ಬೆಂಗಳೂರು : ನೀರಿನ ಬಾಟಲಿ ಮಾರುವ ಮಳಿಗೆಗಳು ಕಡ್ಡಾಯವಾಗಿ ಖಾಲಿ ಬಾಟಲಿಗೆ ಕನಿಷ್ಠ ಬೆಲೆ ನೀಡಿ ಮರುಖರೀದಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಪರಿಸರಕ್ಕೆ ಹಾನಿ ಆಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿರ್ದಿಷ್ಟ ಏಕ ಬಳಕೆ ಪ್ಲಾಸ್ಟಿಕ್ ತಯಾರಿಕೆ, ದಾಸ್ತಾನು, ಮಾರಾಟ, ಬಳಕೆಯನ್ನು ನಿಷೇಧಿಸಿದ್ದು, ರಾಜ್ಯ ಸರ್ಕಾರ ಕೂಡ ಈ ಸಂಬಂಧ ನಿಯಮಗಳನ್ನು ರೂಪಿಸಿದೆ.
ಮೊದಲಿಗೆ ರಸ್ತೆಯ ಬದಿಯಲ್ಲಿ ಎಲ್ಲೆಂದರಲ್ಲಿ ಬಿದ್ದು ಪರಿಸರ ಹಾಳು ಮಾಡುತ್ತಿರುವ, ವಾಟರ್ ಬಾಟಲ್ಸ್ ಗೆ ಕಡಿವಾಣ ಹಾಕಬೇಕಾಗಿದೆ. ಕುಡಿಯುವ ನೀರನ್ನು ಬಾಟಲಿಗಳ ಮೂಲಕ ಮಾರಾಟ ಮಾಡುವ ಕಂಪನಿಗಳಿಗೆ ಆ ಪ್ಲಾಸ್ಟಿಕ್ ಬಾಟಲಿಯ ವೈಜ್ಞಾನಿಕ ವಿಲೇವಾರಿಯ ಜವಾಬ್ದಾರಿಯೂ ಇದೆ. ಈ ಹಿನ್ನೆಲೆಯಲ್ಲಿ ಖಾಲಿ ಬಾಟಲಿಗಳನ್ನು ಕನಿಷ್ಠ ದರ ನೀಡಿ ಮರಳಿ ಖರೀದಿಸುವಂತೆ ನಿಯಮ ರೂಪಿಸಿದಲ್ಲಿ ಪ್ಲಾಸ್ಟಿಕ್ ಬಾಟಲಿಯ ಹಾವಳಿ ತಡೆಯಲು ಸಾಧ್ಯವಾಗುತ್ತದೆ.
ಹೊಸ ನೀರಿನ ಬಾಟಲಿ ಖರೀದಿಸಲು ಬರುವ ಗ್ರಾಹಕರಿಂದ ಬಾಟಲಿ ನೀರು ಮಾರುವ ಚಿಲ್ಲರೆ ಮಳಿಗೆಗಳು ಯಾವುದೇ ಕಂಪನಿಯ ನೀರಿನ ಬಾಟಲಿ ನೀಡಿದರೂ ಅದಕ್ಕೆ ಕನಿಷ್ಠ ಬೆಲೆ ನೀಡಿ/ ಕಡಿತ ಮಾಡಿ ಹೊಸ ಬಾಟಲಿ ಮಾರಾಟ ಮಾಡುವಂತೆ ಮತ್ತು ಈ ರೀತಿ ಸಂಗ್ರಹಿಸಲಾದ ಖಾಲಿ ಬಾಟಲಿಗಳನ್ನು ನೀರು ಮಾರಾಟ ಮಾಡುವ ಕಂಪನಿಗಳೇ ಹಿಂಪಡೆದು, ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದನ್ನು ಕಡ್ಡಾಯಗೊಳಿಸಲು ಈ ಮೂಲಕ ಸೂಚಿಸಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ ಆದೇಶ ಹೊರಡಿಸಿದ್ದಾರೆ.