ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನವನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿರುವ ಅರ್ಜಿಯನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಾಗ ಮಾತನಾಡಿದ ಸಿದ್ದರಾಮಯ್ಯ, ಸೂಕ್ತ ಕ್ರಮ ಜರುಗಿಸುವಂತೆ ಮುಖ್ಯಕಾರ್ಯದರ್ಶಿಗೆ ನಿರ್ದೇಶನ ನೀಡಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ‘ಈ ಜಾಗ ಸಾರ್ವಜನಿಕರದ್ದು ಎಂದು ಕಾನೂನು ಮಾಡಲಾಗಿದೆ. ಅದನ್ನು ಹೈಕೋರ್ಟ್ ಸಹ ಒಪ್ಪಿದೆ. ಅದರ ವಿರುದ್ಧ ರಾಜವಂಶಸ್ಥರು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಹಾಕಿದ್ದಾರೆ. ಯಥಾಸ್ಥಿತಿ ಕಾಪಾಡುವಂತೆಯೂ ಸುಪ್ರೀಂ ಕೋರ್ಟ್ ಸೂಚಿಸಿದೆ. ಆದರೆ, ಇಷ್ಟು ದಿನ ಯಥಾಸ್ಥಿತಿ ಏಕೆ? ಸೂಕ್ತ ವಕೀಲರನ್ನು ನೇಮಕ ಮಾಡಿ ಸರ್ಕಾರದ ನಿಲುವಿಗೆ ಪೂರಕವಾಗಿ ಮೂಲದಾವೆ ಪ್ರಕಾರ ಮುಂದುವರೆಯಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು’ ಎಂದು ಹೇಳಿದರು.