Gl jewellers
ಧಾರ್ಮಿಕ

ದಂಬೆತ್ತಿಮಾರ್ ಮಾಯಿಕಾರೆ ಅಜ್ಜೆ ಶ್ರೀ ಕೊರಗತನಿಯ ಕ್ಷೇತ್ರದಲ್ಲಿ 4ನೇ ವರ್ಷದ ನೇಮೋತ್ಸವ | ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಆರ್ಯಾಪು ಗ್ರಾಮದ ದಂಬೆತ್ತಿಮಾರ್'ದ ಮಾಯಿಕಾರೆ ಅಜ್ಜೆ ಶ್ರೀ ಕೊರಗತನಿಯ ಕ್ಷೇತ್ರದ ವಾರ್ಷಿಕ ನೇಮೋತ್ಸವದ ಅಂಗವಾಗಿ ಸೋಮವಾರ ರಾತ್ರಿ ಸಭಾ ಕಾರ್ಯಕ್ರಮ ಜರಗಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಆರ್ಯಾಪು ಗ್ರಾಮದ ದಂಬೆತ್ತಿಮಾರ್’ದ ಮಾಯಿಕಾರೆ ಅಜ್ಜೆ ಶ್ರೀ ಕೊರಗತನಿಯ ಕ್ಷೇತ್ರದ ವಾರ್ಷಿಕ ನೇಮೋತ್ಸವದ ಅಂಗವಾಗಿ ಸೋಮವಾರ ರಾತ್ರಿ ಸಭಾ ಕಾರ್ಯಕ್ರಮ ಜರಗಿತು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್ ಮಾತನಾಡಿ, ನಂಬಿಕೆ ನಮ್ಮ ಜೀವನದ ಶಾಶ್ವತ ಅಡಿಗಲ್ಲು. ಅದರಲ್ಲೂ ದೈವಗಳ ವಿಚಾರದಲ್ಲಿ ನಂಬಿಕೆ ಇಟ್ಟಾಗ ಜೀವನಕ್ಕೆ ಹೊಸ ಅರ್ಥ ಬರುವುದರಲ್ಲಿ ಎರಡು ಮಾತಿಲ್ಲ. ಕಾರ್ಪಾಡಿ ಕ್ಷೇತ್ರದ ಸುತ್ತಮುತ್ತ ಅನೇಕ ಕ್ಷೇತ್ರಗಳನ್ನು ನೋಡುತ್ತಿದ್ದು, ಭಕ್ತರಿಗೆ ಹತ್ತಿರ ಆಗುತ್ತಿದೆ. ಇಂದು ಕರಾವಳಿಯ ಅನೇಕ ಕಡೆ ಅಜ್ಜನ ಕ್ಷೇತ್ರ ಕಾಣಸಿಗುತ್ತಿದೆ. ಇಂತಹ ಕ್ಷೇತ್ರದಲ್ಲಿ ನಾವು ಮನಸ್ಸಲ್ಲಿ ಅಂದುಕೊಂಡ ಕೆಲಸಗಳು ಕ್ಷಣಾರ್ಧದಲ್ಲಿ ನೆರವೇರಿದ ದೃಷ್ಟಾಂತ ಇದೆ. ಜಿಲ್ಲೆಯಲ್ಲಿ ಅಜ್ಜನ ಪವಾಡ ಇನ್ನಷ್ಟು ನಡೆಯಲಿ, ದಂಬೆತ್ತಿಮಾರ್ ಕ್ಷೇತ್ರ ಇನ್ನಷ್ಟು ಬೆಳಗಲಿ ಎಂದು ಹಾರೈಸಿದರು.

