆಯ ಅಭಿವೃದ್ಧಿಗೆ ಅವರು ನೀಡಿದ ಸಹಕಾರ ಸ್ಮರಣೀಯ. ಹಾಗಾಗಿ ರಾಜ್ಯಮಟ್ಟದ ಪ್ರಶಸ್ತಿ ಈ ಊರ ಮಣ್ಣಿಗೆ ಸಿಕ್ಕ ಗೌರವ ಎಂದರು.

ನೇಸರ ದಶಪ್ರಣತಿ ಸಮಿತಿ ಸದಸ್ಯ ಮೋಹನ ಬೈಪಡಿತ್ತಾಯ ಮಾತನಾಡಿ, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸುವ ಒಳ್ಳೆಯ ಕಾರ್ಯಕ್ರಮ ನೇಸರದ ಮೂಲಕ ಆಗಿದೆ. ಸುಬ್ರಾಯ ಭಟ್ ಅವರ ಸಾಧನೆ ಉಳಿದವರಿಗೆ ಪ್ರೇರಣೆ ಆಗಲಿ ಎಂದರು.

ಗೌರವ ಸ್ವೀಕರಿಸಿದ ಸುಬ್ರಾಯ ಭಟ್ ನೀರ್ಕಜೆ ಮಾತನಾಡಿ, ಊರಿನ ಪ್ರತಿ ಮನೆಯವರು, ಸಂಘ ಸಂಸ್ಥೆಗಳು ನನ್ನನ್ನು ಗುರುತಿಸಿ ನೀಡಿದ ಪ್ರೋತ್ಸಾಹದಿಂದ ನನಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಇದನ್ನು ನಾನು ನನ್ನ ತಂದೆ ತಾಯಿಗೆ ಅರ್ಪಿಸುವೆ. ನೇಸರ ಸಂಸ್ಥೆಯವರ ಪ್ರೀತಿಗೆ ಸದಾ ಕಾಲ ಚಿರಖುಣಿಯಾಗಿರುವೆ ಎಂದರು.

ಸರ್ ಪ್ರೈಸ್ ಸಮ್ಮಾನ

ನೇಸರ ಸಂಸ್ಥೆಯ ವತಿಯಿಂದ ಸುಬ್ರಾಯ ಭಟ್ ಅವರಿಗೆ ಗೌರವಾರ್ಪಣೆ ಸಲ್ಲಿಸುವ ಬಗ್ಗೆಅವರಿಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ. ಮುಂಜಾನೆ ನೇಸರ ಉದಯಿಸಿದ ಕೆಲ ತಾಸಿನಲ್ಲಿಯೇ ನೇಸರ ಕುಟುಂಬದ ಸದಸ್ಯರು ನೀರ್ಕಜೆ ಮನೆಗೆ ತೆರಳಿ ಸುಬ್ರಾಯ ಭಟ್ ಮತ್ತು ವೀಣಾ ಎಸ್ ಭಟ್ ಅವರಿಗೆ ಗೌರವಾರ್ಪಣೆ ಸಲ್ಲಿಸಿತ್ತು. ಈ ಸರ್ ಪ್ರೈಸ್ ಸಮ್ಮಾನ ಕಂಡು ದಂಪತಿ ಖುಷಿಪಟ್ಟರು.

ಈ ಸಂದರ್ಭದಲ್ಲಿ ನೇಸರ ದಶಪ್ರಣತಿ ಸಮಿತಿ ಸದಸ್ಯ ಸಂಪತ್ ಕುಮಾರ್ ರೈ ಪಾತಾಜೆ, ಪ್ರಗತಿಪರ ಕೃಷಿಕರಾದ ರಾಮಚಂದ್ರ ಭಟ್ ಕೋಡಿಬೈಲು, ಗಣಪತಿ ಭಟ್ ನೀರ್ಕಜೆ, ಗ್ರಾ.ಪಂ. ಮಾಜಿ ಸದಸ್ಯೆ ಗುಲಾಬಿ ಬೊಮ್ಮೆಮ್ಮಾರು, ನೇಸರ ದಶಪ್ರಣತಿ ಸಮಿತಿ ಸದಸ್ಯರಾದ ಜಯಂತ ಕೊಡಂಗೆ, ಕೃಷ್ಣಪ್ಪ ಜರಿಯಡ್ಕ, ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು, ಕೋಶಾಧಿಕಾರಿ ರಕ್ಷಿತ್ ಗೌಡ ಕಾನಾವು, ಸದಸ್ಯರಾದ ಕುಸುಮಾಧರ ಪೂಜಾರಿ ಅಡ್ಯತಕಂಡ, ಶ್ರೀಧರ ಗೌಡ ಕೊಂಡೆಪ್ಪಾಡಿ, ಜಯಂತ ಕುಂಡಡ್ಕ, ಭರತ್ ಬೊಣ್ಯಕುಕ್ಕು, ರವಿ ಕುಂಡಡ್ಕ, ಶೀನ ಅನವುಗುಂಡಿ, ಪ್ರವೀಣ್ ಬೋಳಕುಮೇರು, ವೆಂಕಟರಮಣ ಕುಂಡಡ್ಕ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 122