ಪುತ್ತೂರು: ಕಲ್ಯೋಣೋತ್ಸವದ ಮೂಲಕ ಧರ್ಮ ಮತ್ತು ಸಂಸ್ಕೃತಿಯ ಅನಾವರಣವಾಗುತ್ತಿದೆ. ಭಗವಂತನ ಕಲ್ಯಾಣ ಗುಣಗಳನ್ನು ಅನುಸರಿಸುವ ಕಾರ್ಯವಾಗಬೇಕು. ಸನಾತನ ಹಿಂದು ಧರ್ಮದ ಸಂರಕ್ಷಣೆ ನಡೆಸುವ ಕಾರ್ಯ ನಮ್ಮಿಂದಲೇ ನಡೆಯಬೇಕಾಗಿದೆ. ಧರ್ಮವನ್ನು ರಕ್ಷಣೆ ಮಾಡುವವರನ್ನು, ಧರ್ಮವೇ ರಕ್ಷಿಸುತ್ತದೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಾರಥ್ಯದಲ್ಲಿ ನಡೆದ ಧರ್ಮ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಅರಕಲಗೂಡು ವಿಶ್ವ ಬ್ರಾಹ್ಮಣ ಮಹಾ ಸಂಸ್ಥಾನ ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ಭಾರತೀಯ ಸಂಸ್ಕೃತಿ ಎಲ್ಲ ದೇಶಕ್ಕೆ ಆದರ್ಶಮಯವಾಗಿದ್ದು, ಜಗತ್ತು ಅನುಸರಿಸುವುದಕ್ಕೆ ಮುಂದಾಗುತ್ತಿದೆ. ದೇಶದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಟಿಬದ್ದವಾಗಬೇಕಾಗಿದೆ. ಎಲ್ಲರೂ ಒಂದು ಎಂಬ ಭಾವನೆಯಲ್ಲಿ ಗುರಿಯ ಕಡೆಗೆ ಸಾಗುತ್ತಿದ್ದೇವೆ ಎಂದು ತಿಳಿಸಿದರು.
ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ ಸನಾತನ ಧರ್ಮದ ಉಳಿವಿಗೆ ಹಿಂದು ಪ್ರತಿಜ್ಞಾ ಬದ್ಧನಾಗಬೇಕಾಗಿದೆ. ಸಂಘಟನೆಯ ಮೂಲಕ ಸಮಾಜದಲ್ಲಿ ಪರಿವರ್ತನೆಯನ್ನು ಮಾಡಬಹುದು. ಪುತ್ತಿಲ ಪರಿವಾರ ಕೆಲಸ ಕಾರ್ಯಗಳ ಮೂಲಕ ಸಾಮರ್ಥ್ಯವನ್ನು ತೋರಿಸಿದೆ. ಪುತ್ತಿಲರ ಯೋಜನೆ, ಯೋಚನೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.
ಉಡುಪಿ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ಸಂಪತ್ತನ್ನು ಭಗವಂತನಿಗೆ ಅರ್ಪಿಸಿದಾಗ ಜೀವನ ಬಂಗಾರಮಯವಾಗುತ್ತದೆ. ಕೆಲಸವನ್ನು ಶ್ರದ್ಧೆಯಿಂದ ಮಾಡಿದಾಗ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಧರ್ಮ ರಕ್ಷಣೆಯ ಕಾರ್ಯ ಪ್ರತಿಯೊಬ್ಬರ ಹೊಣೆಯಾಗಿದೆ. ಪರಮಾತ್ಮನ ಆರಾಧನೆಯ ಮೂಲಕ ವೈರಿ ನಿಗ್ರಹ ಮಾಡಬಹುದಾಗಿದೆ ಎಂದು ತಿಳಿಸಿದರು.
ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಧರ್ಮಾಚರಣೆಯನ್ನು ನಡೆಸಿದಾಗ ಜೀವನದಲ್ಲಿ ಮಂಗಳ ಪ್ರಾಪ್ತಿಯಾಗುತ್ತದೆ. ಸಂಸ್ಕೃತಿಯ ಆಚರಣೆಗಳು ನಡೆದಾಗ ಯುವ ಪೀಳಿಯನ್ನು ತಿಳಿಸುವ ಕಾರ್ರವಾಗಬೇಕು. ಸಜ್ಜನರಿಗೆ ರಕ್ಷಣೆ ಸಿಗದಿದ್ದಾಗ ಧರ್ಮ ರಕ್ಷಣೆಯ ನಿಟ್ಟಿನಲ್ಲಿ ಭಗವಂತನ ಆಗಮನವಾಗುತ್ತದೆ. ಕಲ್ಯೋಣೋತ್ಸವದ ಮೂಲಕ ಸಮಸ್ತ ಹಿಂದೂ ಸಮಾಜದ ಕಲ್ಯಾಣ ಆಗಲಿದೆ ಎಂದರು.
ಅಧ್ಯಕ್ಷತೆಯನ್ನು ಶ್ರೀನಿವಾಸ ಕಲ್ಯೋಣೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಇಜ್ಜಾವು ವಹಿಸಿದರು.
ಶ್ರೀನಿವಾಸ ಕಲ್ಯೋಣೋತ್ಸವ ಸಮಿತಿ ಗೌರವಾಧ್ಯಕ್ಷರಾದ ಶಶಾಂಕ ಕೊಟೇಚಾ, ಬೂಡಿಯಾರು ರಾಧಾಕೃಷ್ಣ ರೈ, ಚಂದಪ್ಪ ಮೂಲ್ಯ, ಕೋಶಾಧಿಕಾರಿ ಉದಯ ಕುಮಾರ್ ರೈ ಎಸ್. ಸಂಪ್ಯ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು ಮತ್ತಿತರರು ಉಪಸ್ಥಿತರಿದ್ದರು.
ಶ್ರೀನಿವಾಸ ಕಲ್ಯೋಣೋತ್ಸವ ಸಮಿತಿ ಕಾರ್ಯಾಧ್ಯಕ್ಷ ಉಮೇಶ್ ಕೋಡಿಬೈಲು ಸ್ವಾಗತಿಸಿದರು. ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ವಂದಿಸಿದರು. ಹರಿಣಿ ಪುತ್ತೂರು, ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ನವೀನ್ ರೈ ಪಂಜಳ ಸಹಕರಿಸಿದರು
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಾರಥ್ಯದಲ್ಲಿ ನಡೆದ ಧರ್ಮ ಸಂಗಮ ಕಾರ್ಯಕ್ರಮವನ್ನು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿದರು.