ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ದಂಬೆತ್ತಿಮಾರ್’ದ ಮಾಯ್ಕಾರೆ ಅಜ್ಜೆ ಶ್ರೀ ಕೊರಗತನಿಯ ಕ್ಷೇತ್ರದಲ್ಲಿ ವಾರ್ಷಿಕ ನೇಮೋತ್ಸವ ಮಾ. 14, 15ರಂದು ನಡೆಯಲಿದೆ.
ದೈವ ನರ್ತಕ ದಾಮೋದರ ಎಂ. ಮಾಲಡ್ಕ ಬೆಟ್ಟಂಪಾಡಿ ಅವರ ನೇತೃತ್ವದಲ್ಲಿ ನಡೆಯುವ ದಂಬೆತ್ತಿಮಾರ್’ದ ವಾರ್ಷಿಕ ನೇಮೋತ್ಸವದಲ್ಲಿ ಮಾ. 14ರಂದು ಬೆಳಿಗ್ಗೆ 9ಕ್ಕೆ ಗಣಪತಿ ಹೋಮ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 4 ಗಂಟೆಯಿಂದ ಭಜನಾ ತಂಡಗಳಿಂದ ಭಜನೆ, ಸಂಜೆ 6ರಿಂದ ದೈವಗಳ ಭಂಡಾರ ಇಳಿಸುವುದು, 7ರಿಂದ ಧಾರ್ಮಿಕ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಚೌಕಾರು ಮಂತ್ರವಾದಿ ಗುಳಿಗ ಬಳಿಕ ಕಲ್ಲುರ್ಟಿ ದೈವದ ನೇಮೋತ್ಸವ, ಪ್ರಸಾದ ವಿತರಣೆ ಜರುಗಲಿದೆ.
ಮಾ. 15ರಂದು ಬೆಳಿಗ್ಗೆ 8 ಗಂಟೆಯಿಂದ ಶ್ರೀ ಕೊರಗ ತನಿಯ ದೈವದ ನೇಮೋತ್ಸವ ಮತ್ತು ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಮಾ. 14ರಂದು ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಅಶೋಕ್ ಕುಮಾರ್ ರೈ ವಹಿಸಲಿದ್ದಾರೆ. ಧಾರ್ಮಿಕ ಮುಖಂಡ ಮುರಳಿಕೃಷ್ಣ ಹಸಂತಡ್ಕ, ಆರ್ಯಾಪು ಗ್ರಾಪಂ ಅಧ್ಯಕ್ಷರಾಗಿದ್ದ ಗೀತಾ, ಹಿಂದೂ ಜಾಗರಣಾ ವೇದಿಕೆಯ ಅಜಿತ್ ಕುಮಾರ್ ರೈ ಹೊಸಮನೆ, ಆರ್ಯಾಪು ಗ್ರಾಪಂ ಸದಸ್ಯರಾಗಿದ್ದ ಯತೀಶ್ ದೇವ ಸಂಟ್ಯಾರ್, ಉದ್ಯಮಿ ಸಂತೋಷ್ ರೈ ಕೈಕಾರ, ಸಮಾಜ ಸೇವಾ ಕಾರ್ಯಕರ್ತ ಗಿರೀಶ್ ಕುಮಾರ್ ಕೈಕಾರ, ಆರ್ಯಾಪು ಗ್ರಾಪಂ ಮಾಜಿ ಸದಸ್ಯ ರೇಖಾನಾಥ ರೈ ಮುಖ್ಯಅತಿಥಿಗಳಾಗಿರುವರು. ಪುತ್ತೂರು ಸರ್ಕಾರಿ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞ ಡಾ. ಅಜಯ್ ಎಂ.ಬಿ., ಸಮಾಜ ಸೇವಾ ಕಾರ್ಯಕರ್ತ ಜಯಂತ ಶೆಟ್ಟಿ ಕಂಬಳದಡ್ಡ, ಬೂಡಿಯಾರ್ ಹೊಸಮನೆ ಶ್ರೀ ಚಕ್ರರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷ ಗಂಗಾಧರ ಅಮೀನ್ ಹೊಸಮನೆ ಗೌರವ ಉಪಸ್ಥಿತರಿರುವರು.
