ಪುತ್ತೂರು: ಬೊಳ್ವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ‘ಆಂಜನೇಯ 57’ ಸಂಭ್ರಮ ಡಿ. 25ರಂದು ಮಧ್ಯಾಹ್ನ 1 ರಿಂದ ರಾತ್ರಿ 9ರ ತನಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ನಟರಾಜ ವೇದಿಕೆ’ಯಲ್ಲಿ ಜರುಗಲಿದೆ ಎಂದು ಅಧ್ಯಕ್ಷ ಭಾಸ್ಕರ ಬಾರ್ಯ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಸಾನ್ನಿಧ್ಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ಸಂಪನ್ನವಾಗಲಿದೆ. ಯಕ್ಷಗಾನ ಭಾಗವತ ಮದ್ಲೆಗಾರ್ ಪದ್ಯಾಣ ಜಯರಾಮ ಭಟ್ ಇವರಿಗೆ ‘ಶ್ರೀ ಯಕ್ಷಾಂಜನೇಯ ಪ್ರಶಸ್ತಿ’ಯನ್ನು ಹಾಗೂ ಹಿರಿಯ ಕಲಾವಿದ ಉಬರಡ್ಕ ಉಮೇಶ ಶೆಟ್ಟಿ ಇವರಿಗೆ ‘ಶ್ರೀಮತಿ ಶಾಂತಾ ಮತ್ತು ಜಸ್ಟೀಸ್ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುವುದು ಎಂದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ಟರು ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರಿನ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಅವರು ಶುಭಾಶಂಸನೆ ಮಾಡಲಿದ್ದಾರೆ. ಮಂಗಳೂರಿನ ಅಭಿಮತ ಟಿವಿ ಇದರ ಆಡಳಿತ ಪಾಲುದಾರೆ ಡಾ. ಮಮತಾ ಪಿ. ಶೆಟ್ಟಿ ಹಾಗೂ ಬೆಂಗಳೂರಿನ ವಿಶ್ರಾಂತ ಉಪನ್ಯಾಸಕಿ ರೇಖಾ ರೈ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಯಕ್ಷಗಾನ ಅರ್ಥದಾರಿ ಗಣರಾಜ ಕುಂಬ್ಳೆ ಅವರು ಪ್ರಶಸ್ತಿ ಪುರಸ್ಕೃತರಿಗೆ ನುಡಿಹಾರವನ್ನು ಸಲ್ಲಿಸಲಿದ್ದಾರೆ ಎಂದು ವಿವರಿಸಿದರು.
ಮಧ್ಯಾಹ್ನ ಗಂಟೆ 1ಕ್ಕೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ ನಾಯಕ್ ಅವರು ‘ಶ್ರೀ ಆಂಜನೇಯ 57’ ಕಲಾಪವನ್ನು ಉದ್ಘಾಟಿಸಲಿದ್ದಾರೆ. 1-30ರಿಂದ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಸದಸ್ಯೆಯರಿಂದ ವಿನೂತನ ಪರಿಕಲ್ಪನೆಯ ‘ವಿಪ್ರಕೂಟ’ ಎನ್ನುವ ತಾಳಮದ್ದಳೆ ಜರುಗಲಿದೆ. ಮಧ್ಯಾಹ್ನ 3ರಿಂದ ಜಿಲ್ಲೆಯ ಖ್ಯಾತ ಅರ್ಥದಾರಿಗಳ ಕೂಡುವಿಕೆಯಲ್ಲಿ ‘ಶ್ಯಮಂತಕ ಮಣಿ’ ಪ್ರಸಂಗದ ತಾಳಮದ್ದಳೆ ನಡೆಯಲಿದೆ. ಕಲಾವಿದರಾಗಿ ಹೊಸಮೂಲೆ ಗಣೇಶ ಭಟ್, ಭವ್ಯಶ್ರೀ ಕುಲ್ಕುಂದ, (ಭಾಗವತರು), ಪದ್ಯಾಣ ಶಂಕರನಾರಾಯಣ ಭಟ್, ಪಿ.ಟಿ.ಜಯರಾಮ ಭಟ್, ಮುರಳೀಧರ ಕಲ್ಲೂರಾಯ (ಚೆಂಡೆ, ಮದ್ದಳೆ): ಜಬ್ಬಾರ್ ಸಮೋ, ರವಿರಾಜ ಪನೆಯಾಲ, ಡಾ.ಪ್ರದೀಪ್ ಸಾಮಗ ಹಾಗೂ ಗಣರಾಜ ಕುಂಬ್ಳೆ (ಅರ್ಥದಾರಿಗಳು) ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಆನಂದ ಸವಣೂರು, ಕೋಶಾಧಿಕಾರಿ ದುಗ್ಗಪ್ಪ ಎನ್., ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷೆ ಪ್ರೇಮಲತಾ ಟಿ. ರಾವ್, ಕಾರ್ಯದರ್ಶಿ ಹರಿಣಾಕ್ಷಿ ಜೆ. ಶೆಟ್ಟಿ ಉಪಸ್ಥಿತರಿದ್ದರು.



























