ಪುತ್ತೂರು: 5.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ತಾಲೂಕು ಪಂಚಾಯತ್ ನೂತನ ಕಚೇರಿ ಕಟ್ಟಡದ ಶಂಕುಸ್ಥಾಪನಾ ಸಮಾರಂಭ ಶನಿವಾರ ದರ್ಬೆ ಎಸಿ ಕ್ವಾರ್ಟ್ಸಸ್ ಬಳಿ ನಡೆಯಿತು.
ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ತಾಲೂಕು ಪಂಚಾಯತ್ ಕಟ್ಟಡ ನಿರ್ಮಾಣದ ಹಿಂದೆ ಹೆಚ್ಚಿನ ಶ್ರಮ ಇರುವುದು ನವೀನ್ ಭಂಡಾರಿ ಅವರದ್ದು. ಇದಕ್ಕಾಗಿ 25 ಬಾರಿ ಬೆಂಗಳೂರಿಗೆ ಬಂದಿದ್ದಾರೆ. 50 ಲಕ್ಷ ರೂ.ವನ್ನು 5.5 ಲಕ್ಷ ರೂಪಾಯಿಗೆ ಹೆಚ್ಚಿಸುವಲ್ಲಿ ನಾನೆಷ್ಡು ಶ್ರಮ ವಹಿಸಿದ್ದೇನೋ, ಅದಕ್ಕಿಂತ ಹೆಚ್ಚು ನವೀನ್ ಭಂಡಾರಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಪುತ್ತೂರು ಜಿಲ್ಲೆ ಆಗುವ ಹಂತಕ್ಕೆ ಬಂದಿದೆ. ಆದರೆ ಇದಕ್ಕೆ ಅಗತ್ಯವಾದ ಸಭೆಗಳನ್ನು ನಡೆಸಲು ದೊಡ್ಡ ಸಭಾಂಗಣ ಹಾಗೂ ಇನ್ನಿತರ ಅವಶ್ಯಕ ಕೆಲಸಗಳ ಅಗತ್ಯವಿದೆ. ಹಾಗಾಗಿ ಇನ್ನಷ್ಟು ಕಾಮಗಾರಿಗಳು ನಡೆಯಲಿಕ್ಕಿದೆ ಎಂದರು.
ಮುಂದಿನ 2-4 ತಿಂಗಳಲ್ಲಿ ಸಿಟಿ ಬಸ್ ನಗರದಲ್ಲಿ ಓಡಾಡಲಿದೆ. ಆಗ ದರ್ಬೆಯ ಈ ತಾಪಂ ಕಟ್ಟಡ ದೂರ ಆಗದು. ರಿಕ್ಷಾ ಚಾಲಕರಿಗೆ ತೊಂದರೆ ಆಗುತ್ತದೆ ಎಂದು ಸ್ಬಲ್ಪ ವಿಳಂಬ ಮಾಡಿದ್ದೇವೆ. ಆ ಎಲ್ಲಾ ಸಮಸ್ಯೆಗಳು ದೂರವಾಗಿ, ಸಿಟಿ ಬಸ್ ಓಡಾಡಲಿದೆ ಎಂದರು.
ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಪಂಚಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪೆರ್ನೆ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಜಿಪಂ ಇಂಜಿನೀಯರಿಂಗ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಭರತ್ ಉಪಸ್ಥಿತರಿದ್ದರು.
ತಾಪಂ ಇಓ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಭರತ್ ಕಾರ್ಯಕ್ರಮ ನಿರೂಪಿಸಿದರು.


























