ಪುತ್ತೂರು: ಬ್ಯಾಂಕ್ ಖಾತೆಗೆ ಕನ್ನ ಹಾಕುವ ಹುನ್ನಾರದಿಂದ ಪುತ್ತೂರಿನ ಉದ್ಯಮಿಗಳಿಗೆ ಭಾನುವಾರ ವಾಟ್ಸ್ಆ್ಯಪ್ ಸಂದೇಶ ಕಳುಹಿಸಲಾಗಿದೆ.
ಆರ್.ಟಿ.ಓ. ಹೆಸರನ್ನು ಬಳಸಿಕೊಂಡು ವಾಟ್ಸ್ ಆ್ಯಪ್ ಸಂದೇಶದ ಜೊತೆ ಎಪಿಕೆ ಫೈಲ್ ಕಳುಹಿಸಲಾಗಿದೆ. ಈ ಎಪಿಕೆ ಫೈಲ್ ಮೇಲ್ಭಾಗದಲ್ಲಿ ಚಲನ್ ಎಂದು ಬರೆಯಲಾಗಿತ್ತು. ವೀಕ್ಷಿಸುವ ದೃಷ್ಠಿಯಿಂದ ಎಪಿಕೆ ಫೈಲ್ ಟಚ್ ಮಾಡಿದರೂ ಸಾಕು, ಅದರಲ್ಲಿರುವ ಆ್ಯಪ್ ನಿಮ್ಮ ಮೊಬೈಲಿನಲ್ಲಿ ಇನ್’ಸ್ಟಾಲ್ ಆಗುತ್ತದೆ.
ಒಮ್ಮೆ ಆ್ಯಪ್ ನಿಮ್ಮ ಮೊಬೈಲಿನಲ್ಲಿ ಇನ್’ಸ್ಟಾಲ್ ಆದರೆ ಸಾಕು, ನಿಮ್ಮ ವೈಯಕ್ತಿಕ ಮಾಹಿತಿಯಿಂದ ಬ್ಯಾಂಕ್ ಖಾತೆಯ ಮಾಹಿತಿಯವರೆಗೆ ಎಲ್ಲವೂ ಖದೀಮರ ಕೈಸೇರಿ ಬಿಡುತ್ತದೆ. ಇನ್ನು ನಿಮ್ಮ ಬ್ಯಾಂಕ್ ಖಾತೆಯ ಹಣಕ್ಕೆ ಕನ್ನ ಹಾಕಲು ಎಷ್ಟು ಹೊತ್ತು ಬೇಕು ಹೇಳಿ?
ಹಾಗೆಂದು ಹೇಳಿ, ಇಂತಹ ವಂಚನೆ ನಡೆದ ಕೂಡಲೇ ಬ್ಯಾಂಕಿಗೆ ಮಾಹಿತಿ ನೀಡಬಹುದು. ಆದರೆ ಇದಕ್ಕೆ ಅವಕಾಶ ನೀಡದಂತೆ, ಭಾನುವಾರವೇ ಈ ಸಂದೇಶಗಳನ್ನು ಕಳುಹಿಸಲಾಗುತ್ತಿದೆ.
ಆದ್ದರಿಂದ ಆರ್.ಟಿ.ಓ. ಹೆಸರನ್ನು ಬಳಸಿಕೊಂಡು ಕಳುಹಿಸುವ ವಾಟ್ಸ್ಆ್ಯಪ್ ಸಂದೇಶಗಳನ್ನು ಓದುವುದು ಬಿಡಿ, ತೆರೆಯಲೇ ಹೋಗದಿರುವುದು ಉತ್ತಮ.
ವಾಟ್ಸ್ಆ್ಯಪ್ ಸಂದೇಶ ಕಳುಹಿಸುವುದಿಲ್ಲ:
ಸಾರಿಗೆ ಇಲಾಖೆಯಿಂದ ಇಂತಹ ಸಂದೇಶಗಳನ್ನು ಕಳುಹಿಸುವುದಿಲ್ಲ. ಅದರಲ್ಲೂ ವಾಟ್ಸ್ಆ್ಯಪ್ ಸಂದೇಶಗಳನ್ನು ಕಳುಹಿಸುವುದೇ ಇಲ್ಲ. ಹಾಗಾಗಿ ನಾಗರಿಕರು ಎಚ್ಚರಿಕೆಯಿಂದಿರಿ. ಇಂತಹ ಸಂದೇಶಗಳಿಂದ ದೂರವೇ ಇದ್ದು ಬಿಡಿ.
ವಿಶ್ವನಾಥ ಅಜಿಲ, ಆರ್.ಟಿ.ಓ. ಪುತ್ತೂರು.