ಧಾರ್ಮಿಕ

ಏ. 9ರಿಂದ ಹನುಮಗಿರಿಯಲ್ಲಿ ಬ್ರಹ್ಮಕಲಶೋತ್ಸವ | ಕೋಟಿ ಶ್ರೀರಾಮ ತಾರಕ ಮಹಾಯಜ್ಞ, ಶ್ರೀ ರಾಮ-ಹನುಮ ಜ್ಯೋತಿ ರಥಯಾತ್ರೆ ಆಗಮನ, ಲಕ್ಷೋತ್ತರ ನಾರಿಕೇಳ ಸಮರ್ಪಣಾ ಯಜ್ಞ

GL

ಈ ಸುದ್ದಿಯನ್ನು ಶೇರ್ ಮಾಡಿ

ಸಮಾಜ ಸೇವೆ, ದೇಶದ ಸುಭೀಕ್ಷೆ, ವಿಶ್ವ ಕಲ್ಯಾಣದ ಉದ್ದೇಶದಿಂದ ಕೋಟಿ ಶ್ರೀ ರಾಮ ತಾರಕ ಮಹಾಯಜ್ಞ, ಶ್ರೀ ರಾಮ ಹನುಮ ಜ್ಯೋತಿ ರಥಯಾತ್ರೆ, ಲಕ್ಷೋತ್ತರ ನಾರಿಕೇಳ ಸಮರ್ಪಣಾ ಯಜ್ಞದೊಂದಿಗೆ ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಏ. 9ರಿಂದ 12ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

chennai-shopping
maithri

ಕ್ಷೇತ್ರದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡುತ್ತಾ, ಏ. 8ರಂದು ಅಪರಾಹ್ನ 3 ಗಂಟೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಭವ್ಯ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಇದಕ್ಕೂ ಮೊದಲು ಬೆಳಗ್ಗೆ ಈಶ್ವರಮಂಗಲ ಗ್ರಾಮಸ್ಥರ ಹೊರೆಕಾಣಿಕೆ ಸಮರ್ಪಣೆ ಕ್ಷೇತ್ರಕ್ಕೆ ನಡೆಯಲಿದ್ದು, ಉಗ್ರಾಣ ಮುಹೂರ್ತ ನಡೆಯಲಿದೆ. ಸಂಜೆ ಪುತ್ತೂರಿನಿಂದ ಹೊರಟ ಹೊರೆಕಾಣಿಕೆಯು ಮೆರವಣಿಗೆ ಮೂಲಕ ಕ್ಷೇತ್ರಕ್ಕೆ ಸಮರ್ಪಣೆಯಾಗಲಿದೆ ಎಂದರು.

ಏ. 9ಕ್ಕೆ ಜ್ಯೋತಿ ಆಗಮನ:

ಅಯೋಧ್ಯೆ ಮತ್ತು ಅಂಜನಾದ್ರಿ ಬೆಟ್ಟದಿಂದ ಬಂದ ಶ್ರೀರಾಮ-ಹನುಮ ಜ್ಯೋತಿಯು ಈಗಾಗಲೇ 60 ಗ್ರಾಮಗಳಲ್ಲಿ ಪರ್ಯಟನೆ ಮಾಡುತ್ತಿದ್ದು, ಏ. 9ರಂದು ಅಪರಾಹ್ನ 3 ಗಂಟೆಗೆ ಹನುಮಗಿರಿ ಕ್ಷೇತ್ರಕ್ಕೆ ಆಗಮಿಸಲಿದೆ. ಈ ಸಂದರ್ಭ ಭವ್ಯವಾಗಿ ಸ್ವಾಗತಿಸಲಾಗುವುದು ಎಂದರು.

ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿ ಕುಂಟಾರು ಮತ್ತು ಬ್ರಹ್ಮಶ್ರೀ ವೇದಮೂರ್ತಿ ರವೀಶ ತಂತ್ರಿ ಕುಂಟಾರು ಆಚಾರ್ಯತ್ವದಲ್ಲಿ ಧಾರ್ಮಿಕ, ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ಏ. 9ರಂದು ಸಂಜೆ 5 ಗಂಟೆಗೆ ತಂತ್ರಿಗಳು ಮತ್ತು ವೈದಿಕರನ್ನು ಕ್ಷೇತ್ರಕ್ಕೆ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುತ್ತದೆ. ಸಂಜೆ 6ರಿಂದ ಸುದರ್ಶನ ಹವನ, ವಾಸ್ತು ಬಲಿ ನಡೆಯಲಿದೆ.