ಹಿಂದೂ ಮುಖಂಡ ಮುರಳೀಕೃಷ್ಣ ಹಸಂತ್ತಡ್ಕ ಮಾತನಾಡಿ, ಜಗತ್ತಿನಲ್ಲಿ ದೇವರೆಷ್ಟೇ ಇದ್ದರೂ, ಓರ್ವ ಭಗವಂತನನ್ನು ಕಾಣಿರಿ ಎಂದು ಹೇಳಿದ ಸನಾತನ ಸಂಸ್ಕಾರ ನಮ್ಮದು. ಹೀಗೆ ಭಗವಂತನನ್ನು ಕಾಣಬೇಕಾದರೆ ನಂಬಿಕೆ ಹಾಗೂ ಶ್ರದ್ಧೆ ಗಟ್ಟಿ ಆಗಿರಬೇಕು. ಅಜ್ಜನ ಮೇಲಿರುವ ಭಕ್ತಿ, ಶ್ರದ್ಧೆಯಿಂದಾಗಿ ನಮ್ಮೆಲ್ಲ ಬೇಧ ಭಾವ ಮರೆತು ಈ ಕ್ಷೇತ್ರದಲ್ಲಿ ಒಂದಾಗುತ್ತೇವೆ. ಪ್ರಯಾಗ್ ರಾಜ್ ನಲ್ಲಿ ಪ್ರಧಾನಿ ಸೇರಿದಂತೆ  ರಾಜ ಮನೆತನದವರು, ಅಂಬಾನಿ, ಅದಾನಿ ಹಾಗೂ ರೈಲಿನಲ್ಲಿ ತೆರಳಿದ ಸಾಮಾನ್ಯರೆಲ್ಲರೂ ಪುಣ್ಯಸ್ನಾನ ಮಾಡಿರುವುದು ಒಂದೇ ನೀರಿನಲ್ಲಿ. ಹಾಗಾಗಿ, ಸಂಸ್ಕಾರ – ಸಂಸ್ಕ್ರತಿಯನ್ನು ಮರೆಯುತ್ತಿರುವ ಇಂದಿನ ಕಾಲಘಟ್ಟದಲ್ಲೂ ನಂಬಿಕೆ, ಶ್ರದ್ಧೆಯನ್ನು ಗಟ್ಟಿಪಡಿಸುವ ಅಗತ್ಯ ಇದೆ. ಇಲ್ಲದೇ ಇದ್ದರೆ, ಅನೇಕ ಕಂಟಕಗಳು ಬಂದೆರಗುವ ಅಪಾಯ ಇದೆ ಎಂದು ಎಚ್ಚರಿಸಿದ ಅವರು, ಇಂತಹ ಕ್ಷೇತ್ರಗಳು ಸುಭದ್ರ ಸಮಾಜಕ್ಕೆ ಅಡಿಪಾಯ ಹಾಕಲಿ ಎಂದರು.

ನಮ್ಮೊಳಗಿನ ಕೊರತೆ ನೀಗಿಸಬೇಕು ಹಾಗೂ ಸಮಾಜದ ಮೇಲೆ ದಾಳಿ ನಡೆಸುವ ಸಂದರ್ಭ ಹೋರಾಟ ನಡೆಸುವ ಮನಸ್ಥಿತಿ ಬೆಳೆಸಬೇಕು. ಹಾಗಾದಾಗ ಇಂತಹ ಕ್ಷೇತ್ರದಂತೆ ಅನೇಕ ಹಿಂದೂ ಧಾರ್ಮಿಕ ಕ್ಷೇತ್ರ ಹಾಗೂ ಹಿಂದೂ ಸಮಾಜವನ್ನು ರಕ್ಷಿಸಲು ಸಾಧ್ಯ. ಇಲ್ಲದೇ ಹೋದರೆ, ನಮ್ಮತನವನ್ನು ಕಳೆದುಕೊಳ್ಳಬೇಕಾದೀತು ಎಂದ ಅವರು, ಭಕ್ತರ ಇಷ್ಟಾರ್ಥ ನೆರವೇರಿಸುವ ಕ್ಷೇತ್ರವಾಗಿ ದಂಬೆತ್ತಿಮಾರ್ ಮಾಯಿಕಾರೆ ಅಜ್ಜೆ ಶ್ರೀ ಕೊರಗತನಿಯ ಕ್ಷೇತ್ರ ಬೆಳಗಲಿ ಎಂದು ಹಾರೈಸಿದರು.

ಆರ್ಯಾಪು ಗ್ರಾಪಂ ಅಧ್ಯಕ್ಷೆ ಗೀತಾ ಮಾತನಾಡಿ, ಸಾಂಪ್ರದಾಯಿಕ ಜೀವನದಲ್ಲಿ ಮಿಳಿತವಾಗಿರುವ ಕೊರಗಜ್ಜ ಹಲವು ಕಾರಣೀಕ ಅಂಶಗಳನ್ನು ತೋರಿಸಿದ್ದಾರೆ. ತಾನು ಕೂಡ ದಂಬೆತ್ತಿಮಾರ್ ಕ್ಷೇತ್ರದ ಭಕ್ತೆಯಾಗಿದ್ದು, ಕ್ಷೇತ್ರ ಇನ್ನಷ್ಟು ಭಕ್ತರಿಗೆ ನೆರಳಾಗಲಿ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯ ಡಾ. ಯದುರಾಜ್ ಮಾತನಾಡಿ, ತಮ್ಮ ಕಾರ್ಯಕ್ಕೆ ಸಫಲತೆ ಸಿಕ್ಕಾಗ ಆ ಕ್ಷೇತ್ರದ ಮೇಲೆ ನಂಬಿಕೆ ಹೆಚ್ಚುತ್ತದೆ. ದಂಬೆತ್ತಿಮಾರ್ ಕ್ಷೇತ್ರವೂ ಅನೇಕ ಕುಟುಂಬಗಳ ಕಾರ್ಯವನ್ನು ಯಶಸ್ವಿಗೊಳಿಸಿದೆ ಎಂದ ಅವರು, ಅನೇಕ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿದುದಕ್ಕೆ ದನ್ಯವಾದ ಸಲ್ಲಿಸಿದರು.

