ಪುತ್ತೂರು: ಹಂಟ್ಯಾರ್ ಉನ್ನತೀಕರಿಸಿದ ಹಿ.ಪ್ರಾ. ಶಾಲೆಗೆ ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಯತೀಶ್ ದೇವ ಅವರು ಕೊಡುಗೆಯಾಗಿ ನೀಡಿದ ಗೋದ್ರೇಜನ್ನು ಶುಕ್ರವಾರ ಹಸ್ತಾಂತರಿಸಲಾಯಿತು.
ಊರಿಗೆ ದೊಡ್ಡ ವ್ಯಕ್ತಿಯಾಗಿ ಬೆಳೆಯಲಿ: ಬಾಬು ಮರಿಕೆ
ಎಸ್.ಡಿ.ಎಂ.ಸಿ ಅಧ್ಯಕ್ಷ ಬಾಬು ಮರಿಕೆ ಮಾತನಾಡಿ, ಒಳಿತು ಮಾಡು ಮನುಷ… ಎಂಬ ಮಾತಿದೆ. ಹೀಗೆ ಮಾಡಿದ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ಯತೀಶ್ ದೇವ ಅವರು ತಮ್ಮ ಸ್ವಂತ ಹಣದಿಂದ ಗೋದ್ರೇಜ್ ನೀಡಿದ್ದಾರೆ. ನೇರ ನಡೆ ನುಡಿಯ ಯತೀಶ್ ದೇವ ಅವರು, ಹಂಟ್ಯಾರ್ ಶಾಲೆಯ ಬಗ್ಗೆ ತುಂಬಾ ಕಾಳಜಿ ಹೊಂದಿದ್ದಾರೆ. ಆರ್ಯಾಪು ಗ್ರಾಪಂನ ಸದಸ್ಯತ್ವದ ಅವರ ಅವಧಿ ಮುಗಿಯಬಹುದು. ಆದರೆ ಈ ಊರಿಗೆ ಅವರು ದೊಡ್ಡ ವ್ಯಕ್ತಿ ಆಗಿ ಬರಬೇಕು ಎಂದು ಹಾರೈಸಿದರು.
ಊರಿನ ಬಗ್ಗೆ ಕಾಳಜಿ ಹೊಂದಿರುವ ನಮ್ಮೂರಿನ ಅಳಿಯ: ಗೀತಾ
ಆರ್ಯಾಪು ಗ್ರಾಪಂ ಅಧ್ಯಕ್ಷೆ ಗೀತಾ ಮಾತನಾಡಿ, ಯತೀಶ್ ದೇವ ಅವರು ಊರಿಗೆ ಅಳಿಯನಾದರೂ, ನಮ್ಮ ಊರಿನ ಬಗ್ಗೆ ಬಹಳ ಕಾಳಜಿ ಹೊಂದಿದ್ದಾರೆ. ಗ್ರಾಪಂನಲ್ಲೂ ಅಷ್ಟೇ, ನನ್ನ ಬಳಿ ಬಂದು ಮುಂದೆ ಏನಾಗಬೇಕು? ಹೇಗೆ ಕೆಲಸ ನಿರ್ವಹಿಸಬಹುದು ಎನ್ನುವುದರ ಬಗ್ಗೆ ಚರ್ಚೆ ಮಾಡುತ್ತಿರುತ್ತಾರೆ. ಊರಿನ ಬಗ್ಗೆ, ಗ್ರಾಮ ಪಂಚಾಯತ್ ಬಗ್ಗೆ ಕಾಳಜಿ ಹೊಂದಿದ್ದಾರೆ ಎಂದರು.
ವಿದ್ಯಾರ್ಥಿನಿ ಮನೆಗೆ ಶೌಚಾಲಯ ಕೊಡುಗೆಯನ್ನು ನೆನಪಿಸಿಕೊಂಡ ಶಿಕ್ಷಕಿ ವತ್ಸಲಾ
ಪ್ರೌಢಶಾಲಾ ಸಹಶಿಕ್ಷಕಿ ವತ್ಸಲಾ ಮಾತನಾಡಿ, ಶಾಲೆಗೆ ಯಾವುದೇ ಬೇಡಿಕೆಗಳಿದ್ದಾಗಲೂ ಮೊದಲು ನಾವು ಕರೆ ಮಾಡುವುದೇ ಯತೀಶ್ ದೇವ ಅವರಿಗೆ ನಂತರ ಹರೀಶ್ ನಾಯಕ್ ಬಳಕ್ಕ ಅವರಿಗೆ. ಗ್ರಾಪಂ ಅನುದಾನಗಳ ಬಗ್ಗೆಯೂ ವಿಚಾರಿಸುವ ಯತೀಶ್ ದೇವ ಅವರು, ಶಾಲೆಗೆ ಅದನ್ನು ಒದಗಿಸಿಕೊಡುವ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಸಿಂಟೆಕ್ಸ್ ಟ್ಯಾಂಕಿನಿಂದ ಈಗ ನೀಡಿದ ಗೋದ್ರೇಜ್ ವರೆಗೆ ಅನೇಕ ಕೊಡುಗೆಗಳನ್ನು ತಮ್ಮ ಸ್ವಂತ ಖರ್ಚಿನಿಂದ ನೀಡಿದ್ದಾರೆ. ಮಕ್ಕಳ ಗ್ರಾಮಸಭೆ ನಡೆಯುವಾಗಲೂ ಏನು ಮಾತನಾಡಬೇಕು ಎನ್ನುವುದನ್ನು ಅವರು ವಿವರಿಸಿ ತಿಳಿಸಿಕೊಡುತ್ತಾರೆ ಎಂದು ಶ್ಲಾಘಿಸಿದರು.