ಏ. 10ರಂದು ಶ್ರೀರಾಮತಾರಕ ಜಪ ಆರಂಭ, ರಾಜ್ಯಪಾಲ ಭೇಟಿ

ಶ್ರೀರಾಮ ತಾರಕ ಯಜ್ಞಕ್ಕಾಗಿ 10 ಯಜ್ಞ ಕುಂಡಗಳನ್ನು ರಚಿಸಲಾಗಿದೆ. ಏ. 10 ರಂದು ಬೆಳಗ್ಗೆ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಯಾಗ ಮಂಟಪ ಉದ್ಘಾಟಿಸಲಿದ್ದಾರೆ. ಇದಾದ ಬಳಿಕ ಶ್ರೀರಾಮ ತಾರಕ ಜಪ ಆರಂಭಗೊಳ್ಳಲಿದೆ. ಈಗಾಗಲೇ ಜಪ ಯಜ್ಞದ ದೀಕ್ಷೆ ಪಡೆದಿರುವ ಸುಮಾರು 13 ಸಾವಿರ ದಂಪತಿ ಸಹಿತವಾಗಿ ಯಾಗದಲ್ಲಿ ಭಾಗವಹಿಸಲು ತಿಳಿಸಲಾಗಿದೆ.

ಬೆಳಗ್ಗೆ 8 ಗಂಟೆಗೆ ಅಷ್ಟೋತ್ತರ ಶತ ನಾರಿಕೇಳ ಗಣ ಹವನ, ಮಧ್ಯಾಹ್ನ ಪೂರ್ಣಾಹುತಿ, ಸಂಜೆ ಅಷ್ಟಾವಧಾನ ಸೇವೆ ಮೊದಲಾದವು ನಡೆಯಲಿದೆ.

ರಾಜ್ಯದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹನುಮಗಿರಿ ಕ್ಷೇತ್ರಕ್ಕೆ ಬೆಳಗ್ಗೆ 11 ಗಂಟೆಗೆ ಭೇಟಿ ನೀಡಲಿದ್ದಾರೆ. ಕ್ಷೇತ್ರದ ಮುಖ ಮಂಟಪ ಮತ್ತು ಪವಿತ್ರ ವನ ಮರು ನಿರ್ಮಿಸಲಾಗಿದ್ದು, ರಾಜ್ಯಪಾಲರು ಉದ್ಘಾಟಿಸಲಿದ್ದಾರೆ. ಸುಬ್ರಹ್ಮಣ್ಯ ಶ್ರೀ, ಎಡನೀರು ಶ್ರೀ, ಒಡಿಯೂರು ಶ್ರೀ, ಶೃಂಗೇರಿ ಶ್ರೀಗಳ ಸಹಿತ ನಾಡಿನ ಪ್ರಮುಖ ಮಠಗಳ ಸ್ವಾಮಿಗಳು, ಸಂತರು, ಜಗದ್ಗುರುಗಳು, ಅರಸು ವಂಶದವರು, ಗುತ್ತು ಮನೆತನದವರು ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಲಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಏ. 11ರಂದು ಸಂಜೆ ಬ್ರಹ್ಮಕಲಶಪೂಜೆ

ಏ. 11ರಂದು ಮಧ್ಯಾಹ್ನ ಯಾಗದ ಪೂರ್ಣಾಹುತಿ ನಡೆಯಲಿದೆ. ಈ ಸಂದರ್ಭದಲ್ಲಿ ದೇಶದ ಪ್ರಮುಖ ಶಂಕರಾಚಾರ್ಯ ಮಠಗಳಲ್ಲಿ ಒಂದಾದ ಕಂಚಿ ಕಾಮಕೋಟಿ ಮಠದ ಸ್ವಾಮೀಜಿ ಉಪಸ್ಥಿತರಿರುತ್ತಾರೆ.

