ಪುತ್ತೂರು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚರಂಡಿ ನೀರು ಉಕ್ಕಿ ಹರಿದು ಮುಕ್ವೆ ಮುಖ್ಯರಸ್ತೆಯನ್ನೇ ಮುಳುಗಿಸಿದ ಘಟನೆ ಶುಕ್ರವಾರ ರಾತ್ರಿ ನಡೆಯಿತು. ಇದರಿಂದಾಗಿ ಮಂಜೇಶ್ವರ – ಕಾಣಿಯೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆದ ಘಟನೆಯೂ ವರದಿಯಾಯಿತು.
ಪುತ್ತೂರು – ಕಾಣಿಯೂರು ಮುಖ್ಯರಸ್ತೆಯ ಮುಕ್ವೆ ಮಸೀದಿ ಹಾಗೂ ಮುಕ್ವೆ ನಯಾರಾ ಪೆಟ್ರೋಲ್ ಬಂಕ್ ನಡುವಿನಲ್ಲಿರುವ ಚರಂಡಿ ನೀರು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಯಿತು. ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಚರಂಡಿ ನೀರು ಉಕ್ಕಿ ಹರಿಯಲಾರಂಭಿಸಿತು. ಇದು ಮುಖ್ಯರಸ್ತೆಯನ್ನು ಮುಳುಗಿಸಿದ್ದಲ್ಲದೇ ಪಕ್ಕದಲ್ಲಿದ್ದ ಪೆಟ್ರೋಲ್ ಬಂಕ್’ಗೂ ನುಗ್ಗಿತು. ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶವನ್ನೇ ನೀಡದೇ ಸತಾಯಿಸಿತು. ಮಾತ್ರವಲ್ಲ, ಸುತ್ತಮುತ್ತಲಿನ ಹಲವಾರು ಮನೆಗಳಿಗೆ, ಓಂಕಾರ್ ಅಪಾರ್ಟ್’ಮೆಂಟ್’ಗೆ ನೀರು ನುಗ್ಗಿ, ನಿದ್ದೆಗೆಡಿಸಿತು.
ಇದೇ ಸಂದರ್ಭ ಈ ರಸ್ತೆಯಾಗಿ ಆಗಮಿಸಿದ ಅಗ್ನಿಶಾಮಕ ದಳದ ವಾಹನ ಕೂಡ ಹೆದ್ದಾರಿಯಲ್ಲಿ ಬಾಕಿ ಆಗುವಂತಾಯಿತು. ನೀರು ರಸ್ತೆಯನ್ನೆಲ್ಲಾ ಆಕ್ರಮಿಸಿದ ಕಾರಣ ಅಗ್ನಿಶಾಮಕ ದಳದ ವಾಹನ ಸೇರಿದಂತೆ ಹಲವಾರು ವಾಹನಗಳು ರಸ್ತೆಯ ಎರಡೂ ಕಡೆಯೂ ಸಾಲುಗಟ್ಟಿ ನಿಲ್ಲುವಂತಾಯಿತು.
ತಡೆಗೋಡೆ ಕುಸಿತ:
ಇದೇ ಸಂದರ್ಭ ಮುಕ್ವೆ ಮಸೀದಿಯ ಹಿಂಬದಿ ಆವರಣ ಗೋಡೆ ಕುಸಿತಗೊಂಡ ಘಟನೆಯೂ ವರದಿಯಾಗಿದೆ. ಮಹಿಳಾ ನಮಾಜ್ ಕೊಠಡಿ ಬಳಿ ನಿಲ್ಲಿಸಿದ್ದ ಮಸೀದಿ ಧರ್ಮಗುರುಗಳ ಕಾರಿನ ಮೇಲೆ ಆವರಣ ಗೋಡೆ ಕುಸಿದು ಬಿದ್ದಿದೆ. ಇದರಿಂದ ಕಾರು ಜಖಂಗೊಂಡಿದೆ ಎಂದು ಹೇಳಲಾಗಿದೆ.