ಯತೀಶ್ ದೇವ ಅವರು ನಮ್ಮೂರಿನ ಅಳಿಯ. ಆದರೆ ಮಗನ ರೀತಿ ಊರಿನ ಜೊತೆ ನಿಂತಿದ್ದಾರೆ. ಈ ಹಿಂದೆ ಶಾಲಾ ವಿದ್ಯಾರ್ಥಿನಿಯೋರ್ವಳ ಮನೆಯಲ್ಲಿ ಶೌಚಾಲಯ ಇಲ್ಲ ಎಂದು ಯತೀಶ್ ದೇವ ಅವರಿಗೆ ತಿಳಿಸಿದಾಗ ದಾನಿಗಳ ಸಹಕಾರದೊಂದಿಗೆ ಮನೆಗೆ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ ಎಂದು ನೆನಪಿಸಿಕೊಂಡರು.
ಪ್ರತಿ ಮನೆಯಲ್ಲೂ ಯತೀಶ್ ದೇವ ಹೆಸರು: ದೇವಕಿ
ನಿವೃತ್ತ ಪದವೀಧರೇತರ ಮುಖ್ಯಶಿಕ್ಷಕಿ ದೇವಕಿ ಮಾತನಾಡಿ, ಪ್ರತಿ ಮನೆಯಲ್ಲೂ ಯತೀಶ್ ದೇವ ಅವರ ಹೆಸರು ಧ್ವನಿಸುತ್ತಿದೆ. ಅದು ಅವರು ಮಾಡಿರುವ ಸಮಾಜಮುಖಿ ಕೆಲಸಗಳಿಗೆ ಸಾಕ್ಷಿ. ಈಗ ಗ್ರಾಪಂ ಸದಸ್ಯ. ಇನ್ನು ಒಂದೊಂದೇ ಹೆಜ್ಜೆ ಮುಂದಕ್ಕೆ ಹೋಗುತ್ತಾ, ದೊಡ್ಡ ಹುದ್ದೆಯನ್ನು ಅಲಂಕರಿಸುವಂತಾಗಲಿ. ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ನಲ್ಲಿ ಅವರಿಗೆ ಹುದ್ದೆ ಸಿಗುವಂತಾಗಲಿ. ಅವರು ನೀಡುವ ಕೊಡುಗೆಗಳ ಬಗ್ಗೆ ಮೊದಲೇ ಎಲ್ಲಿಯೂ ಹೇಳುವುದಿಲ್ಲ. ಯಾವುದೇ ಭರವಸೆ ನೀಡದೇ, ಕೊಡುಗೆಯನ್ನು ನೀಡುತ್ತಾರೆ. ಅವರು ಕೊಡುಗೆಯಾಗಿ ನೀಡಿದ ಗೋದ್ರೇಜ್ ಉತ್ತಮವಾಗಿದೆ. ಅವರ ಜ್ಞಾನ ಸಂಪತ್ತು, ಉದಾರ ಮನಸ್ಸು ಅವರಿಗಿದೆ. ಅವರು ತುಂಬಿದ ಕೊಡ ಎಂದರು.
ನನ್ನ ಬೆಳವಣಿಗೆಗೂ ಹಂಟ್ಯಾರ್ ಶಾಲೆಯ ಕೊಡುಗೆ ಇದೆ: ಯತೀಶ್ ದೇವ
ಆರ್ಯಾಪು ಗ್ರಾಪಂ ಸದಸ್ಯ ಯತೀಶ್ ದೇವ ಮಾತನಾಡಿ, ನನ್ನ ಪತ್ನಿ, ಮಾವ ಇದೇ ಶಾಲೆಯ ಹಳೆ ವಿದ್ಯಾರ್ಥಿಗಳು. ಶಾಲೆಯ ಪಕ್ಕದಲ್ಲೇ ನನ್ನ ಮನೆಯೂ ಇರುವುದರಿಂದ ಹಂಟ್ಯಾರು ಶಾಲೆಯ ಬಗ್ಗೆ ನನಗೆ ವಿಶೇಷ ಮಮತೆ. ವೈಯಕ್ತಿಕವಾಗಿ ನನ್ನ ಬೆಳವಣಿಗೆಗೂ ಹಂಟ್ಯಾರು ಶಾಲೆ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಸಂಘಟನೆ, ಎಸ್.ಡಿ.ಎಂ.ಸಿ. ಸಹಕಾರ ಸಾಕಷ್ಟಿದೆ. ಹಾಗಾಗಿ ಈ ಶಾಲೆಗೆ ಅಗತ್ಯವಿರುವ ವಸ್ತುಗಳನ್ನು ನನ್ನಿಂದಾದಷ್ಟು ಕೊಡುಗೆಯಾಗಿ ನೀಡುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ ಎಂದರು.
ಆರ್ಯಾಪು ಗ್ರಾಪಂ ಸದಸ್ಯ ಹರೀಶ್ ನಾಯಕ್ ಬಳಕ್ಕ, ಶಿಕ್ಷಕಿ ವಿದ್ಯಾ ಕೆ., ಗೌರವ ಶಿಕ್ಷಕಿ ಪ್ರಮೀಳಾ, ಶಾಲಾ ನಾಯಕಿ ಪೂಜಾಶ್ರೀ, ಹಿರಿಯ ವಿದ್ಯಾರ್ಥಿ ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಚಂದ್ರಾವತಿ ಸ್ವಾಗತಿಸಿ, ಮೋಹಿನಿ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಿದರು.
























