ಹೊಸದಿಲ್ಲಿ: ವರ್ಷವಿಡೀ ಹರಿಯುವ ನದಿಗಳಿಗೆ ಜೀವಸೆಲೆಯಾಗಿರುವ ಹಿಮನದಿಗಳನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳದೇ ಇದ್ದರೆ ನದಿಗಳು ಬತ್ತುವ ಸಾಧ್ಯತೆ ಇದೆ. ಇದರಿಂದ 144 ವರ್ಷಗಳ ಬಳಿಕ ನಡೆಯಲಿರುವ ಮುಂದಿನ ಕುಂಭಮೇಳವನ್ನು ಮರಳಿನಲ್ಲಿ ನಡೆಸಬೇಕಾದೀತು ಎಂದು ಪರಿಸರ ಹೋರಾಟಗಾರ ಸೋನಂ ವಾಂಗ್ ಚುಕ್ ಎಚ್ಚರಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾಗ್ಟುಕ್, ಆರ್ಕಟಿಕ್ ಹಾಗೂ ಅಂಟಾರ್ಟಿಕದ ಬಳಿಕ ಭೂಮಿಯಲ್ಲಿ ಮೂರನೇ ಅತಿ ಹೆಚ್ಚು ಮಂಜುಗಡ್ಡೆ ಹಾಗೂ ಹಿಮ ಇರುವ ಸ್ಥಳ ಹಿಮಾಲಯ. ಆದುದರಿಂದ ಹಿಮನದಿಗಳನ್ನು ರಕ್ಷಿಸುವಲ್ಲಿ ಭಾರತ ನೇತೃತ್ವ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
“ನಮ್ಮಲ್ಲಿ ಹಿಮಾಲಯ ಇರುವುದರಿಂದ ಹಿಮನದಿಗಳನ್ನು ಸಂರಕ್ಷಿಸಲು ಭಾರತ ನೇತೃತ್ವ ವಹಿಸಬೇಕಾದ ಅಗತ್ಯತೆ ಇದೆ. ಅಲ್ಲದೆ, ಗಂಗಾ ಯಮುನಾದಂತಹ ನಮ್ಮ ಪವಿತ್ರ ನದಿಗಳು ಅಲ್ಲಿಂದಲೇ ಉಗಮವಾಗುತ್ತದೆ” ಎಂದು ವಾಗ್ಟುಕ್ ಹೇಳಿದ್ದಾರೆ.
ತಾನು ಪ್ರಧಾನಿ ಅವರು ತೆಗೆದುಕೊಂಡ ಪರಿಸರ ಉಪ ಕ್ರಮಗಳು ಮುಖ್ಯವಾಗಿ ‘ಮಿಷನ್ ಲೈಫ್’ ಅಭಿಯಾನದ ಅಭಿಮಾನಿಯಾಗಿದ್ದೆ ಎಂದು ಹೇಳಿರುವ ವಾಗ್ಟುಕ್, ಹಿಮಾಲಯದ ಹಿಮನದಿಗಳ ಸ್ಥಿತಿಗತಿ ಅಂದಾಜಿಸಲು ಆಯೋಗ ಸ್ಥಾಪಿಸುವಂತೆ ಪ್ರಧಾನಿ ಅವರನ್ನು ಆಗ್ರಹಿಸಿದ್ದಾರೆ