ಧಾರ್ಮಿಕ

ಜಾಗತಿಕವಾಗಿ ಬೆಳೆದು ನಿಂತಿರುವ ಧರ್ಮಸ್ಥಳದ ಮೇಲಿನ ಸಂಶಯ ಬಿಡಿ, ದೃಢವಾಗಿ ನಿಲ್ಲಿ: ಶ್ರೀ ರಾಜಶೇಖರಾನಂದ ಸ್ವಾಮೀಜಿ | ಧರ್ಮಸ್ಥಳ, ಧರ್ಮಾಧಿಕಾರಿಗಳ ಮೇಲಿನ ಅವಹೇಳನ ಖಂಡಿಸಿ ಪುತ್ತೂರಿನಲ್ಲಿ ಜನಾಗ್ರಹ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಧರ್ಮಸ್ಥಳ ಜಾಗತಿಕವಾಗಿ ಬೆಳೆದಿದೆ. ಇದೀಗ ಅವಮಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದರು. ಇದನ್ನೆಲ್ಲಾ ನೋಡಿ ನಾವು ಸುಮ್ಮನಾಗಿದ್ದೇವಲ್ಲ; ಇದೇ ದೊಡ್ಡ ದುರಂತ. ಮೊದಲಿಗೆ ನಮ್ಮ ಮೇಲಿನ ಸಂಶಯವನ್ನು ಬಿಡಿ. ದೃಢವಾಗಿ ನಿಲ್ಲಿ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

akshaya college

ಶ್ರೀ ಧರ್ಮಸ್ಥಳ ಧರ್ಮ ಸಂರಕ್ಷಣಾ ವೇದಿಕೆ ಪುತ್ತೂರು ತಾಲೂಕು ನೇತೃತ್ವದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ಮೇಲಿನ ಅವಹೇಳನ ಖಂಡಿಸಿ ಸೋಮವಾರ ನಡೆದ ಜನಾಗ್ರಹ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಧರ್ಮಕ್ಕೆ ಯಾವುದೇ ರೀತಿಯ ಕಳಂಕ ಬರಬಾರದು. ಇದನ್ನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ನಿಮ್ಮ ಉದ್ಧಾರಕ್ಕಾಗಿ ಧರ್ಮ ಕ್ಷೇತ್ರವನ್ನು ಬಲಿಕೊಡುವ ಕೆಲಸ ಒಳ್ಳೆಯದಲ್ಲ ಎಂದು ಪದೇ ಪದೇ ಎಚ್ಚರಿಸುತ್ತಾ ಬಂದೆವು. ಆದರೆ ಸತ್ಯದ ಪರವಾಗಿ ನಾವು ಗಟ್ಟಿಯಾಗಿ ನಿಲ್ಲುತ್ತೇವೆ ಎನ್ನುವುದನ್ನು ನಾವು ಅವತ್ತಿನಿಂದಲೇ ಹೇಳುತ್ತಾ ಬಂದಿದ್ದೇವೆ. ಇಂದು ಸತ್ಯ ಗೆದ್ದಿದೆ ಎಂದರು.

ಅಣ್ಣಪ್ಪ, ಮಂಜುನಾಥ ಇಲ್ಲ ಎಂದರು. ಆದರೆ ಹಿಂದೂಗಳು ಆಗಲೂ ಮಾತನಾಡಲೇ ಇಲ್ಲ. ನಮ್ಮಲ್ಲಿ ಸಂಶಯ ಬಿತ್ತಿದರು. ನಮ್ಮೊಳಗಿನ ಸಂಶಯವನ್ನು ತೊಡೆದು ಹಾಕೋದಕ್ಕೆ ನಾವೇಕೆ ಮುಂದಾಗಲಿಲ್ಲ. ಅಪ್ಪನನ್ನು ತೋರಿಸುವ ಅಮ್ಮನ ಬಗ್ಗೆಯೇ ಸಂಶಯ ಪಟ್ಟೆವು, ಮಾರ್ಗದರ್ಶನ ನೀಡುವ ಗುರು ಹಿರಿಯರ ಬಗ್ಗೆಯೇ ಸಂಶಯ ಪಟ್ಟೆವು ಎಂದು ಖೇದ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ನನ್ನ ಬಳಿ ಬಂದು ಕೇಳುವುದು – ಸೌಜನ್ಯಳಿಗೆ ಹೇಗೆ ನ್ಯಾಯ ಕೊಡಿಸುತ್ತೀರಿ ಎಂದು. ಆಗ ನಾನು ಕೇಳಿದೆ ನ್ಯಾಯ ಕೊಡುವುದು ಯಾರು ಎಂದು? ಅದಕ್ಕೆ ಅವರೇ ಉತ್ತರ ನೀಡುತ್ತಾರೆ – ಅದು ನ್ಯಾಯಾಲಯ. ನನ್ನ ಒಂದೇ ಒಂದು ಪ್ರಶ್ನೆ – ಎಲ್ಲರ ಮುಂದೆಯೂ ಸೆರಗೊಡ್ಡಿ ಬೇಡುತ್ತಾ ಬಂದ ಸೌಜನ್ಯಾಳ ತಾಯಿ, ಸುಪ್ರೀಂ ಕೋರ್ಟಿಗೆ ಒಂದು ಮೂಗರ್ಜಿ ಹಾಕಬಹುದಿತ್ತು. ಆಗ ಎಲ್ಲಾ ಸಂಶಯಗಳೂ ಪರಿಹಾರ ಆಗುತ್ತಿತ್ತು. ಆದರೆ ಇದಾವುದನ್ನು ಮಾಡದ ಒಂದು ತಂಡ, ಷಡ್ಯಂತ್ರ ಬೆಳೆಸುತ್ತಾ ಹೋದರು. ಕಾಲಿಲ್ಲದಕ್ಕೆ ಕಾಲು ಸೇರಿಸಿದರು, ಕೈ ಇಲ್ಲದಕ್ಕೆ ಕೈ ಸೇರಿಸಿದರು, ಕಣ್ಣಿಲ್ಲದ್ದಕ್ಕೆ ಕಣ್ಣು ಸೇರಿಸಿದರು. ಆದರೆ ಈಗ ಸ್ಪಷ್ಟವಾಗಿದೆ. ಯಾವುದು ಕೃತಕ ಎನ್ನುವುದು. ಹಾಗಾಗಿ ಇನ್ನು ಧರ್ಮದ ವಿಚಾರಕ್ಕೆ ಬಂದಾಗ, ನಮ್ಮವರನ್ನು ಬಿಟ್ಟುಕೊಡಲು ಹೋಗಲೇಬೇಡಿ ಎಂದು ಕಿವಿಮಾತು ಹೇಳಿದರು.

ಬುರುಡೆಯ ಹೆಸರಿನಲ್ಲಿ ಶಿವ ತಾಂಡವ ಶುರು: ನಳಿನ್ ಕುಮಾರ್

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಬುರುಡೆಯ ಹೆಸರಿನಲ್ಲಿ ಶಿವ ತಾಂಡವ ಶುರು ಆಗಿದೆ. ಧರ್ಮ ಕ್ಷೇತ್ರದ ಮೇಲೆ ಕಳಂಕ ತಂದವರ ಬಂಧನ ಆಗಲು ಶುರು ಆಗಿದೆ. ಯಾರು ಕಳಂಕವನ್ನು ಹಾಕಿದರೋ ಅವರ ಬಾಯಲ್ಲೇ ಸತ್ಯ ಹೊರಬರುತ್ತಿದೆ. ಬುರುಡೆಯ ಹೆಸರಿನಲ್ಲಿ ಸುಳ್ಳು ಸೃಷ್ಟಿಸಿ, ಅಲುಗಾಡಿಸಲು ಪ್ರಯತ್ನಿಸಿದರು. ಆದರೆ ಕೆಲವೇ ದಿನಗಳಲ್ಲಿ ಸತ್ಯ ಹೊರಬರುವಂತೆ ಮಂಜುನಾಥ, ಅಣ್ಣಪ್ಪ ಮಾಡಿದ್ದಾರೆ. ಈ ಸತ್ಯದ ಮಾತನ್ನು ಹೇಳಲು ಇಂದು ಜನಾಗ್ರಹ ಸಭೆ ಆಯೋಜಿಸಿದ್ದೇವೆ ಎಂದರು.

