ಬೆಂಗಳೂರು: ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.6ರಂದು ಸಜ್ಜಾಗಿದ್ದು, ದಿವಂಗತ ಡಿ. ದೇವರಾಜ ಅರಸು ಅವರ ಅತಿ ದೀರ್ಘಾವಧಿ ಮುಖ್ಯಮಂತ್ರಿ ದಾಖಲೆಯನ್ನು ಮುರಿಯಲಿದ್ದಾರೆ
ಜ.6ರಂದು ನೆಲಮಂಗಲದ ಭಕ್ತನ ಪಾಳ್ಯದಲ್ಲಿ ನಾಟಿ ಕೋಳಿ ಔತಣಕೂಟ ನಡೆಯಲಿದ್ದು, ನಾಟಿಕೋಳಿ ಸಾಂಬಾರ್, ಮುದ್ದೆ, ಕಾಳು ಗೊಜ್ಜು, ರೈಸ್, ಪುಲಾವ್ ಮತ್ತು ಸಿಹಿತಿಂಡಿ ನೀಡಲುತೀರ್ಮಾನಿಸಲಾಗಿದೆ. ಐದರಿಂದ ಹತ್ತು ಸಾವಿರ ಜನರು ಸೇರುವ ನಿರೀಕ್ಷೆ ಇರಿಸಲಾಗಿದೆ.
ಒಂದು ವರ್ಷದ ಹಿಂದೆ, ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗುವ ಬಯಕೆಯನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದರು.ಸದ್ಯ ಆ ಆಸೆ ಈಡೇರಲಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಿಎಂ ಹುದ್ದೆಗೇರುವ ಪ್ರಯತ್ನಗಳ ನಡುವೆ ಪಕ್ಷದೊಳಗಿನ ಬಿರುಗಾಳಿಯನ್ನು ಎದುರಿಸಿ ಸಿದ್ದರಾಮಯ್ಯ ಗಟ್ಟಿಯಾಗಿ ಕುಳಿತಿದ್ದು ಈಗ ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹಿಂದುಳಿದ ಸಮುದಾಯದ ಮತ್ತೊಬ್ಬ ಧೀಮಂತ ನಾಯಕ ಡಿ ದೇವರಾಜ್ ಅರಸ್ ಅವರ ದಾಖಲೆಯನ್ನು ಮುರಿಯಲಿದ್ದಾರೆ.
ಅದ್ದೂರಿ ಸಿದ್ಧತೆಗಳನ್ನು ಅರಸು ಅವರೇ ಸೃಷ್ಟಿಸಿದ ರಾಜಕೀಯ ಪದ ‘ಅಹಿಂದ’ ಸಂಘಟನೆ ಯೋಜಿಸುತ್ತಿದೆ. ಡಿ. ದೇವರಾಜ್ ಅರಸ್ ಒಟ್ಟು 2,792 ದಿನಗಳು ಸುಮಾರು 7.6 ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ಸಿದ್ದರಾಮಯ್ಯ ಈಗ ಆ ದಾಖಲೆ ಮುರಿಯುತ್ತಿದ್ದಾರೆ.
ಇತ್ತೀಚಿಗೆ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಮನೆಗೆ ಬ್ರೇಕ್ ಫಾಸ್ಟ್ ಮೀಟಿಂಗ್ ಗೆ ಬಂದಿದ್ದರು. ಆಬಳಿಕ ಸಿದ್ದರಾಮಯ್ಯ ಅವರು ಡಿಕೆಶಿ ಅವರ ನಿವಾಸಕ್ಕೆ ತೆರಳಿ ನಾಟಿ ಕೋಳಿ ಸಾರು ಸವಿದಿದ್ದರು. ಸಿದ್ದರಾಮಯ್ಯ ಅವರು ಹಳ್ಳಿಯಿಂದ ತಂದು ಮಾಡಿದ ನಾಟಿ ಕೋಳಿ ಸಾರು ತಿಂದಿದ್ದೇನೆ ಎಂದು ಹೇಳಿದ್ದರು. ನಾಟಿ ಕೋಳಿ ಸಾರು ಸಿಎಂ ಸಿದ್ದರಾಮಯ್ಯ ಅವರ ನೆಚ್ಚಿನ ಖಾದ್ಯದಲ್ಲಿ ಒಂದು.



