ಬೆಳಗ್ಗೆ 6ರಿಂದ ಅರಣೀಮಥನ ಪ್ರಧಾನ ಕುಂಡದಲ್ಲಿ ಅಗ್ನಿ ಸ್ಥಾಪನೆ, ಅಗ್ನಿವಿಹರಣ, ಶ್ರೀರಾಮ ತಾರಕ ಯಾಗ ಆರಂಭಗೊಳ್ಳಲಿದೆ. ಮಧ್ಯಾಹ್ನ, ಪೂರ್ಣಾಹುತಿ ನಡೆಯಲಿದೆ. ಸಂಜೆ ಬ್ರಹ್ಮಕಲಶಪೂಜೆ ಮೊದಲಾದವು ನಡೆಯಲಿದೆ.

ಏ. 12ರಂದು ಬ್ರಹ್ಮಕಲಶಾಭಿಷೇಕ

ಏ. 12ರಂದು ಬೆಳಗ್ಗೆ ಶ್ರೀ ಕೋದಂಡರಾಮ ದೇವರು ಮತ್ತು ಶ್ರೀ ಪಂಚಮುಖಿ ಆಂಜನೇಯ ದೇವರಿಗೆ ಏಕಕಾಲದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯಲಿದೆ. 4 ದಿನಗಳ ಉತ್ಸವದಲ್ಲಿ ಸುಮಾರು 1 ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಬೆಳಗ್ಗೆ 5ರಿಂದ ಗಣಪತಿ ಹೋಮ, ಪ್ರತಿಷ್ಠಾಪಾಣಿ ವೃಷಭ ಲಗ್ನ ಸುಮುಹೂರ್ತದಲ್ಲಿ 8.20ರಿಂದ 10.20ರ ನಡುವಿನಲ್ಲಿ  ಕೋದಂಡರಾಮ ಮತ್ತು ಪಂಜಮುಖಿ ಆಂಜನೇಯ ದೇವರ ಪ್ರತಿಷ್ಠೆ, ಪರಿವಾರ ದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಸಂಜೆ ಶ್ರೀ ಕೋದಂಡರಾಮ ದೇವರಿಗೆ ರಂಗಪೂಜೆ, ದೇವರ ಉತ್ಸವ ಬಲಿ ನಡೆಯಲಿದೆ. 4 ದಿನಗಳ ಮಹೋತ್ಸವದಲ್ಲಿ ಅನ್ನಸಂತರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು

ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಹನುಮಗಿರಿಯಲ್ಲಿ ಲವ ವೇದಿಕೆ ಮತ್ತು ಅಮರಗಿರಿಯಲ್ಲಿ ಕುಶ ವೇದಿಕೆ ನಿರ್ಮಿಸಲಾಗಿದೆ. ಏ. 9ರಂದು ಸಂಜೆ 5ರಿಂದ ಲವ ವೇದಿಕೆಯಲ್ಲಿ ದಾಸವಾಣಿ ಮತ್ತು ನೃತ್ಯರೂಪಕ ನಡೆಯಲಿದೆ. ರಾತ್ರಿ 8ರಿಂದ ಕುಶ ವೇದಿಕೆಯಲ್ಲಿ ಜೋಡು ಜೀಟಿಗೆ ನಾಟಕ ಪ್ರದರ್ಶನ ನಡೆಯಲಿದೆ. ಏ. 10ರಂದು ಬೆಳಗ್ಗೆ 9.39ರಿಂದ ಲವ ವೇದಿಕೆಯಲ್ಲಿ ತಾಳಮದ್ದಳೆ, ನೃತ್ಯಸಂಭ್ರಮ, ಭಕ್ತಿ ಭಾವ ಸಂಗಮ, ಸಂಜೆ ಭರತನಾಟ್ಯ, ಯಕ್ಷಗಾನ ಪ್ರದರ್ಶನ ನಡೆಯಲಿದೆ. ಕುಶ ವೇದಿಕೆಯಲ್ಲಿ ಬೆಳಗ್ಗೆ 10ರಿಂದ ನೃತ್ಯ, ಭಕ್ತಿ ಸಂಗೀತ, ಭರತನಾಟ್ಯ, ಯಕ್ಷಗಾನ ಪ್ರದರ್ಶನ, ಸಂಜೆ ನೃತ್ಯ, ಶಾಸ್ತ್ರೀಯ ಮತ್ತು ಜನಪದ ನೃತ್ಯ ನಡೆಯಲಿದೆ.

ಏ. 11ರಂದು ಬೆಳಗ್ಗೆ 10ರಿಂದ ಲವ ವೇದಿಕೆಯಲ್ಲಿ ಸಾಂಸ್ಕೃತಿಕ ವೈವಿಧ್ಯ, ಸಂಗೀತ ಗಾನ ಸಂಭ್ರಮ, ಯಕ್ಷಗಾನ, ಸಂಜೆ ಭರತನಾಟ್ಯ, ಭಕ್ತಿಗೀತೆ, ನೃತ್ಯ ರೂಪಕ ನಡೆಯಲಿದೆ. ಕುಶ ವೇದಿಕೆಯಲ್ಲಿ ಬೆಳಗ್ಗೆ 10ರಿಂದ ಯಕ್ಷಗಾನ, ಭರತನಾಟ್ಯ, ಸಂಗೀತ ಕಾರ್ಯಕ್ರಮ, ಸಂಜೆ ಸ್ವರ ಮಾಧುರ್ಯ ಮ್ಯೂಸಿಕ್, ನೃತ್ಯರೂಪಕ, ನೃತ್ಯೋಹಂ ನಡೆಯಲಿದೆ. ಏ. 12ರಂದು ಲವ ವೇದಿಕೆಯಲ್ಲಿ ಬೆಳಗ್ಗೆ 10ರಿಂದ ನೃತ್ಯ ವೈಭವ, ಭರತ ನಾಟ್ಯ, ಯಕ್ಷಗಾನಾರ್ಚನೆ, ಗಾನಾರ್ಚನೆ, ಸಂಜೆ 7.30ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ. ಬೆಳಗ್ಗೆ ಕುಶ ವೇದಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಸ್ವಾಗತ ಸಮಿತಿ ಅಧ್ಯಕ್ಷ ಡಾ. ರವೀಶ್ ಪಡುಮಲೆ, ಹೊರೆಕಾಣಿಕೆ ಸಮಿತಿ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಬೂಡಿಯಾರು ರಾಧಾಕೃಷ್ಣ ರೈ, ಸಾಜ ರಾಧಾಕೃಷ್ಣ ಆಳ್ವ, ಶ್ರೀರಾಮ ಪಕ್ಕಳ, ಮುರಳೀಕೃಷ್ಣ ಹಸಂತಡ್ಕ, ರವಿಕಿರಣ ಶೆಟ್ಟಿ ಬೆದ್ರಾಡಿ, ಪ್ರಧಾನ ಕಾರ್ಯದರ್ಶಿಗಳಾದ ಆರ್.ಸಿ. ನಾರಾಯಣ ರೆಂಜ, ನಹುಷ ಪಿ.ವಿ. ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರು ಜಾತ್ರೆಗೆ ಮೆಸ್ಕಾಂ ಮುಂಜಾಗ್ರತೆ!! ದೇವರ ಪೇಟೆ ಸವಾರಿಯ ರಸ್ತೆಗಳಲ್ಲಿ ವಿದ್ಯುತ್ ಸುರಕ್ಷತಾ ಕಾರ್ಯ

ಪುತ್ತೂರು: ಮಹಾಲಿಂಗೇಶ್ವರ ಜಾತ್ರೋತ್ಸವದ ಪ್ರಯುಕ್ತ ದೇವರ ಪೇಟೆ ಸವಾರಿ ಸೇರಿದಂತೆ ಜನಸಂದಣಿ…

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯಿಂದ ದೇವಸ್ಥಾನಕ್ಕೆ ಅಕ್ಕಿ, ಸಾಮಗ್ರಿ ಸಮರ್ಪಣೆ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯ ವತಿಯಿಂದ ದೇವಸ್ಥಾನದ…

ಕಡಿಮೆ ವೇತನಕ್ಕಾಗಿ ಕ್ರಿಶ್ಚಿಯನ್ ಯುವಕನಿಂದ ದೈವ ನರ್ತನ!! ಮಂಗಳೂರಿನಲ್ಲಿ ನಡೆದ ಘಟನೆಗೆ ವಿರೋಧ ವ್ಯಕ್ತಪಡಿಸಿದ ಡಾ. ರತಿ

ಮಂಗಳೂರು: ಕ್ರಿಶ್ಚಿಯನ್ ಮಹಿಳೆಗೆ ಜನಿಸಿದ ಯುವಕನಿಂದ ದೈವ ನರ್ತನ ಸೇವೆ ಮಾಡಿಸಿದ್ದು, ಇದೀಗ…