ಸರಕಾರ ಮಾಡಬಹುದಾದ ಕಾರ್ಯವನ್ನು ಧರ್ಮಸ್ಥಳದಿಂದ ಮಾಡಿದರು. ಮಹಿಳೆಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟರು. ಸ್ವಸಹಾಯ ಸಂಘದ ಮೂಲಕ ಸಶಕ್ತೀಕರಣ ಕಾರ್ಯ ಮಾಡಿದ ರಾಜ್ಯದ ಮೊದಲ ದೇವಸ್ಥಾನ ಅದು ಧರ್ಮಸ್ಥಳ. ಮಹಾತ್ಮಾ ಗಾಂಧಿ ಅವರ ಕಲ್ಪನೆ ವ್ಯಸನ ಮುಕ್ತ ಸಮಾಜ ನಿರ್ಮಾಣ. ಇದುವರೆಗೆ ಯಾವ ಸರಕಾರದಿಂದಲೂ ಇದನ್ನು ಜಾರಿಗೆ ತರಲು ಆಗಲೇ ಇಲ್ಲ. ಆದರೆ ಧರ್ಮಸ್ಥಳ ಕ್ಷೇತ್ರದಿಂದ ಇದು ಸಾಧ್ಯವಾಯಿತು. ಶಿಕ್ಷಣದ ಮೂಲಕ ಪರಿವರ್ತನೆ ತಂದರು. ಎಜುಕೇಶನ್ ಲೋನ್, ಸ್ಕಾಲರ್ ಶಿಪ್ ನೀಡುತ್ತಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಆದರೂ ಧರ್ಮಸ್ಥಳಕ್ಕೆ ಕಳಂಕ ತರಲು ಪ್ರಯತ್ನಿಸಿದಾಗಲೂ, ನಾವು ನೋಡುತ್ತಾ ಸುಮ್ಮನಾಗಿ ಬಿಟ್ಟಿದ್ದೇವೆ. ಹಾಗಾಗಿ ಸತ್ಯವನ್ನು ಹೇಳಲು ಈ ಜನಾಗ್ರಹ ಸಭೆ ಮಹತ್ವ ಪಡೆದಿದೆ ಎಂದರು.

ನಂಜಿಯೇ ಷಡ್ಯಂತ್ರಕ್ಕೆ ಕಾರಣ: ಅಶೋಕ್ ರೈ

ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ವರ್ಷಕ್ಕೆ 8 – 10 ಕೋಟಿ ಮಂದಿ ಬೇರೆ ಬೇರೆ ಕಡೆಯಿಂದ ಜಿಲ್ಲೆಗೆ ಆಗಮಿಸುತ್ತಾರೆ. ಅದು ಧರ್ಮಸ್ಥಳ, ಸುಬ್ರಹ್ಮಣ್ಯ, ಕಟೀಲು, ಕೊಲ್ಲೂರು ದೇವಸ್ಥಾನಕ್ಕಾಗಿಯೇ ಹೊರತು ನಮ್ಮನ್ನು ನೋಡಲೆಂದಲ್ಲ. ಇಂತಹ ಕ್ಷೇತ್ರಗಳ ಮೇಲೆ ಕಳಂಕ ಹೊರಿಸುವುದನ್ನು ನಾವು ಸಹಿಸಲು ಆಗುವುದಿಲ್ಲ. ಆದರೆ ಈ ವಿರೋಧಿ ಮನಸ್ಥಿತಿಗೆ ಕಾರಣ ಏನೆಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅವಲೋಕನ ಮಾಡಿದಾಗ ನನಗೆ ಕಂಡುಬಂದ ವಿಚಾರ ಎಂದರೆ ಅದು – ನಂಜು ಎಂದರು.