ಅಧ್ಯಕ್ಷತೆ ವಹಿಸಿದ್ದ ತಾಪಂ ಮಾಜಿ ಅಧ್ಯಕ್ಷ ರಾಧಕೃಷ್ಣ ಬೋರ್ಕರ್ ಮಾತನಾಡಿ, ಮುಂದಿನ 2-3 ವರ್ಷದಲ್ಲಿ ದಂಬೆತ್ತಿಮಾರ್ ಕ್ಷೇತ್ರ ಬಹಳ ದೊಡ್ಡ ಕ್ಷೇತ್ರವಾಗಿ ಬೆಳಗಲಿದೆ. ಇದಕ್ಕೆ ಎಲ್ಲರ ಸಹಕಾರವೂ ಇರಲಿ ಎಂದರು.

ಜಯಂತ್ ಶೆಟ್ಟಿ ಕಂಬಳತ್ತಡ್ಡ, ಪುತ್ತೂರು ಆರಾಧನಾ ಟ್ರಸ್ಟಿನ ಗಣೇಶ್ ಸಂಪ್ಯ ಮಾತನಾಡಿ, ಶುಭಹಾರೈಸಿದರು.

ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯಕೀಯ ತಜ್ಞ ಡಾ. ಯದುರಾಜ್ ಡಿ.ಕೆ., ಸೇಸಪ್ಪ ನಾಯ್ಕ ಅಡ್ಕಮನೆ, ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ ಚಿನ್ನದ ಪದಕ ವಿಜೇತ ರಂಜಿತ್ ಕುಮಾರ್ ಎಂ., ಹರೀಶ್ ಬೋಳೋಡಿ ಕೆದಂಬಾಡಿ, ಕೇಶವ ಸುವರ್ಣ ಮೇರ್ಲ, ದೈವ ನರ್ತಕ ಮಾಯಿಲ ಅಜಿಲ, ಭಾರತಿ ಮೇಗಿನಪಂಜ,  ಆರ್ಯಾಪು ಗ್ರಾಪಂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಲಕ್ಷ್ಮೀಕಾಂತ್ ಹೆಗ್ಡೆ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಕರಸೇವಕರನ್ನು ಗೌರವಿಸಲಾಯಿತು.

ಕ್ಷೇತ್ರದ ಪ್ರಧಾನ ಅರ್ಚಕ ಯೋಗೀಶ್ ದಂಬೆತ್ತಿಮಾರ್ ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ದೈವ ನರ್ತಕ ದಾಮೋದರ ಮಾಲಡ್ಕ ಬೆಟ್ಟಂಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ,  ಕೃಷ್ಣಪ್ಪ ಗೌಡ ಅಡ್ಕ ಸ್ವಾಗತಿಸಿದರು. ತಾರಾನಾಥ್ ಬಂಗೇರ ಮೇರ್ಲ ವಂದಿಸಿ, ಸಂತೋಷ್ ಸುವರ್ಣ ಮೇರ್ಲ ಕಾರ್ಯಕ್ರಮ ನಿರೂಪಿಸಿದರು.

ಪುನರ್ ಪ್ರತಿಷ್ಠೆ, ದೈವಗಳ ನೇಮ:

ಬೆಳಗ್ಗೆ ಗಣಪತಿ ಹೋಮ ನಡೆದು, ಗೃಹ ಪ್ರವೇಶ ಹಾಗೂ ಕಲ್ಲುರ್ಟಿ ದೈವದ ಪುನರ್ ಪ್ರತಿಷ್ಠಾಪನೆ ನೆರವೇರಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆದು, ಬಳಿಕ ವಿವಿಧ ಭಜನಾ ತಂಡಗಳಿಂದ ಭಜನೆ ಜರಗಿತು. ಸಂಜೆ ದೈವಗಳ ಭಂಡಾರ ಇಳಿಸಿ, ರಾತ್ರಿ ಚೌಕಾರು ಮಂತ್ರವಾದಿ ಗುಳಿಗ ಹಾಗೂ ಕಲ್ಲುರ್ಟಿ ದೈವದ ನೇಮ ನಡೆದು, ಪ್ರಸಾದ ವಿತರಿಸಲಾಯಿತು.


ಈ ಸುದ್ದಿಯನ್ನು ಶೇರ್ ಮಾಡಿ

Related Posts