ಹೊಸದಿಲ್ಲಿ: ವಿಶ್ವದಲ್ಲೇ ಪ್ರಥಮ ಬಾರಿಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಚಿವೆಯನ್ನು ನೇಮಿಸುವ ಮೂಲಕ ಅಲ್ವೇನಿಯಾ ರಾಷ್ಟ್ರವು ವಿಶ್ವದ ಗಮನವನ್ನು ಸೆಳೆದಿದೆ. “ದಿಯೆಲ್ಲಾ’ ಹೆಸರಿನ ಈ ಎಐ ಸಚಿವೆಯನ್ನು ಭ್ರಷ್ಟಾಚಾರ ಮುಕ್ತ ಆಡಳಿತ ಹಾಗೂ ಸಾರ್ವಜನಿಕ ವೆಚ್ಚದಲ್ಲಿ ಪಾರದರ್ಶಕತೆ ತರುವ ಗುರಿಯೊಂದಿಗೆ ವಿನ್ಯಾಸಗೊಳಿಸಲಾಗಿದೆ.
ದಿಯೆಲ್ಲಾಳ ನೇಮಕದ ಬಗ್ಗೆ ಪ್ರಧಾನಿ ಎಲ್ವಿನ್ ರಾಮಾ ಗುರುವಾರ ಘೋಷಿಸಿದ್ದಾರೆ. ಅಲ್ವೇನಿಯನ್ ಭಾಷೆಯಲ್ಲಿ “ಸೂರ್ಯ’ ಎಂಬ ಅರ್ಥವುಳ್ಳ ದಿಯೆಲ್ಲಾ, ಸರಕಾರದ ಭಾಗವಾಗಿರುತ್ತಾಳೆ ಎಂದು ರಾಮಾತಿಳಿಸಿದ್ದಾರೆ. ಖಾಸಗಿ ಗುತ್ತಿಗೆದಾರರನ್ನು ಒಳಗೊಂಡ ಎಲ್ಲ ಸಾರ್ವಜನಿಕ ಟೆಂಡರ್‌ಗಳ ಮೇಲ್ವಿಚಾರಣೆಯನ್ನು ಈ ಎಐ ಸಚಿವೆ ಮಾಡಲಿದ್ದಾಳೆ. ಕೃತಕ ಬುದ್ಧಿಮತ್ತೆ ನೆರವಿನಿಂದ ಭ್ರಷ್ಟಾಚಾರ ರಹಿತ ಆಡಳಿತ ಜಾರಿಗೊಳಿಸುವ ನಿರೀಕ್ಷೆಯನ್ನು ಎಡ್ರಿನ್ ವ್ಯಕ್ತಪಡಿಸಿದ್ದಾರೆ.
ಸರಕಾರದ ಡಿಜಿಟಲ್ ಆಡಳಿತದ ಭಾಗವಾದ ಇ-ಅಲ್ವೇನಿಯಾದಲ್ಲಿ ಸರಕಾರಿ ಸೇವೆಗಳ ಬಗ್ಗೆ ನಾಗರಿಕರಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಧ್ವನಿ ಸಹಾಯಕಿಯನ್ನಾಗಿ ದಿಯೆಲ್ಲಾಳನ್ನು 2025ರ ಜನವರಿಯಲ್ಲಿ ಮೊದಲ ಬಾರಿ ನೇಮಿಸಲಾಗಿತ್ತು. ಅಂದಿನಿಂದ 36 ಸಾವಿರಕ್ಕೂ ಹೆಚ್ಚು ಡಿಜಿಟಲ್ ದಾಖಲೆಗಳ ಪ್ರಕ್ರಿಯೆಯನ್ನು ನಿಭಾಯಿಸಿರುವ ದಿಯೆಲ್ಲಾ, ಸಾರ್ವಜನಿಕರಿಗಾಗಿ ಒಂದು ಸಾವಿರ ವಿಧದ ಡಿಜಿಟಲ್ ಸೇವೆಗಳನ್ನು ನೀಡಿದ್ದಾಳೆ. ಈಗ ಆಕೆಗೆ ಸಚಿವೆಯಾಗಿ ಭಡ್ತಿ ನೀಡಲಾಗಿದೆ.


























