ಪುತ್ತೂರು: ಎಸ್.ಕೆ. ಗೋಲ್ಡ್’ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿಯ ವಜ್ರಮಹೋತ್ಸವ ಪ್ರಯುಕ್ತ ಪುತ್ತೂರು ಶಾಖೆಯ ಸದಸ್ಯ ಗ್ರಾಹಕರ ಸಮಾವೇಶ ಶನಿವಾರ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿದ್ದ ಚಿದಾನಂದ ಬೈಲಾಡಿ ಮಾತನಾಡಿ, ಸಹಕಾರ ಬ್ಯಾಂಕ್ ಗಳು ಕರಾವಳಿಯ ಗ್ರಾಹಕರ ಜೀವನಾಡಿಯಾಗಿ ಕೆಲಸ ನಿರ್ವಹಿಸುತ್ತಾ ಇದೆ. ಈ ಸಂಬಂಧವನ್ನು ಕೃಷ್ಣ ಹಾಗೂ ಕುಚೇಲನಿಗೆ ಹೋಲಿಸಬಹುದು. ಕೃಷ್ಣ ಹಾಗೂ ಕುಚೇಲನ ನಡುವೆ ಸಮಾನತೆಯನ್ನು ನಾವು ಕಾಣಬಹುದು. ಎಸ್.ಕೆ.ಜಿ. ಸೊಸೈಟಿ ಗ್ರಾಹಕರನ್ನು ದೇವರಾಗಿ ಕಾಣುತ್ತಾ ಇದೆ. ಆದ್ದರಿಂದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರ ಪರಿಣಾಮ ಸೊಸೈಟಿ 5 ಬಾರಿ ಸಾಧನಾ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ ಎಂದರು.
ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಿಗುವ ಸೇವೆಗೂ ಸಹಕಾರಿ ಸಂಘದ ಸೇವೆಗೂ ಅಜಗಜಾಂತರ. ಕೆಲವೇ ಗಂಟೆಯಲ್ಲಿ ಸೇವೆ ಸಿಕ್ಕಿದ್ದರೆ ಅದು ಸಹಕಾರ ಸಂಘದಿಂದ ಮಾತ್ರ. ಸಹಕಾರ ಕ್ಷೇತ್ರವನ್ನು ಗ್ರಾಹಕರು ಉಳಿಸಿ ಬೆಳೆಸಬೇಕು. ಆಗ ಸಹಕಾರ ಕ್ಷೇತ್ರವು ಗ್ರಾಹಕರನ್ನು ಬೆಳೆಸುತ್ತದೆ ಎಂದರು.
ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ್ ಆಚಾರ್ಯ ಕೆ. ಮಾತನಾಡಿ, ಎಸ್.ಕೆ.ಜಿ ಬ್ಯಾಂಕ್ ಪುತ್ತೂರು ಶಾಖೆಗೆ 48 ವರ್ಷ. ಇದರಲ್ಲಿ ಕಳೆದ 47 ವರ್ಷಗಳಿಂದ ಬ್ಯಾಂಕ್ ಜೊತೆ ವ್ಯವಹಾರ ಸಂಬಂಧ ಇಟ್ಟುಕೊಂಡಿದ್ದೇನೆ. ಈ ಸಂಸ್ಥೆ ರಾಜ್ಯವ್ಯಾಪಿ ಹರಡಲಿ. ಮುಂದಿನ ಕೆಲ ಸಮಯಗಳಲ್ಲೇ ಸಂಸ್ಥೆಗೆ ಸ್ವಂತ ಕಟ್ಟಡ ಲಭಿಸಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಉಪೇಂದ್ರ ಆಚಾರ್ಯ ಮಾತನಾಡಿ, ಸ್ವಂತ ಕಟ್ಟಡದಲ್ಲಿ ಕಚೇರಿ ನಡೆಸುವ ಆಶಾಭಾವನೆ ಹೊಂದಿದ್ದೇವೆ. ಸದಸ್ಯ ಗ್ರಾಹಕರಿಗೆ 2 ಲಕ್ಷ ರೂ.ನ ವಿಮೆ ಮಾಡಿಸಿದ್ದೇವೆ. ನಿಮ್ಮ ನಮ್ಮ ಬಾಂಧವ್ಯ ಹೀಗೆ ಮುಂದುವರಿಯಲಿ. ಸಂಸ್ಥೆಯ ಬೆಳವಣಿಗೆಗೆ ನೀವೆಲ್ಲಾ ಕಾರಣರಾಗಿರಿ ಎಂದರು.
