ಧಾರ್ಮಿಕ

ನ. 23: ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಯಾತ್ರಿ ನಿವಾಸಕ್ಕೆ ಶಿಲಾನ್ಯಾಸ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇತಿಹಾಸ ಪ್ರಸಿದ್ದಿ ಬಡಗನ್ನೂರು ಗ್ರಾಮದ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಭಕ್ತರ ಅನುಕೂಲಕ್ಕಾಗಿ ‘ಯಾತ್ರಿ ನಿವಾಸ’ ಮತ್ತು ‘ಅನ್ನಛತ್ರ’ ನಿರ್ಮಾಣದ ಯೋಜನೆಗೆ ನ. 23ರಂದು ಬೆಳಿಗ್ಗೆ 10ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ ಹೇಳಿದರು.

Shani-pooja

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ಕ್ಷೇತ್ರದ ಆಡಳಿತ ಸಮಿತಿ ಮತ್ತು ದೇಯಿ ಬೈದೆತಿ ಮೂಲಸ್ಥಾನ ಟ್ರಸ್ಟ್‌ನಿಂದ ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸ ಮತ್ತು ಅನ್ನಛತ್ರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ಅದರ ನೀಲ ನಕಾಶೆ ಸಿದ್ದಗೊಂಡಿದೆ. ಕ್ಷೇತ್ರ ಸಮೀಪ 4 ಎಕ್ರೆ ಜಾಗ ಖರೀದಿಸಿ ಅದರಲ್ಲಿ ಯಾತ್ರಿ ನಿವಾಸ ನಿರ್ಮಾಣ ಆಗಲಿದೆ. ಸುಮಾರು ರೂ. 7 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಾಣಗೊಳ್ಳಲಿದೆ ಎಂದರು.

ಅನ್ನಛತ್ರವು ಗೆಜ್ಜೆಗಿರಿ ಧರ್ಮಚಾವಡಿಯ ಎದುರು ಭಾಗದಲ್ಲಿ ನಿರ್ಮಾಣ ಆಗಲಿದೆ. ಯಾತ್ರಿ ನಿವಾಸದ ಶಿಲಾನ್ಯಾಸವನ್ನು ಬರೋಡಾದ ಉದ್ಯಮಿ ದಯಾನಂದ ಬೊಂಟ್ರ ಅವರು ನೆರವೇರಿಸಲಿದ್ದಾರೆ. ಸೋಲೂರು ಮಠ ಆರ್ಯಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಸಭಾ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಶ್ರೀಪಾದ ನಾಯ್ಕ, ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ, ದ.ಕ. ಸಂಸದ ಕ್ಯಾ।ಬ್ರಿಜೇಶ್ ಚೌಟ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಅಶೋಕ್ ಕುಮಾರ್ ರೈ ಸಹಿತ ಜನಪ್ರತಿನಿಧಿಗಳು, ಹಲವಾರು ಮಂದಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.

4 ಅಂತಸ್ತಿನ ಯಾತ್ರಿ ನಿವಾಸ:

ಸುಮಾರು 60 ಸಾವಿರ ಚದರ ಅಡಿಯಲ್ಲಿ ಯಾತ್ರಿ ನಿವಾಸ ನಿರ್ಮಾಣಗೊಳ್ಳಲಿದ್ದು, ಒಟ್ಟು 5 ಅಂತಸ್ತು ಇರಲಿದೆ.ನೆಲ ಮಹಡಿಯಲ್ಲಿ ಪಾಕಶಾಲೆ, ಮೇಲಂತಸ್ತಿನಲ್ಲಿ 20 ಕೊಠಡಿಗಳು, ಸಮುದಾಯ ಭವನ, ದೇಯಿ ಬೈದೆತಿ ಆಯುರ್ವೇದ ಸಂಶೋಧನಾ ಟ್ರಸ್ಟ್ ಬರಲಿದೆ. ಪ್ರಥಮ ಹಂತದಲ್ಲಿ 20 ಕೊಠಡಿಗಳು ನಿರ್ಮಾಣ ಆಗಲಿದೆ ಎಂದರು.

