ರಾಜಕೀಯ

ಅಭಿವೃದ್ಧಿ ಸಹಿಸದ ವಿಘ್ನ ಸಂತೋಷಿಗಳಿಂದ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ | ಸೇಡಿಯಾಪಿನಲ್ಲೇ ಮೆಡಿಕಲ್ ಕಾಲೇಜು, ಆಸ್ಪತ್ರೆ ನಿರ್ಮಾಣವಾಗಲು ವ್ಯಾಪಕ ಬೆಂಬಲ: ಹೇಮನಾಥ ಶೆಟ್ಟಿ ಕಾವು

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಅಭಿವೃದ್ಧಿಯನ್ನು ಸಹಿಸದ ಕೆಲವರು ತಪ್ಪು ಮಾಹಿತಿ ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಸೇಡಿಯಾಪಿನಲ್ಲೇ ಆಗಲು ಪುತ್ತೂರು ಹಾಗೂ ಆಸುಪಾಸಿನ ತಾಲೂಕಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಹೇಳಿದರು.

Shani-pooja

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಸೇಡಿಯಾಪಿನಲ್ಲಿ ಸರಕಾರಿ ಮೆಡಿಕಲ್‌ ಕಾಲೇಜು ಆರಂಭಿಸಲು ರಾಜ್ಯ ಸರಕಾರ ಈಗಾಗಲೇ ಅನುಮತಿ ನೀಡಿದೆ. ಬಜೆಟಿನಲ್ಲಿ ಮುಖ್ಯಮಂತ್ರಿಯವರು ಈ ಕುರಿತು ಘೋಷಣೆ ಮಾಡಿದ್ದಾರೆ. ಈ ಮೂಲಕ ಜನರ ಹಲವು ವರ್ಷದ ಕನಸು ಶಾಸಕರಾದ ಅಶೋಕ್ ಕುಮಾರ್ ರೈ ಯವರಿಂದ ನನಸಾಗುವ ಹಂತದಲ್ಲಿದೆ ಎಂದರು.

300 ಹಾಸಿಗೆಗಳ ಸರಕಾರಿ ಆಸ್ಪತ್ರೆಯನ್ನು ಸೇಡಿಯಾಪಿನಲ್ಲಿಯೇ ಆರಂಭಿಸಲು ಸರಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಇದಕ್ಕೆ ಬೇಕಾದ ಮೂಲಭೂತ ಸೌಕರ್ಯದ ವ್ಯವಸ್ಥೆ ಸೇಡಿಯಾಪಿನಲ್ಲಿ ಇದೆ. ಗ್ರಾಮಾಂತರ ಪ್ರದೇಶಕ್ಕೆ ಒತ್ತು ನೀಡುವ ಉದ್ದೇಶದಿಂದ ಪೇಟೆ ಪ್ರದೇಶವನ್ನು ಬಿಟ್ಟು ಗ್ರಾಮೀಣ ಭಾಗದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಗ್ರಾಮದ ಜನರಿಗೆ ಅವಕಾಶ, 4 ಕಡೆಯಿಂದ ರಸ್ತೆ ಜೊತೆಗೆ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ವ್ಯವಸ್ಥೆ ಇದೆ. 2016ರಲ್ಲಿ ಆಗಿನ ಕಾಂಗ್ರೆಸ್ ಶಾಸಕಿ ಶಕುಂತಲಾ ಶೆಟ್ಟಿಯವರ ಅವಧಿಯಲ್ಲಿ 40 ಎಕ್ರೆ ಜಾಗವನ್ನು ಮೆಡಿಕಲ್ ಕಾಲೇಜಿಗೆ ನಿಗದಿ ಮಾಡಲಾಗಿತ್ತು, ನಂತರ ಬಂದ ಶಾಸಕ ಸಂಜೀವ ಮಠಂದೂರು ಅವರು ಇದನ್ನು ಸಿ. ಫುಡ್ (ಒಣ ಮೀನಿನ ಘಟಕ )ತಯಾರಿಕಾ ಘಟಕ ಮಾಡಲು ಪ್ರಯತ್ನ ಮಾಡಿದರು.ಇದಕ್ಕೆ ಎಲ್ಲೆಡೆಯಿಂದ ಭಾರೀ ವಿರೋಧ ವ್ಯಕ್ತವಾದ ಕಾರಣ ಈ ಯೋಜನೆಯನ್ನು ಕೈ ಬಿಟ್ಟಿದ್ದರು. ನಂತರ ಶಾಸಕರಾದ ಅಶೋಕ್ ಕುಮಾರ್ ರೈ ಅವರಿಂದ ಮೆಡಿಕಲ್ ಕಾಲೇಜ್ ಕನಸಿಗೆ ಪುನರ್ಜನ್ಮಕೊಡುವ ಕೆಲಸವಾಯಿತು ಎಂದು ವಿವರಿಸಿದರು.

