ಸ್ಥಳೀಯ

ಮಾ. 30, 31: ಉಪ್ಪಿನಂಗಡಿ ವಿಜಯ – ವಿಕ್ರಮ ಜೋಡುಕರೆ ಕಂಬಳ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: 38ನೇ ವರ್ಷದ ವಿಜಯ-ವಿಕ್ರಮ ಜೋಡುಕರೆ ಕಂಬಳ ಉಬರ್ ಕಂಬಳ ಉತ್ಸವ ಮಾ. 30ರಂದು ಬೆಳಗ್ಗೆ 10.31ಕ್ಕೆ ಕೂಟೇಲು ನದಿ ಕಿನಾರೆಯಲ್ಲಿ ಉದ್ಘಾಟನೆಗೊಳ್ಳಲಿದೆ. ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ ಉದ್ಘಾಟಿಸಲಿದ್ದಾರೆ ಎಂದು ಶಾಸಕ, ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 30ರಂದು ಬೆಳಿಗ್ಗೆ 8.30ಕ್ಕೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಿಂದ ಹೊರಡುವ ಮೆರವಣಿಗೆಗೆ ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ ಚಾಲನೆ ನೀಡಲಿರುವರು. ಕಂಬಳದ ಸಭಾ ಕಾರ್ಯಕ್ರಮ ಸಂಜೆ 6ರಿಂದ ನಡೆಯಲಿದ್ದು, ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿರುವರು. ಸಭಾಪತಿ ಯು. ಟಿ. ಖಾದರ್, ಯೋಜನಾ ಸಬಲೀಕರಣ ಕ್ರೀಡಾ ಹಾಗೂ ಪರಿಶಿಷ್ಟ ವರ್ಗಗಳ ಸಚಿವ ನಾಗೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಬೆಂಗಳೂರು ಉದ್ಯಮಿ ಬಾಬುರಾಜ್, ಸಂಗೀತ ನಿರ್ದೇಶಕ ಗುರುಕಿರಣ್, ನಾಡೋಜ ಡಾ| ಬಿ. ಶಂಕರ್, ಅಧ್ಯಕ್ಷರು ಶ್ಯಾಮಿಲಿ ಫ್ಯಾಮಿಲಿ ಟ್ರಸ್ಟ್ ರಿ., ಸಹಕಾರ ರತ್ನ ಎಂ. ಎನ್. ರಾಜೇಂದ್ರ ಕುಮಾ‌ರ್ ಮೊದಲಾದವರು ಮುಖ್ಯ ಅತಿಥಿಗಳಾಗಿರುವರು.
ಕಂಬಳಕ್ಕೆ ಆರು ವಿಭಾಗಗಳ ಕೋಣಗಳು ಭಾಗವಹಿಸಲಿದ್ದು, ಕನೆಹಲಗೆ, ಅಡ್ಡಹಲಗೆ, ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ ವಿಭಾಗದ ಸ್ಪರ್ಧೆಗಳಿದ್ದು. ಹಿರಿಯ ವಿಭಾಗದ ಪ್ರಥಮ ವಿಜೇತ ಕೋಣಗಳಿಗೆ 1½ ಪವನ್ ಚಿನ್ನ. ದ್ವಿತೀಯ ವಿಜೇತ ಕೋಣಗಳಿಗೆ 1 ಪವನ್ ಚಿನ್ನ (8 ಗ್ರಾಂ) ಬಹುಮಾನ ಹಾಗೂ ಕಿರಿಯ ವಿಭಾಗಕ್ಕೆ ಪ್ರಥಮ ½ ಪವನ್ ಹಾಗೂ ದ್ವಿತೀಯ ½ ಪವನ್ ಚಿನ್ನದ ಬಹುಮಾನ ವಿಜೇತ ಕೋಣಗಳ ಓಟಗಾರರಿಗೂ ಪ್ರೋತ್ಸಾಹಕ ಬಹುಮಾನವಿದೆ. ಅಲ್ಲದೆ ವಿಜೇತ ಕೋಣಗಳ ಮಾಲಕರಿಗೆ ಚಿನ್ನದೊಂದಿಗೆ ವಿಶೇಷ ಕೋಟಿ ಚೆನ್ನಯ ಟ್ರೋಫಿ ನೀಡಲಾಗುವುದು. ಭಾಗವಹಿಸುವ ಕೋಣಗಳಿಗೆ ಸುಸಜ್ಜಿತ ಬ್ಯಾಂಕ್‌ನೊಂದಿಗೆ ನೀರಿನ ವ್ಯವಸ್ಥೆ ಮಾಡಿರುತ್ತೇವೆ. ಅಲ್ಲದೇ ಹೊನಲು ಬೆಳಕಿನ ವ್ಯವಸ್ಥೆ, ಸುಸಜ್ಜಿತ ಪ್ರೇಕ್ಷಕರ ಚಪ್ಪರ, ವೀಕ್ಷಕ ಮಹಿಳೆಯರಿಗೆ ಪ್ರತ್ಯೇಕ ಗ್ಯಾಲರಿ, ಆಕರ್ಷಕ ವೇದಿಕೆ, ಮನಮೆಚ್ಚುವ ವೀಕ್ಷಕ ವಿವರಣೆ, ಉತ್ತಮ ಕರೆ ನಿರ್ಮಾಣ. ಕರೆಗೆ ಶುದ್ಧ ನೀರಿನ ವ್ಯವಸ್ಥೆ, ಸುಸಜ್ಜಿತ ಸ್ವಾಲ್‌ಗಳು, ಕೋಣಗಳ ಯಜಮಾನರಿಗೆ ಪ್ರತ್ಯೇಕ ಚಪ್ಪರದ ವ್ಯವಸ್ಥೆ ವರ್ಷಕ್ಕೊಂದು ಹೊಸತನದ ಸೇರ್ಪಡೆಯೊಂದಿಗೆ ಕಂಬಳ ಕ್ಷೇತ್ರದಲ್ಲೇ ಶ್ರೇಷ್ಠ ಕಂಬಳ ಎಂಬ ಹೆಸರನ್ನು ಪಡೆದಿದೆ ಎಂದರು.
ಉಬಾರ್ ಕಂಬಳಕ್ಕೆ ಲಕ್ಷಾಂತರ ಮಂದಿ ಪ್ರೇಕ್ಷಕರೂ ಹಲವಾರು ವಿದೇಶಿಯರು ಭಾಗವಹಿಸುತ್ತಿರುವುದು ಕಂಬಳಕ್ಕೆ ಪ್ರತಿಷ್ಠೆ ಎನಿಸಿದೆ. ಈ ವರ್ಷ ಸುಮಾರು 160 ಜೋಡಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆ ಇದ್ದು ಅನೇಕ ಗಣ್ಯಾತಿಗಣ್ಯರು. ಖ್ಯಾತ ಚಲನ ಚಿತ್ರ ನಟ-ನಟಿಯರು ಮತ್ತು ಅನೇಕ ಮಾಧ್ಯಮದ ಮಿತ್ರರು. ಟಿ.ವಿ. ಮಾಧ್ಯಮದವರೂ ಭಾಗವಹಿಸಲಿದ್ದಾರೆ. ಅಲ್ಲದೆ ಸಸ್ಯಮೇಳ, ಆಹಾರಮೇಳ, ಕೃಷಿ ಯಂತ್ರೋಪಕರಣ ಮೇಳ ಹಾಗೂ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದರು.
ಈ ಬಾರಿ ಉಬಾರ್ ಕಂಬಳ ಉತ್ಸವವನ್ನು ಆಯೋಜಿಸಲಾಗಿದೆ. ಸಾಂಸ್ಕತಿಕ ಕಾರ್ಯಕ್ರಮ, ಸ್ವಾದಿಷ್ಟ ಆಹಾರ ಮೇಳ, ಬೋಟಿಂಗ್ ರೈಡ್, ಕೃಷಿ ಮೇಳ, ವ್ಯವಹಾರ ಮೇಳ, ಮಕ್ಕಳ ಮನೋರಂಜನಾ ಆಟಗಳನ್ನು ಮಾ. 29, 30, 31ರಂದು ಕಂಬಳ ಕರೆಯ ಬಳಿಯಲ್ಲೇ ಹಮ್ಮಿಕೊಳ್ಳಲಾಗಿದೆ ಎಂದು‌ ವಿವರಿಸಿದರು.
ಕಂಬಳ ಸಮಿತಿ ಪ್ರಮುಖರಾದ ಉಮೇಶ್ ಶೆಣೈ, ನಿರಂಜನ್ ರೈ ಮಠಂತಬೆಟ್ಟು, ಮಹಮ್ಮದ್ ಬಡಗನ್ನೂರು, ಉಬಾರ್ ಕಂಬಳ ಉತ್ಸವದ ಸೈಫ್, ರಾಜೇಶ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2