ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ನೇತೃತ್ವದಲ್ಲಿ ನವೆಂಬರ್ 29, 30ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ, ಹಿಂದವಿ ಸಾಮ್ರಾಜ್ಯೋತ್ಸವದ ಆಮಂತ್ರಣ ಬಿಡುಗಡೆ ಸಮಾರಂಭ ಭಾನುವಾರ ಮುಕ್ರಂಪಾಡಿ ಸುಭದ್ರ ಸಭಾಭವನದಲ್ಲಿ ಜರಗಿತು.
ಆಮಂತ್ರಣ ಬಿಡುಗಡೆ ಮಾಡಿ ಮಾತನಾಡಿದ ಒಡಿಯೂರು ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ, ವಿಶ್ವದ ದೇವರ ಮನೆ ಭಾರತ. ಹಾಗಾಗಿ ಭಾರತ ವಿಶ್ವಗುರು ಎನಿಸಿಕೊಂಡಿದೆ. ಅಂದರೆ ಸನಾತನ ಸಂಸ್ಕೃತಿಯ ಮೂಲ ದೇವರ ಆರಾಧನೆ. ಭಕ್ತಿಯಿಂದ ನಮ್ಮನ್ನು ನಾವು ದೇವರಿಗೆ ಸಮರ್ಪಿಸಿಕೊಳ್ಳುವ ಪ್ರಕ್ರಿಯೆ ಶ್ರೀನಿವಾಸ ಕಲ್ಯಾಣೋತ್ಸವದ ಮೂಲಕ ನಡೆಯುತ್ತಿದೆ ಎಂದರು.
ಸಮಾಜದಲ್ಲಿ ಇಂದು ಅನೇಕ ಗೊಂದಲ, ಅವಘಡಗಳನ್ನು ಕಾಣುತ್ತೇವೆ. ಇವೆಲ್ಲಾ ದೂರ ಆಗಬೇಕು. ಇದಕ್ಕೆ ಪರಿಹಾರ ದೇವರ ಆರಾಧನೆಯೊಂದೇ. ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ಸಮಾಜವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಬೇಕು ಎಂಬ ಆಶಯದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯ ಎಂದರು.
ಹಿಂದೂ ಧರ್ಮಕ್ಕೆ ಎಂದೂ ಅವನತಿ ಇಲ್ಲ. ಓರ್ವ ದೊರೆ ಅಶ್ವತ್ಥ ಮರವನ್ನು ಚಿಗುರೊಡೆಯದಂತೆ ಕತ್ತರಿಸಿ ಎಂದು ಆಜ್ಞಾಪಿಸಿದನಂತೆ. ಸ್ವಲ್ಪ ಸಮಯದಲ್ಲಿ ಕಿಲೋ ಮೀಟರ್ ದೂರದಲ್ಲಿ ಆ ಮರ ಚಿಗುರೊಡೆದು, ತಾನಿಲ್ಲಿದ್ದೇನೆ ಎಂದು ತೋರಿಸಿತಂತೆ. ಅದೇ ರೀತಿ ಹಿಂದೂ ಧರ್ಮ. ಧರ್ಮದ ನಾಶಕ್ಕೆ ಪ್ರಯತ್ನಿಸಿದಷ್ಟು ಅಶ್ವತ್ಥ ಮರದಂತೆ ಮತ್ತೆ ಮತ್ತೆ ಚಿಗುರೊಡೆಯುತ್ತದೆ. ಇದಕ್ಕೆ ನಾವೆಲ್ಲಾ ಒಗ್ಗಟ್ಟಾಗಿ ಧರ್ಮ ಆರಾಧನಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪರಮಾತ್ಮ ಹಾಗೂ ಜೀವಾತ್ಮರನ್ನು ಒಂದಾಗಿ ಬೆಸೆಯುವ ಕಾರ್ಯ ಈ ಕಾರ್ಯಕ್ರಮದ ಮೂಲಕ ಆಗಲಿ ಎಂದು ಶುಭಹಾರೈಸಿದರು.
ವಕೀಲ ನರಸಿಂಹ ಪೈ ಮಾತನಾಡಿ, ನಮ್ಮ ಮುಂದಿರುವುದು ಇನ್ನು 80 ದಿನಗಳಷ್ಟೇ. ಹಾಗಾಗಿ ಸಮಾರೋಪಾದಿಯಲ್ಲಿ ಒಗ್ಗಟ್ಟಾಗಿ ಕಾರ್ಯ ಮಾಡಬೇಕಿದೆ. ಕಾರ್ಯಕ್ರಮದ ಯಶಸ್ಸಿಗೆ ತಾವೆಲ್ಲರೂ ಕೈಜೋಡಿಸಬೇಕು ಎಂದು ವಿನಂತಿಸಿದರು.
ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಸಮಿತಿ ಸದಸ್ಯರ ಹೆಸರುಗಳನ್ನು ಘೋಷಿಸಿದರು. ಸಾಮೂಹಿಕ ವಿವಾಹಕ್ಕೆ ಇದುವರೆಗೆ 17 ಜೋಡಿಯ ಹೆಸರು ನೋಂದಾವಣೆಗೊಂಡಿದೆ ಎಂದರು.
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ತಿಂಗಳಾಡಿ, ಕಾರ್ಯಾಧ್ಯಕ್ಷ ಪ್ರಾಣೇಶ್ ಕೆಮ್ಮಾಯಿ, ಕೋಶಾಧಿಕಾರಿ ಉದಯ ಕುಮಾರ್ ರೈ, ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಪ್ರೇಮ್ ರಾಜ್ ಆರ್ಲಪದವು, ಕೋಶಾಧಿಕಾರಿ ರೂಪೇಶ್ ನಾಯ್ಕ್ ಟಿ. ಉಪಸ್ಥಿತರಿದ್ದರು.
ಪ್ರವೀಣ್ ತಿಂಗಳಾಡಿ ವಂದಿಸಿದರು. ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರದ ಕಾರ್ಯಕರ್ತರು,ಪಕ್ಷದ ಪದಾಧಿಕಾರಿಗಳು ಹಾಗೂ ಸಂಘ ಪರಿವಾರದ ಪದಾಧಿಕಾರಿಗಳು ಹಾಗೂ ಮಾತೆಯರು ಭಾಗವಹಿಸಿದ್ದರು.