ಶಾಸಕ ಅಶೋಕ್ ಕುಮಾರ್ ರೈ ಅವರು ಅದರ ಹಿಂದೆ ಶೇಕಡಾ ನೂರರಷ್ಟು ಶ್ರಮ ಹಾಕಿ ಸರಕಾರದ ಮಟ್ಟದಲ್ಲಿ ಸತತವಾಗಿ ಪ್ರಯತ್ನ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದು ಬಜೆಟ್ಟಿನಲ್ಲಿ ಮೆಡಿಕಲ್ ಕಾಲೇಜಿನ ಪ್ರಸ್ತಾಪ ಮಾಡಿದ್ದಾರೆ, ಘೋಷಣೆಯನ್ನೂ ಮಾಡಿದ್ದಾರೆ. ಅಲ್ಲದೆ ಶಾಸಕ ಅಶೋಕ್ ರೈ ಅವರ ನೇತೃತ್ವದಲ್ಲಿ ಪುತ್ತೂರಿನಲ್ಲಿ ನಡೆದ ಅಶೋಕ ಜನಮನ 2025 ಕಾರ್ಯಕ್ರಮದಲ್ಲಿ ಮೆಡಿಕಲ್ ಕಾಲೇಜ್ ಆರಂಭದ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ. ಆದರೂ ಛಲ ಬಿಡದ ಶಾಸಕರು ಶತಾಯಗತಾಯವಾಗಿ ಮೆಡಿಕಲ್ ಕಾಲೇಜ್ ಕೆಲಸ ಕಾರ್ಯಆರಂಭಿಸಬೇಕು ಎಂದು ಪಣತೊಟ್ಟು ಸಂಬಂಧಿಸಿದ ಅಧಿಕಾರಿಗಳು ಪುತ್ತೂರಿಗೆ ಬಂದು ಈ ಎಲ್ಲಾ ಕಾರ್ಯಕ್ರಮಕ್ಕೆ ಪೂರಕವಾಗಿ ಈ ಬಾರಿ ಬಜೆಟಿನ ಮೊದಲೇ ಸಚಿವ ಸಂಪುಟ ಸಭೆಯಲ್ಲಿ ಮುನ್ನೂರು ಬೆಡ್ಡಿನ ಆಸ್ಪತ್ರೆ ಸುಮಾರು 180 ಕೋಟಿ ರೂಪಾಯಿ ವೆಚ್ಚದಲ್ಲಿ ಬನ್ನೂರಿನ ಸೇಡಿಯಪುನಲ್ಲಿ ನಡೆಯಲಿದೆ ಎಂದು ತಿಳಿಸಿದರು. ಈಗ ಕೆಲವೊಂದು ವಿಘ್ನ ಸಂತೋಷಿಗಳು ವಿನಾಕಾರಣ ಮೊಸರಲ್ಲಿ ಕಲ್ಲು ಹುಡುಕುವ ಕಾರ್ಯ ಮಾಡುತ್ತಿದ್ದಾರೆ.

 

ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸೇಡಿಯಾಪುನಲ್ಲಿ ಆಗಲು ಪುತ್ತೂರು ಮತ್ತು ಅಸುಪಾಸಿನ ತಾಲೂಕಿನಲ್ಲಿ ಕೂಡ ವ್ಯಪಕ ಬೆಂಬಲ ವ್ಯಕ್ತವಾಗಿದೆ. ಆದರೆ ಅಭಿವೃದ್ಧಿಯನ್ನು ಸಹಿಸದ ಕೆಲವರು ತಪ್ಪು ಮಾಹಿತಿ ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಜನ ಜಾಗೃತಿ ಮಾಡುವ ಕಾರ್ಯಕ್ರಮ ಆರಂಭಿಸಲಿದ್ದೇವೆ. ಜೊತೆಗೆ ಸೇಡಿಯಾಪಿನಲ್ಲಿ ಆಯುಷ್ ಆಯುರ್ವೇದ ಕಾಲೇಜು ಕೂಡ ಸುಮಾರು 5 ಎಕ್ರೆ ಜಾಗದಲ್ಲಿ ನಡೆಯಲಿದೆ. ಅದಕ್ಕೆ ಕೂಡ ಶಾಸಕ ಅಶೋಕ್ ಕುಮಾರ್ ಅವರು ಜಾಗವನ್ನು ನಿಗದಿಪಡಿಸಿದ್ದಾರೆ ಎಂದು ತಿಳಿಸಲು ಹರ್ಷ ಪಡುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಲ್ಯಾನ್ಸಿ ಮಸ್ಕರೇನಸ್, ರವಿಪ್ರಸಾದ್ ಶೆಟ್ಟಿ, ಮೋನು ಬಪ್ಪಳಿಗೆ, ಸುಪ್ರೀತ್ ಕಣ್ಣಾರಾಯ, ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts