ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರೊಮಾರಿಯೊ ಶೆಫರ್ಡ್ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ದಾಖಲೆಗಳ ಸರದಾರ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ಭರ್ಜರಿ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 52ನೇ ಪಂದ್ಯದಲ್ಲಿ ರೊಮಾರಿಯೊ ಶೆಫರ್ಡ್ ಸ್ಪೋಟಕ ಅರ್ಧಶತಕ ಬಾರಿಸಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೊಮಾರಿಯೊ ಶೆಫರ್ಡ್ 14 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 53 ರನ್ ಬಾರಿಸಿದ್ದರು. ಈ ಸ್ಪೋಟಕ ಅರ್ಧಶತಕದೊಂದಿಗೆ ಆರ್ಸಿಬಿ ಪರ ಅತೀ ವೇಗದ ಹಾಫ್ ಸೆಂಚುರಿ ಸಿಡಿಸಿದ ದಾಖಲೆ ರೊಮಾರಿಯೊ ಪಾಲಾಯಿತು.
ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. 2013 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ಗೇಲ್ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು.
ಇದೀಗ ಬರೋಬ್ಬರಿ 12 ವರ್ಷಗಳ ಬಳಿಕ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ದಾಖಲೆ ಮುರಿಯುವಲ್ಲಿ ವೆಸ್ಟ್ ಇಂಡೀಸ್ ಆಟಗಾರನೇ ಆಗಿರುವ ರೊಮಾರಿಯೊ ಶೆಫರ್ಡ್ ಯಶಸ್ವಿಯಾಗಿದ್ದಾರೆ. ಅದು ಕೂಡ 14 ಎಸೆತಗಳಲ್ಲಿ ಸ್ಪೋಟಕ ಹಾಫ್ ಸೆಂಚುರಿ ಸಿಡಿಸುವ ಮೂಲಕ ಎಂಬುದು ವಿಶೇಷ.
ಇನ್ನು ರೊಮಾರಿಯೊ ಶೆಫರ್ಡ್ ಬಾರಿಸಿದ ಈ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಆರ್ಸಿಬಿ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 213 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 211 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಆರ್ಸಿಬಿ ತಂಡ 2 ರನ್ಗಳ ರೋಚಕ ಜಯ ಸಾಧಿಸಿದೆ.