ನಮ್ಮಲ್ಲಿ ಯಾವುದೇ ಧರ್ಮ ಕಾರ್ಯಗಳನ್ನು ಶುರು ಮಾಡುವಾಗ ಮೊದಲ ಪ್ರಸಾದ ಧರ್ಮಸ್ಥಳದಿಂದಲೇ ಸಿಗಬೇಕೆಂದು ಬಯಸುತ್ತೇವೆ. ಕುಟುಂಬದಲ್ಲಿ ಪ್ರಶ್ನೆ ಇಡುವಾಗಲೂ ಧರ್ಮಸ್ಥಳಕ್ಕೆ ಹೋಗಿ ಬನ್ನಿ ಎಂದು ಹೇಳುತ್ತಾರೆ. ಇಂತಹ ಧರ್ಮಸ್ಥಳ ಸಾಮಾಜಿಕವಾಗಿಯೂ ತೊಡಗಿಸಿಕೊಂಡಿದೆ. ಕುಡಿತವನ್ನು ಬಿಡಿಸಿ ಅವರಿಗೆ ಸಂಸ್ಕಾರ ನೀಡಿ, ಕುಟುಂಬದೊಂದಿಗೆ ಒಂದು ಮಾಡಿದ್ದಾರೆ. ಮಹಿಳೆಯರು ಮೈಕ್ ಹಿಡಿದು ಮಾತನಾಡುತ್ತಾರೆ ಎಂದರೆ ಆ ಧೈರ್ಯ ನೀಡಿದ್ದು ಧರ್ಮಸ್ಥಳ. ಆದರೆ ಸಾಮಾಜಿಕ ಜಾಲತಾಣದಲ್ಲಿ ಷಡ್ಯಂತ್ರದ ಮಾತುಗಳನ್ನು ಕೇಳಿ ನಾವು ತಲೆದೂಗಿದೆವು. ಇಂದು ಎಸ್.ಐ.ಟಿ. ಕಾರಣಕ್ಕೆ ಷಡ್ಯಂತ್ರಗಳೆಲ್ಲಾ ಮೂಲೆಗುಂಪಾಗಿದೆ. ಕಳಂಕ ತೊಡೆದು ಹೋಗಿದೆ ಎಂದರು.

ಸೌಜನ್ಯಳಿಗೆ ನ್ಯಾಯ ಸಿಗಬೇಕು. ಅದರ ಪರ ನಾವಿದ್ದೇವೆ. ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯುವ ಕೆಲಸವನ್ನು ಮಾಡಿದ್ದೇವೆ. ಹಾಗೆಂದು ಹಿಂದೂ ಧರ್ಮವನ್ನು ಅವಹೇಳನ ಮಾಡುವುದನ್ನು ನೋಡಿಕೊಂಡು ಸುಮ್ಮನಿರಲು ನಮಗೆ ಸಾಧ್ಯವಾಗದು. ಶಾಲೆಗೆ ವಿರೋಧ ಮಾಡಿದರೆ ದೇಶಕ್ಕೆ ಭವಿಷ್ಯ ಇಲ್ಲ. ದೇವಸ್ಥಾನಕ್ಕೆ ವಿರೋಧ ಮಾಡಿದರೆ ಧರ್ಮಕ್ಕೆ ಭವಿಷ್ಯ ಇಲ್ಲ. ಹಾಗಾಗಿ ನಾವು ಒಗ್ಗಟ್ಟಿನಿಂದ ನಿಲ್ಲಲೇ ಬೇಕು. ಹಿಂದೂ ಧರ್ಮದ ಪರವಾಗಿ ಧ್ವನಿ ಮೊಳಗಿಸಲೇಬೇಕು ಎಂದರು.

