ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕಾಂಗ್ರೇಸ್ ಪಕ್ಷದ ದ.ಕ ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಇದರ ವತಿಯಿಂದ ರಾಜಕೀಯ ಕಾರ್ಯಕ್ರಮ ನಡೆಸಿದ್ದು, ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ. ಪ್ರಸನ್ನ ಆಗ್ರಹಿಸಿದ್ದಾರೆ.
ದಿನಾಂಕ 08-03-2026 ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ತಾನದ ನಟರಾಜ ವೇದಿಕೆಯಲ್ಲಿ ದ.ಕ ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೇಸ್ ಇದರ ವತಿಯಿಂದ ಮಹಿಳಾ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ದೇವಸ್ಥಾನದ ಪವಿತ್ರ ಅವರಣದಲ್ಲಿ ರಾಜಕೀಯ ಚಟುವಟಿಕೆಗಳನ್ನು ನಡೆಸುವುದು ದೇವಸ್ಥಾನದ ಧಾರ್ಮಿಕ ಸ್ವರೂಪಕ್ಕೆ ಧಕ್ಕೆ ತರುವಂತದ್ದು ಮತ್ತು ಮೇಲ್ಕಂಡ ಕಾಯ್ದೆಯ ಉದ್ದೇಶ ಹಾಗೂ ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ಈ ಕಾರ್ಯಕ್ರಮದಲ್ಲಿ ಅನ್ಯಧರ್ಮದ ವ್ಯಕ್ತಿಗಳು ಕೂಡ ಭಾಗಿಯಾಗಿರುವುದು ದೇವಸ್ಥಾನದ ಭಕ್ತರಾದ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಕಾರ್ಯ ನಡೆದಿರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅನ್ಯಧರ್ಮದವರನ್ನು ದೇವಸ್ಥಾನದ ವೇದಿಕೆಯಲ್ಲಿ ಕುಳ್ಳಿರಿಸಿ ರಾಜಕೀಯ ಕಾರ್ಯ ಕ್ರಮ ಮಾಡಿದ ಕಾಂಗ್ರೆಸ್ ಕೃತ್ಯವನ್ನು ವಿಶ್ವಹಿಂದೂ ಪರಿಷತ್ ಭಜರಂಗದಳ ತೀವ್ರವಾಗಿ ಖಂಡಿಸುತ್ತದೆ ಎಂದಿರುವ ಅವರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗಬಾರದು ಎಂಬ ನಿಯಮವನ್ನು ಮುರಿಯಲಾಗಿದೆ ಎಂದು ಆರೋಪಿಸಿದ್ದಾರೆ.






















