ಮೂರನೇ ಮಗು ಮಾಡಿಕೊಳ್ಳುವಂತಹ ದಂಪತಿಗಳಿಗೆ ಸಿಹಿ ಸುದ್ದಿ ಒಂದು ದೊರೆತಿದ್ದು ಹೆಣ್ಣು ಮಗು ಜನಿಸಿದರೆ 50,000 ನಗದು ಹಾಗೂ ಗಂಡು ಮಗು ಜನಿಸಿದರೆ ಹಸುವನ್ನು ಬಹುಮಾನವಾಗಿ ನೀಡುವುದಾಗಿ ಸಂಸದರು ಒಬ್ಬರು ಘೋಷಣೆ ಮಾಡಿದ್ದಾರೆ.
ಹೌದು, ತೆಲುಗು ದೇಶಂ ಪಕ್ಷ (TDP)ದ ಸಂಸದ ಕಾಳಿಸೆಟ್ಟಿ ಅಪ್ಪಲನಾಯ್ಡು ಅವರು, 3ನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ಬಂಪರ್ ಕೊಡುಗೆ ಘೋಷಣೆ ಮಾಡಿದ್ದಾರೆ. ಇದು ಆಂಧ್ರಪ್ರದೇಶದಲ್ಲಿ (Andhra Pradesh) ಭಾರೀ ಸಂಚಲನ ಸೃಷ್ಟಿಸಿದೆ.
ಅಂದಹಾಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಒಂದು ವೇಳೆ ಮಹಿಳೆಯೊಬ್ಬರು ಮೂರನೇ ಮಗುವಿಗೆ ಜನ್ಮ ನೀಡಿದರೆ ಮತ್ತು ಅದು ಹೆಣ್ಣು ಮಗುವಾಗಿದ್ದಲ್ಲಿ ಅವರ ವೈಯಕ್ತಿಕ ಖರ್ಚಿನಿಂದ 50,000 ರೂ.ಗಳನ್ನು ನೀಡುವುದಾಗಿ ತಿಳಿಸಿದರು. ಅಲ್ಲದೆ, ಮೂರನೇ ಮಗು ಗಂಡು ಮಗುವಾಗಿದ್ದಲ್ಲಿ ಹಸುವನ್ನು ನೀಡುವುದಾಗಿಯೂ ಅವರು ಘೋಷಿಸಿದ್ದಾರೆ. ಅಪ್ಪಲನಾಯ್ಡು ಅವರ ಈ ಘೋಷಣೆ ರಾಜ್ಯಾದ್ಯಂತ ವೈರಲ್ ಆಗಿದೆ.
ಜನಸಂಖ್ಯೆ ಬೆಳವಣಿಗೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕರೆಗಳ ಮೇರೆಗೆ ಈ ವಿಶೇಷ ಉಡುಗೊರೆಗಳನ್ನು ಘೋಷಣೆ ಮಾಡಲಾಗಿದೆ. ಮಹಿಳೆಯರು ಹೆಚ್ಚು ಮಕ್ಕಳನ್ನು ಹೊಂದಬೇಕೆಂದು ಹೇಳುತ್ತಿದ್ದೇವೆ. ಹೀಗಾಗಿ 3ನೇ ಮಗು ಜನಿಸಿದ್ರೆ ಪ್ರೋತ್ಸಾಹ ಧನ ನೀಡಲು ಮುಂದಾಗಿದ್ದೇವೆ. ಸಂಸದ ಅಪ್ಪಲನಾಯ್ತು ತಿಳಿಸಿದ್ದಾರೆ.