ಉಜಿರೆ: ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಹಾಗೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಹಾಗೂ ಕುಟುಂಬವರ್ಗದವರ ಆಶೀರ್ವಾದ ಮತ್ತು ಶುಭ ಹಾರೈಕೆಗಳೊಂದಿಗೆ ಪಾದಯಾತ್ರೆ ಸುಗಮವಾಗಿ ಅನನ್ಯ ಅನುಭವ ನೀಡಿದೆ ಎಂದು ಅಂಕಣಕಾರ ಅಹಮ್ಮದ್ ಉಲ್ಲಾ ಹೇಳಿದರು.
ಮಂಗಳವಾರ ಪಾದಯಾತ್ರೆಯಲ್ಲಿ ಧರ್ಮಸ್ಥಳ ತಲುಪಿದಾಗ ಅವರನ್ನು ಪ್ರವೇಶ ದ್ವಾರದಿಂದ ಸ್ವಾಗತಿಸಿ ಭವ್ಯ ಮೆರವಣಿಗೆಯಲ್ಲಿ ಬೀಡಿಗೆ ಕರೆತರಲಾಯಿತು. ಬಳಿಕ ಅವರು ಹೆಗ್ಗಡೆಯವರೊಂದಿಗೆ ಪಾದಯಾತ್ರೆ ಬಗ್ಯೆ ತನ್ನ ಅನುಭವ ಹಂಚಿಕೊಂಡರು.
ದಾರಿಯುದ್ಧಕ್ಕೂ ಹೆಗ್ಗಡೆಯವರು ಹಾಗೂ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಯೆ ಜನರ ಶ್ರದ್ಧಾ-ಭಕ್ತಿ ಹಾಗೂ ಅಭಿಮಾನದ ಮಾತುಗಳನ್ನು ಆಲಿಸಿ ಸಂತಸವಾಯಿತು. ಇಡೀ ರಾಜ್ಯದ ಜನತೆ ಧರ್ಮಸ್ಥಳದ ಅಭಿಮಾನಿಗಳು ಹಾಗೂ ಭಕ್ತರು. ನಾವೆಲ್ಲರೂ ನಿಮ್ಮ ಪವಿತ್ರ ಕ್ಷೇತ್ರದ ಫಲಾನುಭವಿಗಳು ಎಂದು ಸಂತಸ ವ್ಯಕ್ತಪಡಿಸಿದರು.
ಪೂಜ್ಯ ವಿದ್ಯಾಸಾಗರ ಮುನಿಮಹಾರಾಜರ ಸಂಘ ಧರ್ಮಸ್ಥಳಕ್ಕೆ ಪುರಪ್ರವೇಶ ಇಂದು
ಆಗಮ ಚಕ್ರವರ್ತಿ ಪೂಜ್ಯ ವಿದ್ಯಾಸಾಗರ ಮುನಿಮಹಾರಾಜರ ನೇತೃತ್ವದಲ್ಲಿ ದಿಗಂಬರ ಮುನಿಗಳ ಸಂಘ ಇಂದು ಬುಧವಾರ ಅಪರಾಹ್ನ ನಾಲ್ಕು ಗಂಟೆಗೆ ಧರ್ಮಸ್ಥಳ ಪುರಪ್ರವೇಶ ಮಾಡಲಿದೆ.
ಪೂಜ್ಯ ವಿದ್ಯಾಸಾಗರ ಮುನಿಮಹಾರಾಜರು, ನಿರ್ಯಾಪಕ ಸಮಾನ ಮಹಾರಾಜರು, ಪ್ರಶಾಂತ ಸಾಗರ ಮಹಾರಾಜರು, ಅವಿಚರಸಾಗರ್ ಮಹಾರಾಜ್, ಶಾಶ್ವತಸಾಗರ ಮಹಾರಾಜ್, ಆಧ್ಯಾತ್ಮಸಾಗರ್ ಮಹಾರಾಜ್, ಆಗಮಸಾಗರ ಮಹಾರಾಜ್, ಅನೇಕಾಂತ್ ಸಾಗರ ಮಹಾರಾಜ್, ನೇಮಿಸಾಗರ ಮಹಾರಾಜ್ ಮುನಿಸಂಘದಲ್ಲಿದ್ದಾರೆ.
