ಪುತ್ತೂರು: ಹೊಸದಾಗಿ ಮೇಲ್ದರ್ಜೆಗೇರಿದ ಕಡಬ ತಾಲೂಕಿನ ಪಟ್ಟಣ ಪಂಚಾಯತ್ ಚುನಾವಣೆಯ ಗೆಲುವಿನಿಂದ ಆ ಭಾಗದ ಜನರಿಗೆ ಬಹಳ ಅನುಕೂಲವಾಗಲಿದೆ ಎಂದು ಕಡಬ ಪಟ್ಟಣ ಪಂಚಾಯತ್ ಚುನಾವಣಾ ಕಾಂಗ್ರೆಸ್ ಉಸ್ತುವಾರಿ ನೂರುದ್ದೀನ್ ಸಾಲ್ಮರ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ನಾಯಕರು, ಕಾರ್ಯಕರ್ತರ ಸಹಕಾರದಿಂದ ಚುನಾವಣೆಯನ್ನು ಗೆದ್ದಿದ್ದೇವೆ. ಇದಕ್ಕೆ ಪೂರಕವಾಗಿ ಪಂಚ ಗ್ಯಾರೆಂಟಿಗಳು, ಕಾಂಗ್ರೆಸಿನ ಆಡಳಿತವೂ ಕೆಲಸ ಮಾಡಿದೆ. ಬಿಜೆಪಿಗರ ಕೋಮುವಾದ ಇಲ್ಲಿ ಗೆದ್ದಿಲ್ಲ ಎನ್ನುವುದಕ್ಕೆ ನಿದರ್ಶನ ಇದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಬಿಜೆಪಿಗರೆ ಬಿಜೆಪಿ ಮುಕ್ತ ಮಾಡಿದ್ದಾರೆ ಎಂದರು.
ಕಳಾರ ವಾರ್ಡ್ ನಂಬರ್ 1ರಲ್ಲಿ ಬಿಜೆಪಿ ಶೂನ್ಯ ಮತ ಪಡೆದು, ರಾಷ್ಟ್ರ ಮಟ್ಟದಲ್ಲಿ ಮುಜುಗರಕ್ಕೆ ಒಳಪಟ್ಟಿದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಬಿಜೆಪಿಯ ವಾರ್ಡ್ ಅಧ್ಯಕ್ಷರು, ಅಭ್ಯರ್ಥಿ ಸೂಚಕರೇ ಅಭ್ಯರ್ಥಿ ಪರವಾಗಿ ಮತ ಹಾಕಿಲ್ಲ ಎನ್ನುವುದು ಉಲ್ಲೇಖನೀಯ ಅಂಶ. ಬಿಜೆಪಿಯ ಕೋಮುವಾದ, ಅಪಪ್ರಚಾರ ಇಲ್ಲಿ ನಡೆಯಲಿಲ್ಲ ಎಂದರು.
ಕೆಪಿಸಿಸಿ ಮಾಜಿ ಸದಸ್ಯ ನಿರ್ಮಲ್ ಕುಮಾರ್ ಜೈನ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ಉಷಾ ಅಂಚನ್, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ನಜೀರ್ ಮಠ, ಪದವೀಧರ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಉಲ್ಲಾಸ್ ಸಾಲ್ಯಾನ್ ಉಪಸ್ಥಿತರಿದ್ದರು.