ಸ್ಥಳೀಯ

ಮಹಿಳಾ ಕಾಲೇಜು ಪ್ರಾಂಶುಪಾಲರ ಅಮಾನತು: ಶಾಸಕರ ಸೇಡಿನ ರಾಜಕಾರಣ-ಮಠಂದೂರು

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರನ್ನು ಅಮಾನತು ಮಾಡಿರುವ ಕ್ರಮ ರಾಜಕೀಯ ಸೇಡಿನ ಭಾಗವಾಗಿ ಕಾಣುತ್ತಿದೆ ಎಂದು ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು ಎಂದು ಹೇಳಿದರು. ಪ್ರತಿಭಟನೆಗೆ ಅನುಮತಿ ಕಡ್ಡಾಯ ಎನ್ನುವ ನಿಯಮ ಇಲ್ಲ. ಮುಖ್ಯವಾಗಿ, ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ಅಥವಾ ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗಿಲ್ಲ ಎಂಬುದನ್ನು ಅವರು ಉಲ್ಲೇಖಿಸಿದರು.

ವಿದ್ಯಾರ್ಥಿನಿಯರು 18 ವರ್ಷ ಮೇಲ್ಪಟ್ಟ ಪ್ರಬುದ್ಧರು. ದೇಶದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿ ಪ್ರತಿಭಟನೆಗಳು ನಡೆದಿರುವುದನ್ನು ನಾವು ನೋಡಿದ್ದೇವೆ. ಆದರೆ ಇಂತಹ ಸಂದರ್ಭಗಳಲ್ಲಿ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳುವುದು ಅಪರೂಪ ಎಂದು ಅವರು ಅಭಿಪ್ರಾಯಪಟ್ಟರು.ಕಾಲೇಜಿನಲ್ಲಿ ಉಂಟಾದ ಸಮಸ್ಯೆಗಳ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಉಲ್ಲೇಖಿಸಿದ ಮಠಂದೂರು, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರುವ ಸ್ಥಳೀಯ ಶಾಸಕರಿಗೆ ಈ ವಿಚಾರ ಗೊತ್ತಿರಬೇಕಿತ್ತು ಎಂದು ಹೇಳಿದರು. ಶಾಸಕರ ಗಮನಕ್ಕೆ ವಿಷಯ ಬಂದಿರಲಿಲ್ಲವೆಂದರೆ, ಕಾಲೇಜಿನ ಮೇಲಿನ ಅವರ ಗಮನದ ಬಗ್ಗೆ ಪ್ರಶ್ನೆ ಏಳುತ್ತದೆ ಎಂದರು.

ಪ್ರತಿಭಟನೆ ನಡೆಯುವ ಕುರಿತು ಕಾಲೇಜು ಆಡಳಿತದಿಂದಲೇ ಶಾಸಕರಿಗೆ ಮುನ್ಸೂಚನೆ ನೀಡಲಾಗಿದೆ ಎಂಬ ಮಾಹಿತಿಯೂ ಇದೆ. ಆದರೂ ಪ್ರಾಂಶುಪಾಲರ ವಿರುದ್ಧ ಅಮಾನತು ಕ್ರಮ ಕೈಗೊಂಡಿರುವುದು ಸೇಡಿನ ರಾಜಕಾರಣದಂತೆ ಕಾಣುತ್ತದೆ ಎಂದು ಅವರು ಟೀಕಿಸಿದರು.ಅಮಾನತು ಕ್ರಮಕ್ಕೊಳಗಾದ ಪ್ರಾಂಶುಪಾಲರು ಮಹಿಳೆಯಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜೊತೆಗೆ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿರುವವರು ಎಂಬುದನ್ನೂ ಉಲ್ಲೇಖಿಸಿದ ಮಠಂದೂರು, ಇಂತಹ ಸಂದರ್ಭದಲ್ಲಿ ಕ್ರಮ ಕೈಗೊಳ್ಳುವುದು ಮಹಿಳೆಯರ ಬಗ್ಗೆ ಶಾಸಕರ ಕಾಳಜಿ ಎಷ್ಟಿದೆ ಎಂಬ ಪ್ರಶ್ನೆಯನ್ನು ಎಬ್ಬಿಸುತ್ತದೆ ಎಂದು ಹೇಳಿದರು.ಈ ವಿಚಾರದಲ್ಲಿ ಸರ್ಕಾರ ತಕ್ಷಣವೇ ಸಮಗ್ರ ಪರಿಶೀಲನೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರಿನಲ್ಲಿ ಯುವ ನ್ಯಾಯವಾದಿಗಳಿಗೆ ಐಎಎಸ್–ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಗಾರ

ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಹಾಗೂ ವಕೀಲರ ಸಂಘ ಪುತ್ತೂರು ಇವರ…

1 of 120