ಧಾರ್ಮಿಕವಿಶೇಷ

ಮಾರುಕಟ್ಟೆಗೂ ಆವರಿಸಲಿದೆ ‘ಮೌಢ್ಯ’!!!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮದುವೆ ಮೊದಲಾದ ಶುಭ ಸಮಾರಂಭಗಳು ಮಾರುಕಟ್ಟೆಗೆ ಜೀವಂತಿಕೆ ನೀಡುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೆಲವು ತಿಂಗಳುಗಳ ಕಾಲ ಇಂತಹ ಶುಭ ಸಮಾರಂಭಗಳೇ ಇಲ್ಲವಾದರೆ ಮಾರುಕಟ್ಟೆ ಸ್ಥಿತಿ ಹೇಗಾಗಬಹುದು.
ಇಂತಹದ್ದೊಂದು ಪರಿಸ್ಥಿತಿ ಇದೀಗ ಎದುರಾಗುತ್ತಿದೆ. ಮಾರುಕಟ್ಟೆಯನ್ನು ಇಬ್ಬಂದಿ ಸ್ಥಿತಿಗೆ ದೂಡುವ ಪರಿಸ್ಥಿತಿ ಇದು.
2024ರ ಮೇ 8ರಿಂದ ಹೆಚ್ಚು ಕಡಿಮೆ ಆಗಸ್ಟ್ ವರೆಗೆ ಯಾವುದೇ ಶುಭ ಸಮಾರಂಭಗಳು ಇರುವುದಿಲ್ಲ ಎನ್ನುತ್ತವೆ ಮೂಲಗಳು. ಇದಕ್ಕೆ ಕಾರಣ ಗುರು ಮೌಢ್ಯ, ನಂತರ ಬರುವ ಶುಕ್ರ ಮೌಢ್ಯ, ಬೆನ್ನಿಗೇ ಆಗಮಿಸುವ ಆಷಾಢ ಹಾಗೂ ತುಳುವಿನ ಆಟಿ ಎದುರಾಗುತ್ತದೆ. ಇವಿಷ್ಟು ಮುಗಿಯುವ ಹೊತ್ತಿಗೆ ಆಗಸ್ಟ್ ಅರ್ಧ ಮುಗಿದಿರುತ್ತದೆ.
ಇನ್ನು ದೇವ ಪ್ರತಿಷ್ಠೆ, ಉಪನಯನದಂತಹ ಕಾರ್ಯಕ್ರಮಗಳು ಡಿಸೆಂಬರ್ ವರೆಗೂ ನಡೆಯುವುದಿಲ್ಲವಂತೆ.
ಮೌಢ್ಯದ ಅವಧಿ ಹೀಗಿದೆ:
ಗುರು ಮೌಢ್ಯ: 2024ರ ಮೇ 8ರಿಂದ ಜೂನ್ 2ರವರೆಗೆ.
ಶುಕ್ರ ಮೌಢ್ಯ: 2024ರ ಮೇ 8ರಿಂದ ಜುಲೈ 3ರವರೆಗೆ.
ಆಷಾಢ: 2024ರ ಜುಲೈ 6ರಿಂದ ಆಗಸ್ಟ್ 4ರವರೆಗೆ.
ಆಟಿ: ಇದರ ಬೆನ್ನಿಗೇ ಕರಾವಳಿಯಲ್ಲಿ ತುಳು ತಿಂಗಳ ಆಟಿ ಎದುರಾಗುತ್ತದೆ. ಇದರ ಅವಧಿ ಜುಲೈ 16ರಿಂದ ಆಗಸ್ಟ್ 15ರವರೆಗೆ ಇರುತ್ತದೆ.
ಮುಹೂರ್ತಗಳು:
ಮೇ 3ರಿಂದ ಡಿಸೆಂಬರ್ 20ರವರೆಗೆ ಉಪನಯನಕ್ಕೆ ಮುಹೂರ್ತ ಇಲ್ಲ. ಮೇ 1ರಿಂದ ಡಿಸೆಂಬರ್ ವರೆಗೆ ದೇವ ಪ್ರತಿಷ್ಠೆಗೆ ಮುಹೂರ್ತ ಇರುವುದಿಲ್ಲ. ಇನ್ನು ವಿವಾಹ ಕಾರ್ಯಕ್ರಮದ ವಿವರ ನೋಡುವುದಾದರೆ, ಮೇ ತಿಂಗಳಿನಿಂದ ಆಗಸ್ಟ್ 19ರವರೆಗೆ ಮುಹೂರ್ತವೇ ಇಲ್ಲ. ಗೃಹ ಪ್ರವೇಶ (ಮನೆ ಒಕ್ಕಲು)ಕ್ಕೆ ಮೇ 2ರಿಂದ ಜುಲೈ 13ರವರೆಗೆ ಮುಹೂರ್ತ ಇಲ್ಲ. ಅಲ್ಲಿಗೆ, ಡಿಸೆಂಬರ್ 20ರವರೆಗೆ ಶುಭ ಕಾರ್ಯಗಳು ಇರುವುದಿಲ್ಲ ಎಂದಾಯಿತು.
ಮೌಢ್ಯದ ಅಡ್ಡಿಯಿರದ ಕಾರ್ಯಕ್ರಮಗಳು:
ಯಾವುದೇ ಶುಭ ಸಮಾರಂಭಗಳಿಗೆ ಮುಹೂರ್ತ ನೋಡಿ, ಅದರಂತೆ ಮುಂದಡಿ ಇಡುವುದು ಸಾಮಾನ್ಯ. ಆದರೆ ಸೀಮಂತ, ಚೌಲ, ಪೂಜೆ ಪುನಸ್ಕಾರಗಳಿಗೆ ಮೌಢ್ಯದ ಅಡ್ಡಿ ಇಲ್ಲ. ಯಾಕೆಂದರೆ, ಸೀಮಂತ, ಚೌಲ ಮೊದಲಾದ ಕಾರ್ಯಕ್ರಮಗಳು ನಿಗದಿತ ಸಮಯಕ್ಕೆ ನಡೆಯಲೇಬೇಕು.
ಮೌಢ್ಯ ಎಂದರೇನು?
ಗ್ರಹಗಳು ಅಸ್ತಂಗತ ಆಗುವುದು ಎನ್ನುವುದಕ್ಕೆ ಮೌಢ್ಯ ಎನ್ನಲಾಗುತ್ತದೆ. ಅಸ್ತಂಗತ ಎಂದರೆ, ಗ್ರಹಗಳು ಸೂರ್ಯನ ಇನ್ನೊಂದು ಪಾರ್ಶ್ವಕ್ಕೆ ತೆರಳುವುದು ಎಂದರ್ಥ. ಸೂರ್ಯನ ಇನ್ನೊಂದು ಪಾರ್ಶ್ವಕ್ಕೆ ತೆರಳುವ ಗ್ರಹಗಳು ಭೂಮಿಗೆ ಮರೆಯಾಗಿರುತ್ತವೆ. ಉದಾಹರಣೆಗೆ ಗುರು ಗ್ರಹ ಸೂರ್ಯನ ಮರೆಗೆ ಸರಿದರೆ, ಆಗ ಗುರು ಮೌಢ್ಯ. ಶುಕ್ರ ಗ್ರಹ ಸೂರ್ಯನ ಮರೆಗೆ ಸರಿದರೆ ಅದು ಶುಕ್ರ ಮೌಢ್ಯ. ಎಲ್ಲಾ ಗ್ರಹಗಳು ಅಸ್ತಂಗತ ಆಗುತ್ತವೆ. ಬುಧ ಗ್ರಹ ಅಸ್ತಂಗತವಾದಾಗ ವಿದ್ಯಾರಂಭ ಮಾಡುವುದಿಲ್ಲ.
ಮೇಲೆ ತಿಳಿಸಿದ ಎಲ್ಲಾ ಶುಭ ಸಮಾರಂಭಗಳು ನಡೆಯಬೇಕಾದರೆ ಗುರು ಗ್ರಹ ಇರಲೇಬೇಕು. ಮದುವೆ ಸಮಾರಂಭಕ್ಕೆ ಗುರುವಿನ ಜೊತೆಗೆ ಶುಕ್ರ ಗ್ರಹವೂ ಬೇಕು. ಹಾಗಾಗಿ, ಈ ಗ್ರಹಗಳು ಅಸ್ತಂಗತ ಆಗಿರುವ ಸಂದರ್ಭದಲ್ಲಿ ಶುಭ ಸಮಾರಂಭಗಳನ್ನು ನಡೆಸುವುದಿಲ್ಲ.