ಇಂದು ಬುಧವಾರ ಅಪರಾಹ್ನ ನಾಲ್ಕು ಗಂಟೆಗೆ ಧರ್ಮಸ್ಥಳದಲ್ಲಿ ಪ್ರೌಢಶಾಲಾ ಬಳಿ ಮುನಿಸಂಘವನ್ನು ಶ್ರಾವಕರು-ಶ್ರಾವಕಿಯರು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸುವರು.
ಬಳಿಕ ಭಗವಾನ್ ಚಂದ್ರನಾಥ ಸ್ವಾಮಿ ಬಸದಿ ಬಳಿ ಇರುವ ಕುಟೀರದಲ್ಲಿ ಮುನಿಗಳು ಮಂಗಳ ಪ್ರವಚನ ನೀಡುವರು.
ನಾಳೆ ಗುರುವಾರ ಬೆಳ್ತಂಗಡಿ, ವೇಣೂರು ಮೂಲಕ ಮುನಿಗಳು ಮೂಡಬಿದ್ರೆಗೆ ವಿಹಾರ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಲಕ್ಷದೀಪೋತ್ಸವ:
ಧರ್ಮಸ್ಥಳದಲ್ಲಿ ಬುಧವಾರ ರಾತ್ರಿ ಗೌರಿಮಾರು ಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ನಡೆಯುತ್ತದೆ. ನಾಡಿನೆಲ್ಲೆಡೆಯಿಂದ ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ಬಂದು ವೈವಿಧ್ಯಮಯ ಸೇವೆ ಮಾಡುತ್ತಾರೆ.
ರೈತರು ಬೆಳೆದ ತರಕಾರಿ, ದವಸಧಾನ್ಯಗಳನ್ನು ಅನ್ನದಾಸೋಹಕ್ಕೆ ಕಾಣಿಕೆಯಾಗಿ ಅರ್ಪಿಸುತ್ತಾರೆ. ಬೆಂಗಳೂರಿನ ಹೂವಿನ ವ್ಯಾಪಾರಿಗಳು ಎಲ್ಲಾ ಜಾತಿಯ ವೈವಿಧ್ಯಮಯ ಹೂವು, ಎಲೆ, ತರಕಾರಿ, ಸೀಯಾಳ, ತೆಂಗಿನ ಕಾಯಿ ತಂದು ಬೀಡು, ದೇವಸ್ಥಾನ, ಅನ್ನಪೂರ್ಣ ಭೋಜನಾಲಯವನ್ನು ವಿವಿಧ ಆಕರ್ಷಕ ವಿನ್ಯಾಸಗಳಿಂದ ಅಲಂಕರಿಸಿದ್ದಾರೆ.
ಮಂಜೂಷಾ ವಸ್ತುಸಂಗ್ರಹಾಲಯ, ಕಾರ್ ಮ್ಯೂಸಿಯಂ, ತಾಳೆಗರಿ ಗ್ರಂಥಾಲಯ, ಲಲಿತೋದ್ಯಾನ, ಬಾಹುಬಲಿ ಬೆಟ್ಟ, ಅಣ್ಣಪ್ಪ ಸ್ವಾಮಿ ಬೆಟ್ಟ, ಜಮಾ ಉಗ್ರಾಣ, ಭಗವಾನ್ ಚಂದ್ರನಾಥಸ್ವಾಮಿ ಬಸದಿ, ನೆಲ್ಯಾಡಿಬೀಡು ಮೊದಲಾದ ಪ್ರೇಕ್ಷಣಿಯ ತಾಣಗಳನ್ನು ವೀಕ್ಷಿಸಿ ಅನ್ನದಾಸೋಹದೊಂದಿಗೆ ಜ್ಞಾನದಾಸೋಹದ ಸೊಗಡನ್ನೂ ಆಸ್ವಾದಿಸಿ ಆನಂದಿಸುತ್ತಿದ್ದಾರೆ.



