ಎನ್.ಐ.ಎ. ತಂಡ ನಿಯೋಜಿಸಿ: ಸಂಜೀವ ಮಠಂದೂರು

ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಜಾಗತಿಕ ಮಟ್ಟದಲ್ಲಿ ಧರ್ಮಸ್ಥಳದ ಕೆಲಸ ಹೆಸರು ಮಾಡಿದೆ. ಅಂತಹ ಕ್ಷೇತ್ರವನ್ನು ಸಂಶಯ ದೃಷ್ಟಿಯಿಂದ ನೋಡುವ ಕೆಲಸ ಆಗುತ್ತಿದೆ. ಈ ಜಾಗತಿಕ ಷಡ್ಯಂತ್ರವನ್ನು ಹೊರಹಾಕುವ ಕೆಲಸ ಆಗಲಿಲ್ಲ. ಇದಕ್ಕಾಗಿ ಕೇಂದ್ರ ಸರಕಾರ ಎನ್.ಐ.ಎ. ತಂಡ ನಿಯೋಜಿಸಬೇಕು. ರಾಜ್ಯ ಸರಕಾರ ಸಹಕಾರ ನೀಡಬೇಕು. ಧರ್ಮಸ್ಥಳ ಕ್ಷೇತ್ರ ಬೆಳಗಬೇಕು ಎಂದು ಆಶಿಸಿದರು.

ನಮ್ಮ ಶ್ರದ್ಧೆ, ನಂಬಿಕೆಗೆ ಕೊಡಲಿಯೇಟು ಕೆಲಸ ಜಿಹಾದಿಗಳಿಂದ ನಿರಂತರವಾಗಿ ನಡೆಯುತ್ತಿದೆ. ಈ ಷಡ್ಯಂತ್ರದ ವಿರುದ್ಧ ನಾವು ಹೋರಾಡಬೇಕಾಗಿದೆ. ಹಿಂದೂ ಸಮಾಜದ ಆಸ್ತಿಕ ಪರಂಪರೆಯಾದ ದೈವಸ್ಥಾನ, ದೇವಸ್ಥಾನಗಳನ್ನು ಅವಹೇಳನ ಮಾಡುವವರಿಗೆ ಉತ್ತರ ನೀಡಲು ಜಿಲ್ಲೆಯ ಜನ ಸಿದ್ಧರಾಗಿದ್ದಾರೆ ಎಂದರು.

ಧರ್ಮಸ್ಥಳ ಇಂದು ನಿರ್ಮಲವಾಗಿದೆ: ಕೇಶವ ಗೌಡ

ಧರ್ಮಸ್ಥಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಗೌಡ ಮಾತನಾಡಿ, ಸೌಜನ್ಯ ನಾಪತ್ತೆಯಾದ ಮರುದಿನ ಸೌಜನ್ಯಾಳ ತಾಯಿ ವೀರೇಂದ್ರ ಹೆಗ್ಗಡೆ ಅವರ ಬಳಿ ಹೋಗಿ, ವಿಚಾರ ತಿಳಿಸಿದ್ದರು. ಅವರು ನೇರವಾಗಿ ಆಗಿನ ಗೃಹ ಸಚಿವ ಆರ್. ಅಶೋಕ್ ಅವರಿಗೆ ವಿಷಯ ಮುಟ್ಟಿಸಿದರು. ತಕ್ಷಣದಲ್ಲೇ ಪೊಲೀಸರು ಕಾರ್ಯಪ್ರವೃತ್ತರಾಗಿ, ಸೌಜನ್ಯಾಳ ಮೃತದೇಹ ಪತ್ತೆ ಹಚ್ಚಿದರು. ಇದರ ಮರುದಿನ ಸೌಜನ್ಯಾಳ ತಾಯಿ ತನ್ನ ಬಳಿ ಬಂದು ಹೇಳಿದ್ದರು – ಖಾವಂದರು ಅಲ್ಲದೇ ಇದ್ದಿದ್ದರೆ ಮೃತದೇಹ ಕೂಡ ಸಿಗುತ್ತಿರಲಿಲ್ಲ ಎಂದು. ಆದರೆ ಇಂದು ಕೆಲ ಷಡ್ಯಂತ್ರಗಳ ಹಿಂದೆ ಬಿದ್ದು, ಅವಹೇಳನ ಕಾರ್ಯ ನಡೆಯುತ್ತಿದೆ. ಪೀಠದ ಬಗ್ಗೆ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ತುಚ್ಛವಾಗಿ ಮಾತನಾಡಲು ಆರಂಭಿಸಿದ್ದಾರೆ. ಇದೆಲ್ಲಾ ಷಡ್ಯಂತ್ರದ ಭಾಗ ಎಂದರು.