ಮಾರುಕಟ್ಟೆಗೆ ಹೊಡೆತ!!

ವಿವಾಹ ಅಥವಾ ಶುಭ ಸಮಾರಂಭಗಳು ಮಾರುಕಟ್ಟೆಯನ್ನು ಜೀವಂತವಾಗಿಡುತ್ತವೆ. ಚಿನ್ನಾಭರಣ, ವಸ್ತ್ರ, ಓಡಾಟ, ಸಾಮಾಗ್ರಿ – ಪರಿಕರಗಳು ಎಂದು ಪ್ರತಿಯೊಬ್ಬರಲ್ಲೂ ಚೈತನ್ಯ ತುಂಬಿಸುತ್ತವೆ. ಇಂತಹ ಕಾರ್ಯಕ್ರಮಗಳೇ ಕೆಲವು ತಿಂಗಳುಗಳ ಕಾಲ ಇಲ್ಲ ಎಂದಾದರೆ, ಮಾರುಕಟ್ಟೆ ನಿಂತ ನೀರಾಗುತ್ತದೆ. ಹಣದ ಹರಿವು ಇಲ್ಲದೆ ನಿಸ್ತೇಜ ಸ್ಥಿತಿಗೆ ತಲುಪುವ ಮಾರುಕಟ್ಟೆ, ಬಡ ಕಾರ್ಮಿಕರ ಜೀವನಕ್ಕೂ ಪೆಟ್ಟು ನೀಡುವ ಸಾಧ್ಯತೆಯೇ ಅಧಿಕ.

SRK Ladders

ಈ ಸುದ್ದಿಯನ್ನು ಶೇರ್ ಮಾಡಿ

Related Posts