ಅನಿಸಿಕೆ ವ್ಯಕ್ತಪಡಿಸಿದ ಗ್ರಾಹಕ ಉಮೇಶ್, ಸಹಕಾರ ಸಂಘಗಳು ಹೇಗೆಂದರೆ ನೀರಲ್ಲಿ ಹೋಗ್ತಿದ್ದವನಿಗೆ ಹುಲ್ಲು ಕಡ್ಡಿ ಸಿಕ್ಕಿದಂತೆ. ಕೆಲ ಸಂದರ್ಭ ನಾವು ಪರಿಸ್ಥಿತಿಯ ಒತ್ತಡಕ್ಕೆ ಸಿಲುಕುತ್ತೇವೆ. ಆದರೆ ನಮ್ಮ ಪ್ರಾಮಾಣಿಕತೆ ಬಿಡಬಾರದು. ಅದು ನಮ್ಮನ್ನು ಜೀವನದಲ್ಲಿ ಯಶಸ್ವಿ ಆಗುವಂತೆ ಮಾಡುತ್ತದೆ. ಒಂದು ಕಾಲದಲ್ಲಿ ತಾನು ಸೈಕಲ್ ನಲ್ಲಿ ಹೋಗಲು ಕಷ್ಟ ಪಡುವ ದಿನವಿತ್ತು. ಆದರೆ ಇಂದು ಕಾರಲ್ಲಿ ಹೋಗ್ತಿದ್ರೆ ಅದಕ್ಕೆ ಎಸ್.ಕೆ.ಜಿ.ಐ. ಕಾರಣ. ಒಂದು ಸ್ವಸಹಾಯ ಸಂಘ ಕಟ್ಟಿ ರಾಜ್ಯ ಮಟ್ಟದಲ್ಲಿ ಬೆಳೆಯಲು ಅದಕ್ಕೆ ಎಸ್.ಕೆ.ಜಿ.ಐ. ನ ನಿವೃತ್ತ ಮ್ಯಾನೇಜರ್ ಜಗದೀಶ್ ಎಸ್.ಎನ್. ಕಾರಣ ಎಂದರು.
ಕೆ.ಎಸ್.ಆರ್.ಟಿ.ಸಿ. ನಿವೃತ್ತ ಅಧಿಕಾರಿ ಆರ್.ಸಿ. ನಾಗರಾಜ್ ಮಾತನಾಡಿ, ಈ ಸಂಸ್ಥೆಗೆ ನಾನೊಬ್ಬ ಫ್ರೆಂಡ್ ಆದೆ. ನನ್ನೆಲ್ಲಾ ಸಮಸ್ಯೆಗೆ ಸಂಸ್ಥೆ ಸಹಕಾರ ನೀಡಿದೆ. ಪುತ್ತೂರಿನ ಸಹಕಾರ ರಂಗದಲ್ಲಿ ಎಸ್.ಕೆ.ಜಿ.ಐ ಬ್ಯಾಂಕ್ ನೀಡಿದ ಸೇವೆ ಅನನ್ಯ. ಇಲ್ಲಿಯ ಮ್ಯಾನೇಜರ್ ಹಾಗೂ ಸಿಬ್ಬಂದಿಗಳು ಉತ್ತಮ ಸೇವೆ ನೀಡುತ್ತಿರುವುದರಿಂದ ಸಂಸ್ಥೆಯ ಮೇಲೆ ಪ್ರೀತಿ ಹೆಚ್ಚಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ,1964ರಲ್ಲಿ ಪ್ರಾರಂಭವಾದ ಸಂಸ್ಥೆ ಸದಸ್ಯ ಗ್ರಾಹಕರ ಸಹಕಾರದಿಂದ ಇಂದು ಬೆಳೆದು ನಿಂತಿದೆ. ಪುತ್ತೂರು ಶಾಖೆ 1.3 ಕೋಟಿ ರೂ.ನಷ್ಟು ಲಾಭ ಗಳಿಸಿದೆ. ಆರ್ಥಿಕ ದೃಷ್ಟಿಕೋನದ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಕಳಕಳಿಯನ್ನು ನಿಭಾಯಿಸುತ್ತಾ ಬಂದಿದ್ದೇವೆ ಎಂದರು.
ಇದೇ ಸಂದರ್ಭ ಠೇವಣಿದಾರರು ಹಾಗೂ ಗ್ರಾಹಕರನ್ನು ಸನ್ಮಾನಿಸಲಾಯಿತು. ಠೇವಣಿದಾರರ ಪರವಾಗಿ ದಾಮೋದರ್, ಪುರುಷೋತ್ತಮ್ ನೈತ್ತಾಡಿ ಅನಿಸಿಕೆ ವ್ಯಕ್ತಪಡಿಸಿದರು.
ರಾಜೇಶ್ ಪ್ರಾರ್ಥಿಸಿ, ಸಂಸ್ಥೆಯ ಉಪಾಧ್ಯಕ್ಷ ಆನಂದ ಆಚಾರ್ಯ ಅಜ್ಜಿನಡ್ಕ ಸ್ವಾಗತಿಸಿದರು. ಪುತ್ತೂರು ಶಾಖೆಯ ವ್ಯವಸ್ಥಾಪಕ ಕಿರಣ್ ಬಿ.ವಿ. ವಂದಿಸಿದರು. ಕಿಶನ್ ಬಿ.ವಿ. ಕಾರ್ಯಕ್ರಮ ನಿರೂಪಿಸಿದರು.
ದೀಕ್ಷಿತ್, ಧನಂಜಯ, ಸುಶಾಂತ್, ಸುಮಶ್ರೀ ಅತಿಥಿಗಳನ್ನು ಗೌರವಿಸಿದರು.