ಆಯುರ್ವೇದ ಆಸ್ಪತ್ರೆ ಸಹಿತ ಹಲವು ಯೋಜನೆ:

ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಗೌರವಾಧ್ಯಕ್ಷ ಜಯಂತ ನಡುಬೈಲು ಮಾತನಾಡಿ, ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಪರವೂರು, ವಿದೇಶಗಳಿಂದಲೂ ಅನೇಕ ಮಂದಿ ಭಕ್ತರು ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಮೂಲಭೂತ ಸೌಕರ್ಯ ನೀಡುವ ಉದ್ದೇಶದಿಂದ ಯಾತ್ರಿ ನಿವಾಸ ಮತ್ತು ಅನ್ನಛತ್ರಕ್ಕೆ ಶಿಲಾನ್ಯಾಸ ಯೋಜನೆ ಕೈಗೊಂಡಿದ್ದೇವೆ. ನಮ್ಮ ಯೋಚನೆ, ಯೋಜನೆ ತುಂಬಾ ಇದೆ. ಅದರಲ್ಲಿ ಮುಂದೆ ಧ್ಯಾನ ಮಂದಿರ, ಶ್ರೀ ತಾಯಿ ದೇಯಿ ಬೈದೆತಿ ಔಷಧ ವನದಲ್ಲಿ ಆಯುರ್ವೇದ ಆಸ್ಪತ್ರೆ ಸಹಿತ ಹಲವು ಯೋಜನೆ ನಮ್ಮ ಮುಂದಿದೆ.ಕ್ಷೇತ್ರದಲ್ಲಿ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಕೆಲವೊಂದು ಸಣ್ಣಪುಟ್ಟ ಬದಲಾವಣೆ ಒಂದು ವರ್ಷದಲ್ಲಿ ಆಗಲಿದೆ ಎಂದರು.

ಹಂತ ಹಂತವಾಗಿ ಕ್ಷೇತ್ರಕ್ಕೆ ಅನುದಾನ ಬಳಕೆ:

ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ರಾಜಾರಾಮ್ ಕೆ.ಬಿ. ಮಾತನಾಡಿ, ಶಾಸಕರ ಮತ್ತು ಸಹಾಯಕ ಕಮಿಷನರ್ ನೇತೃತ್ವದಲ್ಲಿ, ಸರಕಾರದ ಹಂತದಲ್ಲಿ ರೂ. 2 ಕೋಟಿ ಹಣ ಮೀಸಲಿಡಲಾಗಿದೆ. ಆ ಅನುದಾನವನ್ನು ಹಂತ ಹಂತವಾಗಿ ಕ್ಷೇತ್ರಕ್ಕೆ ಬಳಕೆ ಮಾಡಲಾಗುವುದು ಎಂದು ಹೇಳಿದರು.

ದೇಯಿ ಬೈದೆತಿ ಕೋಟಿ ಚೆನ್ನಯ್ಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ, ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಉಪಾಧ್ಯಕ್ಷ ದೀಪಕ್ ಕೋಟ್ಯಾನ್, ನಾರಾಯಣ ಮಚ್ಚಿಮಲೆ, ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಟ್ರಸ್ಟ್‌ನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಕುಕ್ಕೆ–ಕೊಲ್ಲೂರು ದೇವಾಲಯಗಳ ಅಭಿವೃದ್ಧಿಗೆ ಸರ್ಕಾರದ ಮಹತ್ವದ ಘೋಷಣೆ: ಬಜೆಟ್‌ನಲ್ಲಿ ವಿಶೇಷ ಪ್ರಾಧಿಕಾರ

ಬೆಂಗಳೂರು:ರಾಜ್ಯದ ಪ್ರಸಿದ್ಧ ಧಾರ್ಮಿಕ  ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ  ಮತ್ತು ಕೊಲ್ಲೂರು…