ಪುತ್ತೂರು: ಶ್ರೀ ದೇವತಾ ಸಮಿತಿ ನೇತೃತ್ವದಲ್ಲಿ ಕಿಲ್ಲೆ ಮೈದಾನದಲ್ಲಿ ನಡೆಯುತ್ತಿರುವ 68ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಆ. 31ರ ಭಾನುವಾರ ಮುಂಜಾನೆ 4.45ರಿಂದ ಬಾಲಗಣಪತಿ ಹೋಮ ನಡೆಯಲಿದೆ.
ಬಾಲಗಣಪತಿ ಹೋಮವು ಗಣಪತಿಯ ಬಾಲರೂಪದ ಉಪಾಸನೆ. ಲೋಕಕಲ್ಯಾಣಾರ್ಥದ ಉದ್ದೇಶದೊಂದಿಗೆ ವೈಯಕ್ತಿಕವಾಗಿ ಸುಖ ಸಮೃದ್ಧಿ ನೀಡುತ್ತದೆ. ಮನಸ್ಸನ್ನು ಉದ್ವೇಗ ಮುಕ್ತಗೊಳಿಸಿ ಜೀವನದಲ್ಲಿ ಎದುರಾಗುವ ಅಡೆತಡೆಗಳು, ನಕಾರಾತ್ಮಕ ಶಕ್ತಿಗಳ ಸಮಸ್ಯೆಗಳು, ಮಕ್ಕಳಿಗೆ ಎದುರಾಗುವ ತೊಂದರೆಗಳಿಗೆ ಪರಿಹಾರ ದೊರೆಯುತ್ತದೆ. ಹೋಮವು ಮುಂಜಾನೆ 4.45ರಿಂದ ಆರಂಭವಾಗಿ ಸೂರ್ಯೋದಯದ ಮೊದಲು ಪೂರ್ಣಾಹುತಿ ಆಗುತ್ತದೆ.
ಬೆಳಿಗ್ಗೆ 11ಕ್ಕೆ ವಿಶ್ವಗುರು ಭರತನಾಟ್ಯ ಕಲಾಶಾಲೆಯ ವಿದುಷಿ ಭಾಗ್ಯಶ್ರೀ ರೈ ಮತ್ತು ಬಳಗದಿಂದ ಭರತನಾಟ್ಯ, ಮಧ್ಯಾಹ್ನ 12ರಿಂದ ಪುತ್ತೂರು ಪಾಂಚಜನ್ಯ ಯಕ್ಷಕಲಾ ಸಂಘದ ಮಕ್ಕಳ ಮೇಳದಿಂದ ಯಕ್ಷಗಾನ, 2 ಗಂಟೆಯಿಂದ ಉಪ್ಪಿನಂಗಡಿ ಸುಸ್ವರ ಮೆಲೋಡೀಸ್ ತಂಡದಿಂದ ಭಕ್ತಿ ರಸಮಂಜರಿ, 3 ಗಂಟೆಯಿಂದ ಪುತ್ತೂರು ತುಳು ಅಪ್ಪೆ ಕೂಟದಿಂದ ತುಳುನಾಡ ಬಲಿಯೇಂದ್ರ ತುಳು ಯಕ್ಷಗಾನ ತಾಳಮದ್ದಳೆ ಜರುಗಲಿದೆ.
ಸಂಜೆ 5.30ರಿಂದ ಸಿಟಿಗುಡ್ಡೆ ಶ್ರೀಕೃಷ್ಣ ಯುವಕ ಮಂಡಲದಿಂದ ಸಾಂಸ್ಕೃತಿಕ ವೈವಿಧ್ಯ, 6.30ರಿಂದ ಪುತ್ತೂರು ಮಧುಮಿತಾ ತಂಡದಿಂದ ವೀಣಾವಾದನ, ರಾತ್ರಿ 8ರಿಂದ ಅಮ್ಮ ಕಲಾವಿದೆರ್ ಕುಡ್ಲ, ಸುಂದರ ರೈ ಮಂದಾರ, ದೀಪಕ್ ರೈ ಸಾರಥ್ಯದಲ್ಲಿ ಆನ್ ಮನೆ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.
