ಇದೇ ಸಂದರ್ಭ ವಾಸ್ತುಶಿಲ್ಪಿ ಶೇಷಪ್ಪ ಗೌಡ ಬೆಟ್ಟಂಪಾಡಿ, ದೈವ ನರ್ತಕ ನೇಮು ಕಣಿಯೂರು ಮಾಡಾವು, ನೀರಿನ ದಾನಿ ಜಿನ್ನಪ್ಪ ಮಡಿವಾಳ ಇಂತಿಕಲ್ಲು, ರವಿ ಮೇಗಿನಪಂಜ, ನಂದಿನಿ ಕೋಟ್ಲಾರ್, ಪುತ್ತೂರು ಸರಕಾರಿ ಆಸ್ಪತ್ರೆಯ ಕಿರಣ್ ಹಾಗೂ ಪುರಂದರ, ಶ್ರೀ ಮಹಾಲಿಂಗೇಶ್ವರ ಬ್ರಹ್ಮಮೊಗೇರ (ಪುತ್ತೂರು ಆರಾಧನಾ ಟ್ರಸ್ಟ್)ನ ಅಧ್ಯಕ್ಷ ಗಣೇಶ ಸಂಪ್ಯ, ಚೇತನ್ ಕನಕಗಿರಿ ಸರ್ವೆ, ಮುದರ ದಂಬೆತ್ತಿಮಾರ್ ಅವರನ್ನು ಸನ್ಮಾನಿಸಲಾಗುವುದು.
ಹರಕೆಯ ನೇಮ:
ಮಾ. 21ರಂದು ಹರಕೆಯ ನೇಮೋತ್ಸವ ನಡೆಯಲಿದ್ದು, ಕುಂಜೂರುಪಂಜ ಹರೀಶ್ ಗೋಳಿತ್ತಡಿ ಅವರು ಸೇವಾಕರ್ತರಾಗಿರುವರು. ಅಂದು ಸಂಜೆ 6 ಗಂಟೆಗೆ ಕೊರಗತನಿಯ ದೈವದ ಭಂಡಾರ ಇಳಿಸುವುದು. 7ರಿಂದ ಭಜನೆ, 8ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 9ರಿಂದ ಕೊರಗತನಿಯ ದೈವದ ಹರಕೆಯ ನೇಮೋತ್ಸವ ಹಾಗೂ ಕರಿಗಂಧ ಪ್ರಸಾದ ವಿತರಣೆ ನಡೆಯಲಿದೆ.
ಹರಕೆಯ ಸೇವೆ:
ವಾರ್ಷಿಕ ನೇಮೋತ್ಸವ ಸಂದರ್ಭ ಕಲ್ಲುರ್ಟಿ ದೈವಕ್ಕೆ ಪಟ್ಟೆಸೀರೆ, ಮಲ್ಲಿಗೆ, ಹೂ, ಹಿಂಗಾರ ಇತ್ಯಾದಿ ಸೇವೆ ಮಾಡಿಸುವವರು 1 ವಾರ ಮುಂಚಿತವಾಗಿ ತಿಳಿಸಬೇಕು. ಅದೇ ರೀತಿ ಕೊರಗತನಿಯ ದೈವದ ಕೈಯಲ್ಲಿ ಮಗುವನ್ನು ಕೊಡಲಿಚ್ಚಿಸುವವರು 1 ವಾರ ಮುಂಚಿತವಾಗಿ ತಿಳಿಸಬೇಕು ಹಾಗೂ ಬಿಳಿ ಬೈರಾಸು, ಹಿಂಗಾರ ತರಬೇಕು. ಚೌಕಾರು ಮಂತ್ರವಾದಿ ಗುಳಿಗ ದೈವಕ್ಕೆ ಹರಕೆ ರೂಪದಲ್ಲಿ ಸೀಯಾಳ, ತೆಂಗಿನಕಾಯಿ, ಎಣ್ಣೆ, ಸಾರಾಯಿ ಅರ್ಪಿಸಲು ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.
ನಾಗ ಸಾನಿಧ್ಯ:
ಕ್ಷೇತ್ರದಲ್ಲಿ ನಾಗ ಸಾನಿಧ್ಯದ ಅಂಶ ಬೆಳಕಿಗೆ ಬಂದಿದೆ. ಈ ಹಿಂದೆಯೇ ಕೊರಗತನಿಯ ದೈವದ ನುಡಿಯಾಗಿದ್ದಂತೆ, ಕೊರಗತನಿಯ ಕಟ್ಟೆಯ ಪಕ್ಕದಲ್ಲಿ ಹುತ್ತ ಮೂಡಿದೆ. ಆವರಣದ ಹೊರಭಾಗದಲ್ಲಿಯೂ ಹುತ್ತ ಇದ್ದು, ಮುಂದಿನ ದಿನದಲ್ಲಿ ಕ್ಷೇತ್ರದಲ್ಲಿ ನಾಗನ ಸಾನಿಧ್ಯ ಬೆಳಗುವ ಸೂಚನೆ ಸಿಕ್ಕಿದೆ ಎಂದು ಕ್ಷೇತ್ರದ ಪ್ರದಾನ ಅರ್ಚಕ ಯೋಗೀಶ್ ದಂಬೆತ್ತಿಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.