ತನ್ನನ್ನು ಬಂಧಿಸುವ ಜೈಲು ಈ ದೇಶದಲ್ಲೇ ಇಲ್ಲ ಎಂದು ಹೇಳಿಕೆ ನೀಡಿದ್ದರು. ಅವರೇ ಇಂದು ಎರಡು ದಿನವಾದರೂ ಜೈಲಲ್ಲಿ ಕುಳಿತುಕೊಳ್ಳುವಂತಾಗಿದೆ. ಷಡ್ಯಂತ್ರ, ಕಳಂಕಗಳು ತೊಳೆದು ಹೋಗಿದೆ. ಮೊದಲಿನಂತೆ ಧರ್ಮಸ್ಥಳ ಇಂದು ನಿರ್ಮಲವಾಗಿದೆ ಎಂದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಶುಭಹಾರೈಸಿದರು.

ಮಲ್ಲಿಕಾ ಪ್ರಸಾದ್, ಶಶಿಕುಮಾರ್ ರೈ ಬಾಲ್ಯೊಟ್ಟು, ಬಂಗಾರಡ್ಕ ರಾಮ್ ಭಟ್, ನಿರ್ಮಲ್ ಕುಮಾರ್ ಜೈನ್, ಅಶ್ವಿನ್ ಎಲ್. ಶೆಟ್ಟಿ, ವಿಠಲ್ ರೈ ಬಾಲ್ಯೊಟ್ಟು, ಚಂದ್ರಹಾಸ ಶೆಟ್ಟಿ, ಸಾಜ ರಾಧಾಕೃಷ್ಣ ಆಳ್ವ, ಪದ್ಮನಾಭ ಶೆಟ್ಟಿ, ನನ್ಯ ಅಚ್ಚುತ ಮೂಡೆತ್ತಾಯ, ಚನಿಲ ತಿಮ್ಮಪ್ಪ ಶೆಟ್ಟಿ, ರಾಧಾಕೃಷ್ಣ ರೈ ಬೂಡಿಯಾರ್, ಮುರಳಿಕೃಷ್ಣ ಹಸಂತ್ತಡ್ಕ, ಗೌರಿ ಬನ್ನೂರು, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಕೃಷ್ಣಪ್ರಸಾದ್ ಆಳ್ವ, ರವೀಂದ್ರನಾಥ್ ಶೆಟ್ಟಿ ನುಳಿಯಾಲು, ಅಶೋಕ್ ಕುಮಾರ್ ಪಡಿವಾಳ್, ಆರ್.ಸಿ. ನಾರಾಯಣ್ ಮೊದಲಾದವರು ಉಪಸ್ಥಿತರಿದ್ದರು.

ಮಹಾಬಲ ರೈ ವಳತ್ತಡ್ಕ ವಂದಿಸಿ, ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರು ಪ್ರಜ್ಞಾ ಆಶ್ರಮದಲ್ಲಿ ನಾರಾಯಣ ಗುರುಗಳ ಜನ್ಮ ದಿನಾಚರಣೆ | ಬಿರುವೆರ್ ಕುಡ್ಲದ ಪುತ್ತೂರು ಘಟಕದಿಂದ ಆಚರಣೆ

ಪುತ್ತೂರು: ಉದಯ್ ಪೂಜಾರಿ ಸಾರಥ್ಯದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫ್ರೆಂಡ್ಸ್…

ಪುತ್ತೂರಿನಲ್ಲಿ ಆರೋಗ್ಯದ ಕಡೆಗೆ ಯೋಗದ ನಡಿಗೆ | ಎಸ್.ಪಿ.ವೈ.ಎಸ್.ಎಸ್.ನಿಂದ ನಡೆಯುತ್ತಿರುವ ಯೋಗ ಜೀವನ ದರ್ಶನ

ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ರಾಜ್ಯ ರಾಷ್ಟ್ರೀಯ ಯೋಗ ಶಿಕ್ಷಕರ…